ರಕ್ಷಿತ್ ಶೆಟ್ಟಿ ಅಭಿನಯದ ‘ ಅವನೇ ಶ್ರೀಮನ್ನಾರಾಯಣ’ ಸಿನಿಮಾ ನಾಳೆ ಬಿಡುಗಡೆಯಾಗುತ್ತಿದೆ. ಇಂದು ರಾತ್ರಿ ಸೆಲಬ್ರಿಟಿಗಳಿಗಾಗಿ ವಿಶೇಷ ಪ್ರದರ್ಶನ ಕೂಡಾ ಏರ್ಪಡಿಸಿದ್ದು ಸ್ವತ: ರಕ್ಷಿತ್ ಶೆಟ್ಟಿ ಸ್ಯಾಂಡಲ್ವುಡ್ ಗಣ್ಯರಿಗೆ ಈ ಶೋ ನೋಡಲು ಆಹ್ವಾನಿಸಿದ್ದಾರೆ.
ಇನ್ನು ‘ಹ್ಯಾಂಡ್ಸ್ ಅಪ್’ ಹಾಡು ಬಿಡುಗಡೆಯಾದಾಗಿನಿಂದ ಸಖತ್ ಕ್ರೇಜ್ ಸೃಷ್ಟಿಸಿದೆ. ಸಾಮಾನ್ಯರೂ, ಸೆಲಬ್ರಿಟಿಗಳು ಸೇರಿ ಎಷ್ಟೋ ಮಂದಿ ‘ಹ್ಯಾಂಡ್ಸ್ ಅಪ್’ ಹಾಡಿನ ಸಿಗ್ನೇಚರ್ ಸ್ಟೆಪ್ ಹಾಕಿ ಅದನ್ನು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡುತ್ತಿದ್ದಾರೆ. ಸಿನಿಮಾ ಎಷ್ಟರ ಮಟ್ಟಿಗೆ ಕ್ರೇಜ್ ಹುಟ್ಟುಹಾಕಿದೆ ಎಂದರೆ ಕನ್ನಡ ಮಾತ್ರವಲ್ಲ, ಕಾಲಿವುಡ್, ಟಾಲಿವುಡ್, ಬಾಲಿವುಡ್, ಮಾಲಿವುಡ್ ಹಾಗೂ ವಿದೇಶಿಗರು ಕೂಡಾ ಶ್ರೀಮನ್ನಾರಾಯಣನ ಕೃಪೆಗೆ ಪಾತ್ರರಾಗಿ ಹ್ಯಾಂಡ್ಸ್ ಅಪ್ ಹಾಡಿಗೆ ಹೆಜ್ಜೆ ಹಾಕಿದ್ದಾರೆ.
ಇದೀಗ ವಯೋವೃದ್ಧರೊಬ್ಬರು ಕೂಡಾ ಈ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಈ ತಾತನಿಗೆ ಸುಮಾರು 80 ವರ್ಷ ವಯಸ್ಸಾಗಿರಬಹುದು. ಈ ವಿಡಿಯೋ ಇದೀಗ ವೈರಲ್ ಆಗುತ್ತಿದೆ. ತಾತನ ಎನರ್ಜಿಗೆ ನೆಟಿಜನ್ಸ್ ಖುಷಿ ವ್ಯಕ್ತಪಡಿಸಿದ್ದಾರೆ. ‘ತಾತನೇ ಹ್ಯಾಂಡ್ಸ್ ಅಪ್ ಚಾಲೆಂಜ್ ತೆಗೆದುಕೊಂಡ ಮೇಲೆ ಸಿನಿಮಾ ಹಿಟ್ ಆಗುವುದರಲ್ಲಿ ನೋ ಡೌಟ್’ ಎನ್ನುತ್ತಿದ್ದಾರೆ ಅಭಿಮಾನಿಗಳು.