ಸಂಪತ್, ಜಾಕೀರ್ ಉಚ್ಚಾಟನೆಗೆ ಅಖಂಡ ಒತ್ತಾಯ: ಶಿಸ್ತು ಸಮಿತಿಗೆ ಶಿಫಾರಸ್ಸು ಮಾಡಿದ ಡಿಕೆ

0
42

ಬೆಂಗಳೂರು: ಸಂಪತ್ ರಾಜ್ ನನ್ನು ಪಕ್ಷದಿಂದ ಉಚ್ಚಾಟಿಸುವಂತೆ ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಮನವಿ ಮಾಡಿದ್ದು, ಅವರ ಮನವಿಯನ್ನು ಪಕ್ಷದ ಶಿಸ್ತು ಸಮಿತಿಗೆ ನೀಡುತ್ತೇನೆ. ಶಿಸ್ತು ಸಮಿತಿ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲಿದೆ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ. ಸದಾಶಿವನಗರದಲ್ಲಿನ ಡಿಕೆ ಶಿವಕುಮಾರ್ ನಿವಾಸಕ್ಕೆ ಶನಿವಾರ ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಭೇಟಿ ಮಾಡಿ ಮಾತುಕತೆ ನಡೆಸಿದರು. ಭೇಟಿ ವೇಳೆ ತಮ್ಮ ನಿವಾಸಕ್ಕೆ ಬೆಂಕಿ ಹಚ್ಚಿದ ಪ್ರಕರಣ ಸಂಬಂಧ ಸಂಪತ್ ರಾಜು ವಿರುದ್ಧ ಕ್ರಮಕ್ಕೆ ಒತ್ತಾಯಿಸಿದ್ದಾರೆ.

ಬಳಿಕ ಮಾತನಾಡಿದ ಡಿಕೆ ಶಿವಕುಮಾರ್, ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಅವರು ಇಂದು ನನ್ನನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದಾರೆ. ನಾನು ಅವರ ಮನವಿ ಆಲಿಸಿದ್ದೇನೆ. ಗಲಭೆ ಪ್ರಕರಣದಲ್ಲಿ ಅವರಿಗೆ ಅನ್ಯಾಯವಾಗಿರುವುದು ಗೊತ್ತಿದೆ. ಈ ವಿಚಾರವಾಗಿ ನನಗೂ ತುಂಬಾ ನೋವಾಗಿದೆ. ನಮ್ಮ ಶಾಸಕರು, ಸಂಪತ್ ರಾಜ್ ಅವರ ಮೇಲೂ ಅನುಮಾನ ವ್ಯಕ್ತಪಡಿಸಿದ್ದಾರೆ. ಜೊತೆಗೆ ಅವರನ್ನು ಪಕ್ಷದಿಂದ ಉಚ್ಛಾಟಿಸುವಂತೆ ಪತ್ರ ನೀಡಿದ್ದಾರೆ. ಈ ಪತ್ರವನ್ನು ಪಕ್ಷದ ಶಿಸ್ತು ಸಮಿತಿಗೆ ತಲುಪಿಸುತ್ತೇನೆ’ ಎಂದು ತಿಳಿಸಿದರು.

ಮೂರು-ನಾಲ್ಕು ದಿನದಿಂದ ಭೇಟಿಗೆ ಸಮಯ ಕೇಳಿದ್ದರು. ನಾನು ಇವತ್ತು ಬರೋಕೆ ಹೇಳಿದ್ದೆ. ಅವರ ಸಮಸ್ಯೆ ಕೇಳಿದೆ. ಭಾರೀ ನೋವಲ್ಲಿ ಇದ್ದಾರೆ. ಅವರ ನೋವು ನನಗೆ ಅರ್ಥ ಆಗುತ್ತೆ. ನಾನೇ ಅವರ ಸ್ಥಾನದಲ್ಲಿದ್ದರೂ ನೋವಾಗುತ್ತಿತ್ತು ಎಂದು ಡಿಕೆಶಿ ಹೇಳಿದರು.

ಶಿಸ್ತು ಸಮಿತಿಯಿಂದ ಸೂಕ್ತ ಕ್ರಮ

ಗಲಭೆ ಪ್ರಕರಣದಲ್ಲಿ ಆರೋಪಿಯಾಗಿ ಬಂಧಿತರಾಗಿರುವ ಸಂಪತ್ ರಾಜ್ ಅವರ ವಿರುದ್ಧ ಪಕ್ಷದ ಅಧ್ಯಕ್ಷರಾಗಿ ನೀವು ಯಾವ ತೀರ್ಮಾನ ಕೈಗೊಳ್ಳುತ್ತೀರಿ ಎಂಬ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು, ‘ಯಾವುದೇ ಒಬ್ಬ ವ್ಯಕ್ತಿ ಆರೋಪಿಯಾದ ಮಾತ್ರಕ್ಕೆ ಆತನ ಮೇಲೆ ನಾನು ಏಕಾಏಕಿ ಕ್ರಮ ಜರುಗಿಸಲು ಆಗುವುದಿಲ್ಲ. ಡಿ.ಜೆ ಹಳ್ಳಿ ಹಾಗೂ ಕೆ.ಜಿ ಹಳ್ಳಿ ಗಲಭೆ ಪ್ರಕರಣದ ತನಿಖೆ ಇನ್ನು ನಡೆಯುತ್ತಿದೆ. ಸಂಪತ್ ರಾಜ್ ಅವರ ಮೇಲಿನ ಆರೋಪ ಸಾಬೀತುಪಡಿಸಲು ಸಾಕ್ಷ್ಯಾಧಾರಗಳನ್ನು ಒದಗಿಸಬೇಕಿದೆ. ಇದೆಲ್ಲವೂ ನ್ಯಾಯಾಲಯದಲ್ಲಿ ತೀರ್ಮಾನ ಆಗಬೇಕಿದೆ. ನಾಳೆ ಯಾರಾದರೂ ಏನಾದರೂ ಹೇಳಿಕೆ ಕೊಟ್ಟರೆ ಅದರ ಆಧಾರದ ಮೇಲೆ ನಾನು ಕ್ರಮ ಕೈಗೊಳ್ಳಲು ಸಾಧ್ಯವೇ? ಎಂದು ಮರುಪ್ರಶ್ನಿಸಿದರು.

ಇದೇ ವೇಳೆ ಮಾತನಾಡಿದ ಅಖಂಡ, ಮಾಜಿ ಮೇಯರ್ ಸಂಪತ್ ರಾಜ್, ಜಾಕೀರ್ ರನ್ನ ಪಕ್ಷದಿಂದ ಉಚ್ಚಾಟಿಸಬೇಕು ಅಂತ ಹೇಳಿದ್ದೀನಿ. ನ್ಯಾಯ ಸಿಗುತ್ತೆ ಅನ್ನೋ ಭರವಸೆ ಇದೆ. ಎಲ್ಲವನ್ನೂ ಹೇಳಿದ್ದೇನೆ. ವಿಚಾರವನ್ನ ಶಿಸ್ತು ಪಾಲನಾ ಸಮಿತಿಗೆ ಶಿಫಾರಸು ಮಾಡ್ತೀನಿ ಅಂದಿದ್ದಾರೆ. ತಪ್ಪಿತಸ್ಥರ ವಿರುದ್ಧ ಕ್ರಮ ಆಗಬೇಕು. ನ್ಯಾಯ ಸಿಗುತ್ತೆ ಅನ್ನೊ ಭರವಸೆ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

LEAVE A REPLY

Please enter your comment!
Please enter your name here