ಮೋದಿ ಸರ್ಕಾರದ ನೀತಿಗಳಿಂದ ಬೇಸತ್ತು ರಾಜೀನಾಮೆ ನೀಡಿದ ಸೆಸಿಕಾಂತ ಬರೆದ ಪತ್ರದಲ್ಲೇನಿದೆ ಗೊತ್ತಾ..?!

0
1122

ಬಿಜೆಪಿ ಸರ್ಕಾರದ ಸರ್ವಾಧಿಕಾರಿ ನೀತಿಗಳಿಂದ ಬೇಸತ್ತು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸೆಸಿಕಾಂತ್ ಸೆಂಥಿಲ್ ಅವರು ಐಎಎಸ್ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ನನ್ನ ಸೈದ್ದಾಂತಿಕ ನಿಲುವುಗಳು ನನ್ನನ್ನು ಹುದ್ದೆಯಲ್ಲಿ ಮುಂದುವರೆಯುವುದಕ್ಕೆ ಬೀಡುತ್ತಿಲ್ಲ ಎಂದಿರುವ ಸೆಸಿಕಾಂತ ಸೆಂಥಿಲ್ ಅವರು ತಮ್ಮ ರಾಜೀನಾಮೆಯ ಉದ್ದೇಶವನ್ನು ರಾಜ್ಯದ ಜನತೆಗೆ ತಿಳಿಸುವ ಉದ್ದೇಶದಿಂದ ಪತ್ರವೊಂದನ್ನು ಬರೆದಿದ್ದಾರೆ. ಅವರು ಬರೆದಿರುವ ಪತ್ರದ ಮನಮಿಡಿಯುವ ಸಾಲುಗಳು ಇಲ್ಲಿವೆ ನೋಡಿ.

ಪ್ರಿಯ ಸ್ನೇಹಿತರೇ,

ನಾನು ಇಂದು ನನ್ನ ಭಾರತೀಯ ಆಡಳಿತಾತ್ಮಕ ಸೇವೆಗೆ ರಾಜೀನಾಮೆ ಸಲ್ಲಿಸಿದ್ದೇನೆ. ನನ್ನ ರಾಜೀನಾಮೆಗೆ ವೈಯಕ್ತಿಕ ಕಾರಣಗಳಿವೆಯೇ ಹೊರತು ಯಾವುದೇ ವೈಮನಸ್ಸಿಲ್ಲ. ನನ್ನ ಸದ್ಯದ ಮಂಗಳೂರು ಡಿಸಿ ಪೋಸ್ಟ್‍ಗೂ ರಾಜೀನಾಮೆಗೂ ಸಂಬಂಧವಿಲ್ಲ. ದಕ್ಷಿಣ ಕನ್ನಡ ಜಿಲ್ಲೆಯ ಜನ ಮತ್ತು ಅಧಿಕಾರಿಗಳಿಗೆ ನಾನು ಈ ಸಂದರ್ಭದಲ್ಲಿ ಕ್ಷಮೆ ಕೋರಲು ಇಚ್ಚಿಸುತ್ತೇನೆ. ಅವರ ಜತೆ ಕೆಲಸ ಮಾಡಿದ್ದು ಅವಿಸ್ಮರಣೀಯ. ಅರ್ಧದಲ್ಲೇ ರಾಜೀನಾಮೆ ನೀಡಿ ಹೋಗುತ್ತಿರುವುದಕ್ಕೆ ಅವರಲ್ಲಿ ಕ್ಷಮೆ ಯಾಚಿಸುತ್ತೇನೆ.

ದೇಶದ ಸಂವಿಧಾನದ ಮೂಲ ಆಶಯಗಳು ಹಾದಿ ತಪ್ಪುತ್ತಿರುವ ಈ ದಿನಗಳಲ್ಲಿ ನಾನು ಭಾರತೀಯ ಆಡಳಿತಾತ್ಮಕ ಸೇವೆಯಲ್ಲಿ ಮುಂದುವರೆಯುವುದು ನನಗೆ ಸಮಂಜಸವೆನಿಸುತ್ತಿಲ್ಲ. ವಿವಿಧತೆಯಲ್ಲಿ ಏಕತೆಯನ್ನು ಕಾಣುವ ನಮ್ಮ ಪ್ರಜಾಪ್ರಭುತ್ವದ ತಳಹದಿ ಕುಸಿಯುತ್ತಿರುವಾಗ ನೈತಿಕವಾಗಿ ನನಗೆ ಈ ವೃತ್ತಿಯಲ್ಲಿ ಇರಲು ಇಷ್ಟವಾಗುತ್ತಿಲ್ಲ. ಮುಂದಿನ ದಿನಗಳಲ್ಲಿ ಈ ವಿಷಮಯ ಸ್ಥಿತಿ ಇನ್ನಷ್ಟು ಉಲ್ಬಣವಾಗಲಿದೆ.

ನಾನು ಐಎಎಸ್ ವೃತ್ತಿಯ ಆಚೆಗಿದ್ದರೆ ದೇಶದ ಅಭಿವೃದ್ಧಿಗಾಗಿ, ಜನರಿಗಾಗಿ ಇನ್ನಷ್ಟು ಹೆಚ್ಚು ಕೆಲಸ ಮಾಡಬಹುದು. ಎಲ್ಲಾ ಅದರಪಾಡಿಗೆ ಆಗಲಿ ಎಂದು ಸುಮ್ಮನಾಗಲು ಇನ್ನು ಸಾಧ್ಯವಿಲ್ಲ. ಇನ್ನೊಮ್ಮೆ ನನ್ನ ಜತೆ ಕೆಲಸ ಮಾಡಿದ ಎಲ್ಲರಿಗೂ, ರಾಜ್ಯದ ಜನರಿಗೂ ನಾನು ಧನ್ಯವಾದ ಅರ್ಪಿಸುತ್ತೇನೆ. ನನ್ನ ಸಹೋದ್ಯೋಗಿಗಳು ಮತ್ತು ಅವರ ಕುಟುಂಬಸ್ಥರು ಸಂತಸದಿಂದಿರಲಿ ಎಂದು ಆಶಯಿಸುತ್ತೇನೆ.

ಎಸ್. ಸಸಿಕಾಂತ್ ಸೆಂತಿಲ್

LEAVE A REPLY

Please enter your comment!
Please enter your name here