ಇಂಡಿಯನ್ ಪ್ರೀಮಿಯರ್ ಲೀಗ್ ಮಾದರಿಯಲ್ಲೇ ಶ್ರೀಲಂಕಾದಲ್ಲಿ ಪ್ರಾರಂಭವಾಗಿರುವ ಲಂಕಾ ಪ್ರೀಮಿಯರ್ ಲೀಗ್ T20 ಪಂದ್ಯಾವಳಿಗಳು ನವೆಂಬರ್ 21ರಂದು ಪ್ರಾರಂಭವಾಗಲಿವೆ. ಹೀಗಾಗಿಯೇ ಅಕ್ಟೋಬರ್ 19ರಂದು ಎಲ್ಲ ತಂಡಗಳ ಹರಾಜು ಪ್ರಕ್ರಿಯೆ ನಡೆಯಿತು. ಲಂಕಾ ಪ್ರೀಮಿಯರ್ ಲೀಗ್ ನಲ್ಲಿ ಒಟ್ಟು 5 ತಂಡಗಳು ಪಾಲ್ಗೊಳ್ಳುತ್ತಿವೆ. ಅಚ್ಚರಿಯ ಸಂಗತಿ ಎಂದರೆ ಬಾಲಿವುಡ್ ನಟ ಸಲ್ಮಾನ್ ಖಾನ್ ಕುಟುಂಬ ಲಂಕಾ ಪ್ರೀಮಿಯರ್ ಲೀಗ್ ನಲ್ಲಿ ತಂಡವೊಂದನ್ನು ಖರೀದಿಸಿದೆ. ಈ ತಂಡದಲ್ಲಿ ಅನೇಕ ಪಾಕ್ ಆಟಗಾರರಿಗೆ ಮಣೆ ಹಾಕಲಾಗಿದೆ.
ಅಕ್ಟೋಬರ್19ರಂದು ನಡೆದ ಹರಾಜು ಪ್ರಕ್ರಿಯೆಯಲ್ಲಿ ಕ್ಯಾಂಡಿ ಟಸ್ಕರ್ಸ್ ತಂಡದ ಮಾಲಿಕತ್ವ ಹೊಂದಿರುವ ಸಲ್ಮಾನ್ ಖಾನ್ ಸಹೋದರ ಸೊಹೈಲ್ ಖಾನ್ ಪಾಕಿಸ್ತಾನದ ಅನೇಕ ಕ್ರಿಕೆಟ್ ಆಟಗಾರರಿಗೆ ತಮ್ಮ ತಂಡದಲ್ಲಿ ಸ್ಥಾನ ನೀಡಿದ್ದಾರೆ. ಹರಾಜು ಪ್ರಕ್ರಿಯೆಯಲ್ಲಿ 20ಕ್ಕೂ ಹೆಚ್ಚು ವಿದೇಶಿ ಆಟಗಾರರು ಪಾಲ್ಗೊಂಡಿದ್ದರು. ಅದರಲ್ಲಿ ಸಲ್ಮಾನ್ ಖಾನ್ ಒಡೆತನದ ಕ್ಯಾಂಡಿ ಟಸ್ಕರ್ಸ್ ತಂಡ ಪಾಕಿಸ್ತಾನದ ಆಟಗಾರರಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡಿರುವುದು ಇದೀಗ ವಿವಾದಕ್ಕೆ ಕಾರಣವಾಗಿದೆ.
ಮುಂಬಯಿ ದಾಳಿಯ ನಂತರ ಇಂಡಿಯನ್ ಪ್ರೀಮಿಯರ್ ಲೀಗ್ ನಲ್ಲಿ ಪಾಕಿಸ್ತಾನದ ಆಟಗಾರರು ಆಡುವುದನ್ನು ಬಿಸಿಸಿಐ ನಿಷೇಧಿಸಿತ್ತು. ಇಂಡಿಯನ್ ಪ್ರೀಮಿಯರ್ ಲೀಗ್ ನ ಯಾವುದೇ ಫ್ರಾಂಚೈಸ್ ಗಳು ಪಾಕಿಸ್ತಾನದ ಆಟಗಾರರಿಗೆ ಸ್ಥಾನ ನೀಡಲು ಹಿಂದೇಟು ಹಾಕಿದ್ದವು. ಹೀಗಾಗಿಯೇ ಕಳೆದ ಅನೇಕ ವರ್ಷಗಳಿಂದ ಇಂಡಿಯನ್ ಪ್ರೀಮಿಯರ್ ಲೀಗ್ ನಲ್ಲಿ ಪಾಕ್ ಆಟಗಾರರಿಗೆ ಸ್ಥಾನ ಲಭಿಸಿಲ್ಲ. ಆದರೆ ಇದೀಗ ಸಲ್ಮಾನ್ ಖಾನ್ ಲಂಕಾ ಪ್ರೀಮಿಯರ್ ಲೀಗ್ ನಲ್ಲಿ ಪಾಕ್ ಆಟಗಾರರಿಗೆ ಮಣೆ ಹಾಕಿರುವುದು ಭಾರತೀಯ ಕ್ರಿಕೆಟ್ ಅಭಿಮಾನಿಗಳನ್ನು ಕೆರಳಿಸಿದೆ.
ಇತ್ತೀಚಿಗೆ ಪಾಕಿಸ್ತಾನದ ಕ್ರಿಕೆಟ್ ಆಟಗಾರ ಶಾಹಿದ್ ಆಫ್ರಿದಿ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಭಾರತ ವಿರೋಧಿ ರ್ಯಾಲಿಗಳನ್ನು ಸಂಘಟಿಸಿದ್ದರು. ಜೊತೆಗೆ ಭಾರತ ವಿರೋಧಿ ಕೃತ್ಯಗಳಿಗೆ ಹಣಕಾಸಿನ ನೆರವನ್ನು ನೀಡಿದ್ದರು. ಇದನ್ನು ಖಂಡಿಸಿದ ಭಾರತೀಯರು ಈ ಹಿಂದೆ ಪಾಕ್ ಆಟಗಾರರಿಗೆ ಇಂಡಿಯನ್ ಪ್ರೀಮಿಯರ್ ಲೀಗ್ ನಲ್ಲಿ ಸ್ಥಾನ ನೀಡಿ, ಹಣ ಗಳಿಕೆಗೆ ಅನುವು ಮಾಡಿಕೊಟ್ಟಿದ್ದಕ್ಕೆ ಈಗ ಭಾರತೀಯರು ತಕ್ಕ ಶಿಕ್ಷೆ ಅನುಭವಿಸುವಂತಾಗಿದೆ, ಮುಂದಿನ ದಿನಗಳಲ್ಲಾದರು ಭಾರತೀಯರ ಹಣ ಭಾರತದ ವಿರುದ್ಧ ಬಳಕೆಯಾಗುವುದನ್ನು ತಡೆಯಬೇಕಾಗಿದೆ ಎಂಬ ಕೂಗು ಜೋರಾಗಿ ಕೇಳಿ ಬಂದಿತ್ತು. ಇದೆಲ್ಲದರ ಮಧ್ಯೆ ಸಲ್ಮಾನ್ ಖಾನ್ ಲಂಕಾ ಪ್ರೀಮಿಯರ್ ಲೀಗ್ ನಲ್ಲಿ ಪಾಕ್ ಆಟಗಾರರಿಗೆ ಸ್ಥಾನ ನೀಡಿರುವುದು ಉತ್ತಮ ಬೆಳವಣಿಗೆ ಅಲ್ಲ ಎಂಬ ಮಾತುಗಳು ಕ್ರಿಕೆಟ್ ವಲಯದಲ್ಲಿ ಕೇಳಿ ಬರುತ್ತಿವೆ. ಭಾರತದಲ್ಲಿ ನಿಷೇಧವಿರುವ ಪಾಕ್ ಆಟಗಾರರಿಗೆ ಭಾರತೀಯನಾಗಿ ಶ್ರೀಲಂಕಾದಲ್ಲಿ ಮಣೆ ಹಾಕುವ ಅಗತ್ಯವಾದರು ಏನಿತ್ತು ಎಂಬ ಪ್ರಶ್ನೆ ಹುಟ್ಟಿಕೊಂಡಿದೆ. ಸಲ್ಮಾನ್ ಖಾನ್ ಈ ನಡೆಗೆ ಭಾರೀ ವಿರೋಧ ವ್ಯಕ್ತವಾಗುತ್ತಿದೆ.