ಕನ್ನಡ ಚಿತ್ರರಂಗದ ಪಾಲಿಗೆ ಇದೀಗ ಮತ್ತೆ ಸುವರ್ಣಯುಗ ಪ್ರಾರಂಭವಾಗಿದೆ. ಹೌದು, ನಿನ್ನೆ ಬಿಡುಗಡೆಯಾದ ರಾಷ್ಟ್ರೀಯ ಪ್ರಶಸ್ತಿಗಳ ಪಟ್ಟಿಯಲ್ಲಿ ಕರ್ನಾಟಕದ 11 ಚಿತ್ರಗಳು ರಾಷ್ಟ್ರೀಯ ಪುರಸ್ಕಾರಕ್ಕೆ ಭಾಜನವಾಗಿವೆ. ಈ ಬಾರಿಯ ವೈಶಿಷ್ಟ್ಯತೆ ಎಂದರೆ, ‘ಅತ್ಯುತ್ತಮ ಮಕ್ಕಳ ಚಿತ್ರ’ ಎಂಬ ಪುರಸ್ಕಾರ ಕನ್ನಡದ ‘ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು’ ಚಿತ್ರಕ್ಕೆ ಲಭಿಸಿದೆ.
ಇನ್ನು 80 ದಶಕದಲ್ಲಿ ಇಡೀ ಭಾರತೀಯ ಚಿತ್ರರಂಗವನ್ನ ತನ್ನತ್ತ ನೋಡುವಂತೆ ಮಾಡಿದ್ದ ಕನ್ನಡ ಚಿತ್ರರಂಗ ಈಗ ಮತ್ತೆ ರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ವಿಭಿನ್ನ ಶೈಲಿಯ ಕಥಾಹಂದರಗಳ ಮೂಲಕ ಪ್ರೇಕ್ಷಕರನ್ನು ಮೋಡಿ ಮಾಡುತ್ತಿದ್ದ, ಪುಟ್ಟಣ್ಣ ಕಣಗಾಲ್, ಸಿದ್ದಲಿಂಗಯ್ಯ, ಗೀತಪ್ರೀಯ, ರಾಜೇಂದ್ರ ಸಿಂಗ್ ಬಾಬು, ಎಸ್.ಕೆ ಭಗವಾನ್, ಸುನೀಲ್ ಕುಮಾರ್ ದೇಸಾಯಿ ಅವರಂತಹ ಶ್ರೇಷ್ಠ ನಿರ್ದೇಶಕರನ್ನು ಕನ್ನಡ ಚಿತ್ರರಂಗ ಕಂಡಿದೆ. ಈ ಶ್ರೇಷ್ಠ ನಿರ್ದೇಶಕರು ಹಾಕಿಕೊಟ್ಟ ಸಾಲಿನಲ್ಲೇ ಸಾಗುತ್ತಿದ್ದಾರೆ ಸ.ಹಿ.ಪ್ರಾ.ಶಾಲೆ ಕಾಸರಗೋಡು ಚಿತ್ರದ ನಿರ್ದೇಶಕ ರಿಷಬ್ ಶೆಟ್ಟಿ.
ಹೌದು, ಸದಾ ಹೊಸತನದೊಂದಿಗೆ ಪ್ರೇಕ್ಷಕರ ಮುಂದೆ ಬರುವ ರಿಷಬ್ ಶೆಟ್ಟಿ ಇತ್ತೀಚಿನ ಎಲ್ಲ ಕನ್ನಡದ ನಿರ್ದೇಶಕರಿಗಿಂತ ಭಿನ್ನವಾಗಿ ನಿಲ್ಲುತ್ತಾರೆ. ಇತ್ತೀಚಿನ ದಶಕಗಳಲ್ಲಿ ಮಕ್ಕಳ ಚಿತ್ರಗಳು ಯಶಸ್ಸು ಕಾಣುತ್ತಿಲ್ಲ ಎನ್ನುವಾಗಲೇ, ‘ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು’ ಎಂಬ ವಿಭಿನ್ನ ಶೈಲಿಯ ಚಿತ್ರದ ಮೂಲಕ ಕನ್ನಡಿಗರ ಮನಗೆದ್ದರು. ಒಂದು ಕಥೆಯನ್ನು ಒಂದು ಚೌಕಟ್ಟಿಗೆ ಸಿಗದಂತೆ ಮತ್ತು ಕಥೆಯ ಬಿಂದು ಚದುರದಂತೆ ಕಟ್ಟಿ ಕೊಡುವುದು ತ್ರಾಸದಾಯಕ ಕೆಲಸ. ಆದರೆ ಇದರಲ್ಲಿ ರಿಷಬ್ ಶೆಟ್ಟಿ ಸಂಪೂರ್ಣವಾಗಿ ಗೆದ್ದಿದ್ದಾರೆ. ಗಡಿನಾಡಿನ ಸಮಸ್ಯೆಗಳ ಪರಿಧಿಯಲ್ಲಿಯೂ ನಿಲ್ಲದೆ ಎಲ್ಲ ವರ್ಗದ ಪ್ರೇಕ್ಷಕರನ್ನೂ ಆವರಿಸಿಕೊಂಡಿರೋ ಈ ಚಿತ್ರ ಪಕ್ಕಾ ಎಂಟರ್ ಟೈನರ್ ಎಂಬುದರಲ್ಲಿ ಎರಡು ಮಾತಿಲ್ಲ. ಇಂತಹ ಉತ್ತಮ ಕಥಾಹಂದರ ಹೊಂದಿರುವ ಚಿತ್ರಕ್ಕೆ ರಾಷ್ಟ್ರೀಯ ಪುರಸ್ಕಾರ ಲಭಿಸಿರುವುದು ನಮ್ಮೆಲ್ಲರಿಗೂ ಹೆಮ್ಮೆಯ ಸಂಗತಿ. ಚಿತ್ರ ತಂಡಕ್ಕೆ ಶುಭಾಶಯಗಳು.