ಬೆಂಗಳೂರು: ತಳ್ಳಿದ್ರೇ ಬಿದ್ದೋಗ್ತಾಳೆ..ಅಂತಹವರ ಮೇಲೆ ಕೇಸ್ ಹಾಕ್ತಾರೆ. ಹೇಡಿಗಳು.. ಗಂಡಸರಾ ಇವರು ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಕೆಂಡಾಮಂಡಲರಾಗಿದ್ದರು. ಡಿಕೆ ಶಿವಕುಮಾರ್ ಇಂದು ಬೆಳ್ಳಂ ಬೆಳಗ್ಗೆ ಸದಾಶಿವನಗರದ ತಮ್ಮ ನಿವಾಸದ ಬಳಿ ತುರ್ತು ಪತ್ರಿಕಾಗೋಷ್ಠಿ ಕರೆದು ಬಿಜೆಪಿ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದರು.
ಸಿದ್ದರಾಮಯ್ಯ ವಿರುದ್ಧ ಕೇಸ್ ಹಾಕಲಿ: ಡಿಕೆ ಶಿವಕುಮಾರ್
ನಮ್ಮ ಸಿದ್ದರಾಮಯ್ಯನವರ ಬೆಂಗಾವಲು ಪಡೆಯ ಸಿಬ್ಬಂದಿ ನಮ್ಮನ್ನು ತಳ್ಳಿ ಬ್ಯಾರಿಕೇಡ್ ದಾಟಿ ಒಳಗೆ ನುಗ್ಗಿದ್ದಾರೆ. ನಮ್ಮ ಕರ್ತವ್ಯ ಕ್ಕೆ ಅಡ್ಡಿಪಡಿಸಿದ್ದಾರೆ ಎಂದು ದೂರು ನೀಡಿದ್ದಾರೆ. ಎಫ್ ಐಆರ್ ದಾಖಲಿಸಿದ್ದಾರೆ. ನಮ್ಮಲ್ಲಿ ದ್ರೋಣ್ ವಿಶುಯಲ್ ಇದೆ. ಯಾವ್ಯಾವ ಪಕ್ಷದವರು ಎಲ್ಲಿದ್ದಾರೆ, ನೂರು ಮೀಟರ್ ಲಿ ಯಾರ್ಯಾರು ಇದ್ರು ಅನ್ನೋದು ದಾಖಲೆ ಇದೆ. ಸಿದ್ದರಾಮಯ್ಯರ ಮೇಲೆ ಕೇಸ್ ಹಾಕಲಿ, ಪೊಲೀಸ್ ಸಿಬ್ಬಂದಿ ಮೇಲೆ ಹಾಕಲಿ. ಅದ್ಬಿಟ್ಡು ಅಭ್ಯರ್ಥಿ ಮೇಲೆ ಯಾಕೆ ಹಾಕ್ತೀರಾ..ಇದಕ್ಕೆ ಮುಖ್ಯಮಂತ್ರಿಗಳು ಉತ್ತರ ಕೊಡ್ಬೇಕು ಎಂದು ಒತ್ತಾಯಿಸಿದರು.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಇಂತಹ ನೀಚ ರಾಜಕಾರಣ ಯಾವತ್ತೂ ನೋಡಿರಲಿಲ್ಲ. ಓದಿರುವ, ಪ್ರಜ್ಞಾವಂತ, ನೊಂದಿರುವ, ಬೆಂದಿರುವ ಹೆಣ್ಣು ಮಗಳನ್ನ ಅಭ್ಯರ್ಥಿ ಮಾಡಿದ್ದೇವೆ.ನಮ್ಮ ಕ್ಯಾಂಡಿಡೇಟ್ ಇನ್ನೂ ಈಗ ಕಣ್ಣು ಬಿಡ್ತಿದ್ದಾರೆ. ಅವರ ಮೇಲೆ ಕೇಸ್ ಹಾಕಿದ್ದಾರೆ. ಕಮಿಷನರ್ ಏನ್ ಮಾಡಿದ್ರೂ ಗೊತ್ತಿದೆ. ಕೈಗೆ ಬಳೆ ಹಾಕ್ಕೊಂಡಿದ್ದಾರೆ. ಅಧಿಕಾರಿಗಳು ಆಗೋಕೆ ನಾಲಾಯಕ್ಗಳು ಎಂದು ಡಿಕೆಶಿ ಕೆಂಡಾಮಂಡಲರಾದರು.
ಮುಂದುವರೆದು ಮಾತನಾಡಿದ ಅವರು, ಮಾಜಿ ಸಿಎಂ ಸಿದ್ದರಾಮಯ್ಯ 11.30ರ ಸುಮಾರಿಗೆ ಬಂದಿದ್ರು. ಟೈಂ ತೆಗೆದುಕೊಂಡು ನಿನ್ನೆ ನಾಮಪತ್ರ ಮಾಡಿದ್ದೇವೆ. ಬಿಜೆಪಿಯ 1200 ಕೇಸ್ಗಳು ದಾಖಲಾಗಿವೆ, ಅದಕ್ಕೆ ಅವರು ಅಷ್ಟು ಆಕ್ರೋಶವಾಗಿರೋದು. ಕಾಂಗ್ರೆಸ್ ಕಾರ್ಯಕರ್ತರ ಮೇಲೆ ೪೦೦ ಕ್ಕೂ ಹೆಚ್ಚು ಕೇಸ್ಗಳನ್ನ ಹಾಕಿದ್ದಾರೆ. ಮೂವರು ಹೆಣ್ಮಕ್ಕಳು ಕಾರ್ಪೊರೇಟರ್ ದೂರು ನೀಡಿದ್ರು. ನಮ್ಮ ಪಕ್ಷದಲ್ಲೇ ಇದ್ರೂ ನಾನು ಕೂಡ ಅಸಹಾಯಕನಾಗಿದ್ದೆ. ಜೆಡಿಎಸ್ ನ ಕಾರ್ಯಕರ್ತರ ಮೇಲೆ ೨೦೦ ಕೇಸ್ ಹಾಕಿದ್ದಾರೆ. ಬಿಬಿಎಂಪಿ ಅಧಿಕಾರಿಗಳು, ಪೊಲೀಸರನ್ನು ವಶಕ್ಕೆ ಇಟ್ಕೊಂಡು ಈ ರೀತಿ ಮಾಡ್ತಿದ್ದಾರೆ. ಹೆದರಿಸಿ, ಬೆದರಿಸ್ತಾರೆ ಎಂದು ಆರೋಪಿಸಿದರು.
ಬಿಜೆಪಿ ವಿರುದ್ಧ ಕಾಂಗ್ರೆಸ್ ಎಲೆಕ್ಷನ್ ಕಮಿಷನ್ ಗೆ ದೂರು
ಅಭ್ಯರ್ಥಿ ಒಂದು ಕಡೆಯಿಂದ, ನಾನು ಒಂದು ಕಡೆಯಿಂದ ಬಂದಿದ್ದೇವೆ. ನಾಮಿನೇಷನ್ ಫೈಲ್ ಮಾಡೋಕೆ ಹೋದ ಹೆಣ್ಮಗಳ ಮೇಲೆ ಕೇಸ್ ಹಾಕ್ತೀರಾ ಅಂದ್ರೆ ಇದಕ್ಕಿಂದ ನೀಚ, ಸಣ್ಣತನ ಬೇರೋಂದು ಇಲ್ಲ. ಇದಕ್ಕೆಲ್ಲ ನಾವು ಹೆದರುತ್ತೇವೆ ಅನ್ಕೊಂಡ್ರೇ ಭ್ರಮೆ. ನಾವು ಹೆದರಿಕೊಂಡು ಬೇಲ್ ತಗೋತಿವಿ ಅನ್ಕೊಂಡ್ರೇ ನಿಮ್ಮ ಮೂರ್ಖತನ. ಎಲೆಕ್ಷನ್ ಕಮಿಷನ್ಗೆ ದೂರು ಕೊಡ್ತೇವೆ. ಯಾಕೆ ಸಿದ್ದರಾಮಯ್ಯರ ಮೇಲೆ ಎಫ್ಐಆರ್ ಹಾಕಿಲ್ಲ, ಸಚಿವರುಗಳು ಬಂದಿರಲಿಲ್ವ, ನಾನು ಬಂದಿರಲಿಲ್ವಾ, ಜನತಾ ದಳದವರು ಬಂದಿರಲಿಲ್ವಾ. ಯಾಕ್ ಎಫ್ಐಆರ್ ಹಾಕಿಲ್ಲ, ನಾವು ಇದನ್ನ ಸುಮ್ನೆ ಬಿಡಲ್ಲ. ಎಫ್ಐಆರ್ ಮಾಡಿರುವ ಸರ್ಕಲ್ ಇನ್ಸ್ಪೆಕ್ಟರ್ ವರ್ಗಾವಣೆ ಮಾಡಬೇಕು ಎಂದು ಒತ್ತಾಯಿಸಿದರು.
ಹೇಡಿತನದ ರಾಜಕಾರಣ ಇದು. ಚುನಾವಣೆ ಮಾಡಬಾರದು, ಹೆದರಿಕೊಂಡು ಮನೆಯಲ್ಲಿ ಕೂತಿರಬೇಕು ಅನ್ನೋ ಉದ್ದೇಶದಿಂದ ಈ ರೀತಿ ಮಾಡಿದ್ದಾರೆ. ಇಂತಹ ಕುತಂತ್ರದ ಅಭ್ಯರ್ಥಿಯನ್ನು ನಾವೇ ಬೆಳೆಸಿದ್ದೇವೆ. ನಾವು ತಪ್ಪು ಮಾಡಿದ್ದೇವೆ ನಿಜ, ಅದಕ್ಕೆ ನೋವಿದೆ. ನಮಗೆ ಮಾತ್ರವಲ್ಲ, ಜೆಡಿಎಸ್ ಬಿಜೆಪಿಯವರಿಗೂ ನೋವಿದೆ. ಕಾಂಗ್ರೆಸ್ಗೆ ಯಾರು ಬೇಕಾದರೂ ಬರಬಹುದು. ನಾನ್ಯಾರನ್ನೂ ಆಪರೇಷನ್ ಮಾಡಲ್ಲ. ಎಲ್ಲರನ್ನೂ ಒಟ್ಟಾಗಿ ತೆಗೆದುಕೊಂಡು ಹೋಗ್ತೇವೆ. ಕಾಂಗ್ರೆಸ್, ಜೆಡಿಎಸ್ , ಆರ್ ಎಸ್ ಎಸ್ ಎಲ್ಲರದ್ದೂ ಒಂದೇ ಗುರಿ… ಆ ಅಭ್ಯರ್ಥಿಯನ್ನ ಸೋಲಿಸೋದು ಎಂದು ಪರೋಕ್ಷವಾಗಿ ಮುನಿರತ್ನ ವಿರುದ್ಧ ಮಾತನಾಡಿದರು.
ಡಿಜೆಹಳ್ಳಿ ಗಲಭೆ ಪ್ರಕರಣದಲ್ಲಿ ಯಾವ ಕಾಂಗ್ರೆಸ್ ಲೀಡರ್ ಭಾಗಿಯಾಗಿಲ್ಲ.ಕಾಂಗ್ರೆಸ್ ಗೆ ಮಸಿ ಬಳಿಯುವ ಕೆಲಸ ಮಾಡಿದ್ದಾರೆ.ಇದನ್ನ ಕಾಂಗ್ರೆಸ್ ಹೋರಾಟ ಮಾಡುತ್ತದೆ. ರಾಜಕೀಯ ಹಾಗೂ ಕಾನೂನಾತ್ಮಕವಾಗಿ ಹೋರಾಟ ಮಾಡಲಾಗುತ್ತದೆ.ಶಾಸಕರ ಹೇಳಿಕೆ ಬಗ್ಗೆ ಜಾಸ್ತಿ ಮಾತನಾಡಲ್ಲ. ಪಕ್ಷದಲ್ಲಿ ಎಲ್ಲವೂ ಚರ್ಚಿಸಲಾಗುತ್ತದೆ ಎಂದರು.