ಐಎಎಸ್ ಅಧಿಕಾರಿಯಾಗಬೇಕು ಎಂಬ ಹಂಬಲವಿದ್ದ ಈಕೆ ಮಿಂಚಿದ್ದು ನಟಿಯಾಗಿ!

0
176

ಈ ಬದುಕೇ ನಿಜಕ್ಕೂ ತೀರಾ ವಿಚಿತ್ರವಾದುದು. ಯಾಕೆಂದರೆ ನಾವು ಬಯಸಿದ್ದು ಒಂದು, ಆಗುವುದು ಇನ್ನೊಂದು. ಕೆಲವೊಮ್ಮೆ ನಾವು ಅಂದುಕೊಂಡಿದ್ದು ಆಗದಿದ್ದರೂ ಇನ್ನೊಂದು ಕ್ಷೇತ್ರ ಕೈ ಹಿಡಿದೇ ಹಿಡಿಯುತ್ತದೆ. ಅದಕ್ಕೆ ಕರಾವಳಿ ಕುವರಿ ಅದ್ವಿತಿ ಶೆಟ್ಟಿಯೇ ಉತ್ತಮ ಉದಾಹರಣೆ. ಐಎಎಸ್ ಅಧಿಕಾರಿ ಆಗಬೇಕು ಎಂಬ ಹಂಬಲ ಹೊಂದಿದ್ದ ಮಂಗಳೂರಿನ ಬೆಡಗಿ ಮಿಂಚಿದ್ದು ಬಣ್ಣದ ಲೋಕದಲ್ಲಿ.  ಮಿಸ್ಟರ್ ಆಂಡ್ ಮಿಸ್ಸಸ್ ರಾಮಾಚಾರಿ ಚಿತ್ರದ ಮೂಲಕ ಮಿಂಚಿದ ಅವಳಿ ಸಹೋದರಿಯರಲ್ಲಿ ಅದ್ವಿತಿ ಶೆಟ್ಟಿ ಒಬ್ಬರು. ಸದ್ಯ ಅದ್ವಿತಿ ಅವರು ಬಣ್ಣದ ಲೋಕವನ್ನೇ ಆರಿಸಿಕೊಂಡಿದ್ದು ಇಲ್ಲಿ ಬ್ಯುಸಿಯಾಗಿದ್ದಾರೆ. ಬಾಲ್ಯದಿಂದಲೂ ಸಾಂಸ್ಕ್ರತಿಕ ಚಟುವಟಿಕೆಗಳಲ್ಲಿ ಗುರುತಿಸಿಕೊಂಡ ಅದ್ವಿತಿಗೆ ನೃತ್ಯವೆಂದರೆ ಕ್ರೇಜ್. ಶಾಲಾ ದಿನಗಳಿಂದಲೂ ಆಕೆ ನೃತ್ಯದಲ್ಲಿ ತಮ್ಮನ್ನು ತಾವು ಸಕ್ರಿಯರಾಗಿ ತೊಡಗಿಸಿಕೊಂಡಿದ್ದರು. ಇದರ ಜೊತೆಗೆ ಶಾಸ್ತ್ರೋಕ್ತವಾಗಿ ನೃತ್ಯಕಲೆಯನ್ನು ಕಲಿತಿರುವ ಈಕೆ ಒಂದಷ್ಟು ವೇದಿಕೆಗಳಲ್ಲಿ ಹೆಜ್ಜೆ ಹಾಕಿದ್ದಾರೆ.

ಮುಂದೆ ಜೀ ಕನ್ನಡದ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ರಿಯಾಲಿಟಿ ಶೋನಲ್ಲಿ ಸ್ಪರ್ಧಿಸುವ ಅವಕಾಶ ದೊರಕಿತು. ಅಲ್ಲಿ ಭಾಗವಹಿಸಿದ ಅದ್ವಿತಿ ಟಾಪ್ ಸಿಕ್ಸ್ ಒಳಗೆ ಬಂದಿದ್ದರು. ಮುಂದೆ ಮಂಗಳೂರಿನ ಓಷನ್ ತಂಡದ ಜೊತೆ ಸೇರಿದ ಅದ್ವಿತಿ ಕಥಕ್ ಕಲಿತು ಬಿಟ್ಟರು. ಇದರ ಜೊತೆಗೆ ಶಿವ ತಾಂಡವ, ಕೃಷ್ಣನ ಕಥೆ, ರಾಮಾಯಣ ಮೊದಲಾದ ಮೈಥಾಲಜಿ ಹೊಂದಿದ ನೃತ್ಯ ಪ್ರಕಾರಗಳನ್ನು ಮಾಡಿ ಆಕೆ ಸೈ ಎನಿಸಿಕೊಂಡಿದ್ದರು. ತದ ನಂತರ ಇಂಡಿಯಾ ಗಾಟ್ ಟ್ಯಾಲೆಂಟ್ , ಈಟಿವಿ ಕನ್ನಡದ ಸೂಪರ್ ಡ್ಯಾನ್ಸ್, ತೆಲುಗು ಈ ಟಿವಿಯಲ್ಲಿ ಅಧುರ್ಸ್ ಡ್ಯಾನ್ಸ್ ಶೋ ವಿನಲ್ಲಿ ಅದ್ವಿತಿ ಹೆಜ್ಜೆ ಹಾಕಿದ್ದರು.

ಮುಂದೆ ಮಾಡೆಲಿಂಗ್ ಲೋಕದಲ್ಲಿ ಗುರುತಿಸಿಕೊಂಡಿದ್ದ ಅದ್ವಿತಿ ಮೊದಲ ಬಾರಿ ಬಣ್ಣ ಹಚ್ಚಿದ್ದು ಮಿಸ್ಟರ್ ಆ್ಯಂಡ್ ಮಿಸೆಸ್ ರಾಮಚಾರಿ ಸಿನಿಮಾಕ್ಕಾಗಿ‌. ಅದರಲ್ಲಿ ತನ್ನ ಅವಳಿ ತಂಗಿ ಅಶ್ವಿತಿ ಜೊತೆ ನಟಿಸದ್ದ ಅದ್ವಿತಿ ಇದೀಗ ಬಣ್ಣದ ಲೋಕದಲ್ಲಿ ಫುಲ್ ಬ್ಯುಸಿ. ಎಚ್ ಆರ್ ಕೆಲಸಕ್ಕೆ ವಿದಾಯ ಹೇಳಿ ನಟನಾ ರಂಗದಲ್ಲಿ ಮುಂದುವರಿಯುವ ನಿರ್ಧಾರ ಮಾಡಿದ ಅದ್ವಿತಿ ಮುಂದೆ ಪ್ರಣಯರಾಜ ಶ್ರೀನಾಥ್ ನಿರ್ದೇಶನದ ಸುಳಿ ಸಿನಿಮಾದಲ್ಲಿಯೂ ಅಭಿನಯಿಸಿದ್ದರು‌‌.

ಸುಳಿ ಸಿನಿಮಾದಲ್ಲಿ ಶ್ರೀನಾಥ್ ಮಗಳಾಗಿ ನಟಿಸಿದ ಅದ್ವಿತಿ ಮುಂದೆ ರವಿಕಿರಣ್ ನಿರ್ದೇಶನದ ಗಿರಿಗಿಟ್ಲೆ ಸಿನಿಮಾದಲ್ಲಿ ನಾಯಕಿಯಾಗಿಯೂ ನಟಿಸಿದ್ದರು. ತದ ನಂತರ ಕಿರುತೆರೆಯತ್ತ ಮುಖ ಮಾಡಿದ ಅದ್ವಿತಿ ಶೆಟ್ಟಿ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಎರಡು ಕನಸು ಧಾರಾವಾಹಿಯಲ್ಲಿ ನಾಯಕಿ ಸಹನಾ ಆಗಿ ಕಾಣಿಸಿಕೊಂಡಿದ್ದರು. ವಯಸ್ಸಿಗೂ ಮೀರಿದ ಪಾತ್ರಕ್ಕೆ ಜೀವ ತುಂಬುವಲ್ಲಿ ಅದ್ವಿತಿ ಯಶಸ್ವಿಯಾಗಿದ್ದು ಇದೀಗ ಮತ್ತೆ ಬೆಳ್ಳಿತೆರೆಯಲ್ಲಿ ಬ್ಯುಸಿಯಾಗಿದ್ದಾರೆ.

ಕಾರ್ಮೋಡ ಸರಿದು,ಫ್ಯಾನ್, ಓ ಪ್ರೇಮವೇ ,ದೊಡ್ಮನೆ ಹುಡುಗ ಸಿನಿಮಾಗಳಲ್ಲಿ ನಟಿಸಿರುವ ಅದ್ವಿತಿ ಅವರಿಗೆ ಪರಭಾಷೆಯಿಂದಲೂ ಅವಕಾಶಗಳು ಅರಸಿ ಬರುತ್ತಿದೆ. ನಟನೆಯ ಹೊರತಾಗಿ ಜಾಹೀರಾತುಗಳಲ್ಲಿಯೂ ರೂಪದರ್ಶಿಯಾಗಿ ಮಿಂಚಿರುವ ಅದ್ವಿತಿ ಮಿಸ್ ಗ್ರಾಂಜುವರ್ , ಮಿಸ್ ಮಂಗಳೂರು ಕಿರೀಟಗಳನ್ನು ಮುಡಿಗೇರಿಸಿಕೊಂಡಿದ್ದಾರೆ.
– ಅಹಲ್ಯಾ

LEAVE A REPLY

Please enter your comment!
Please enter your name here