ಗಾನ ಗಾರುಡಿಗನ ಆರೋಗ್ಯ ಸ್ಥಿತಿ ಮತ್ತಷ್ಟು ಗಂಭೀರ; ಎಸ್ ಪಿಬಿ ಹೆಲ್ತ್ ಬಗ್ಗೆ ಆಸ್ಪತ್ರೆ ನೀಡಿದೆ ಆತಂಕದ ಮಾಹಿತಿ

0
229

ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿರುವ ಗಾನ ಗಾರುಡಿಗ, ಸ್ವರ ಸಾಮ್ರಾಟ ಎಸ್.ಪಿ ಬಾಲಸುಬ್ರಹ್ಮಣ್ಯಂ ಅವರ ಆರೋಗ್ಯ ಸ್ಥಿತಿ ಮತ್ತಷ್ಟು ಗಂಭೀರವಗಿದೆ ಎಂದು ಚೆನ್ನೈನ ಎಂಜಿಎಂ ಆಸ್ಪತ್ರೆ ತಿಳಿಸಿದೆ. ಕಳೆದ ಎರಡು ದಿನಗಳ ಹಿಂದಷ್ಟೇ ಎಸ್ ಪಿಬಿ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿದೆ. ಶೀಘ್ರದಲ್ಲಿ ಅವರು ಮನೆಗೆ ತೆರಳಲಿದ್ದಾರೆ ಎಂದು ಹೇಳಲಾಗಿತ್ತು. ಆದರೆ ಈಗ ಆಸ್ಪತ್ರೆ ಎಸ್ ಪಿಬಿ ಅವರ ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಿದ್ದು, ಗಾಯಕನ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿಲ್ಲ ಎಂದು ಹೇಳಿದೆ. ಆಸ್ಪತ್ರೆಯ ಮಾಹಿತಿ ಎಸ್ ಪಿ ಅವರ ಕೋಟ್ಯಂತರ ಅಭಿಮಾನಿಗಳಿಗೆ ಆತಂಕವನ್ನು ಉಂಟುಮಾಡಿದೆ. ಎಸ್.ಪಿ ಬಾಲಸುಬ್ರಹ್ಮಣ್ಯಂ ಅವರ ಹೆಲ್ತ್ ಬುಲೆಟಿನ್ ಕುರಿತು ಪ್ರಕಟಣೆ ನೀಡಿರುವ ಎಂಜಿ ಎಂ ಆಸ್ಪತ್ರೆ ಎಸ್ ಪಿಬಿ ಅವರ ಸ್ಥಿತಿ ಕೊಂಚ ಬಿಗಡಾಯಿಸಿದೆ. ಕಳೆದ 24 ಗಂಟೆ ಅವಧಿಯಲ್ಲಿ ಅವರ ಆರೋಗ್ಯ ಕ್ಷೀಣಿಸುತ್ತಿದೆ. ಆಸ್ಪತ್ರೆಯ ನುರಿತ ವೈದ್ಯರು ಚಿಕಿತ್ಸೆ ಮುಂದುವರಿಸಿದ್ದಾರೆ. ಅವರ ಆರೋಗ್ಯದ ಬಗ್ಗೆ ಹೆಚ್ಚಿನ ನಿಗಾ ವಹಿಸಲಾಗುತ್ತಿದೆ ಎಂದು ತಿಳಿಸಿದೆ.

ಈ ನಡುವೆ ಎಂಜಿಎಂ ಆಸ್ಪತ್ರೆಗೆ ಭೇಟಿ ನೀಡಿ ಎಸ್ ಪಿ ಬಾಲಸುಬ್ರಹ್ಮಣ್ಯಂ ಅವರ ಆರೋಗ್ಯದ ಬಗ್ಗೆ ಮಾಹಿತಿ ಪಡೆದಿರುವ ಖ್ಯಾತ ನಟ ಕಮಲ್ ಹಾಸನ್, ಜೀವರಕ್ಷಕ ಸಾಧನಗಳಿಂದಾಗಿ ಬಾಲಸುಬ್ರಹ್ಮಣ್ಯಂ ಬದುಕುಳಿದಿದ್ದಾರೆ. ಅವರ ಆರೋಗ್ಯ ಸುಧಾರುಸುತ್ತಿದೆ ಎಂದು ಹೇಳಲು ಸಾಧ್ಯವಿಲ್ಲ. ಅವರ ಸ್ಥಿತಿ ಗಂಭೀರವಾಗಿದೆ. ಎಸ್ ಪಿಬಿ ಶೀಗ್ರವೇ ಗುಣಮುಖರಾಗಲಿ ಎಂದು ದೇವರಲ್ಲಿ ಪ್ರಾರ್ಥಿಸೋಣ ಎಂದು ಹೇಳಿದ್ದಾರೆ.

ಕಳೆದ ಎರಡು ದಿನಗಳ ಹಿಂದೆ ಎಸ್​ಪಿ ಬಿ ಆರೋಗ್ಯದ ಕುರಿತು ಮಾಹಿತಿ ನೀಡಿದ್ದ ಅವರ ಮಗ ಚರಣ್​, ತಂದೆ ಆರೋಗ್ಯ ಸುಧಾರಿಸುತ್ತಿದೆ ಎಂದಿದ್ದರು. ಚಿಕಿತ್ಸೆಗೆ ಸ್ಪಂದಿಸುತ್ತಿರುವ ಅವರು ಸ್ಥಿರವಾಗಿದ್ದಾರೆ. ಅಲ್ಲದೇ ಅವರ ಶ್ವಾಸಕೋಶ ಹಾಗೂ ಉಸಿರಾಟದಲ್ಲಿ ಇನ್ನೂ ಹೆಚ್ಚಿನ ಸುಧಾರಣೆಯಾಗಬೇಕಷ್ಟೇ. ಇದೀಗ ಅವರು ವೈದ್ಯರ ಸಹಾಯದ ಮೇರೆಗೆ ಪ್ರತಿ ದಿನ 20 ನಿಮಿಷಗಳ ಕಾಲ ಕುಳಿತುಕೊಳ್ಳುತ್ತಿದ್ದಾರೆ ಎಂದು ಮಾಹಿತಿ ನೀಡಿದ್ದರು. ವಿಶೇಷವೆಂದರೆ ಎಸ್ ಪಿಬಿ ತಮ್ಮ ವಿವಾಹ ವಾರ್ಷಿಕೋತ್ಸವವನ್ನು ಆಸ್ಪತ್ರೆಯಲ್ಲಿ ಆಚರಿಸಿದ್ದಾರೆ. ಈಗ ಆಸ್ಪತ್ರೆಯಲ್ಲೇ ಎಸ್‍ಪಿಬಿ ಟೆನ್ನಿಸ್ ಮತ್ತು ಕ್ರಿಕೆಟ್ ಪಂದ್ಯಗಳನ್ನು ವೀಕ್ಷಿಸುತ್ತಿದ್ದಾರೆ ಎಂದು ಚರಣ್ ತಿಳಿಸಿದ್ದರು.

ಎಸ್.ಪಿ ಬಾಲಸುಬ್ರಹ್ಮಣ್ಯಂ ಅವರಿಗೆ ಆ.5ರಂದು ಕೊರೊನಾ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ವೈದ್ಯರ ಸಲಹೆ ಮೇರೆಗೆ ಚೆನ್ನೈನ ಎಂಜಿಎಂ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಶ್ವಾಸಕೋಶದಲ್ಲಿ ತೊಂದರೆ ಕಾಣಿಸಿಕೊಳ್ಳುತ್ತಿದ್ದಂತೆಯೇ ಅವರ ಆರೋಗ್ಯ ಚಿಂತಾಜನಕವಾಗಿತ್ತು. ಆದರೆ ತಜ್ನ ವೈದ್ಯರ ಚಿಕಿತ್ಸೆ ಬಳಿಕ ಸ್ವಲ್ಪ ಮಟ್ಟಿನ ಸುಧಾರಣೆ ಕಂಡಿತ್ತಲ್ಲದೇ ಚಿಕಿತ್ಸೆಗೆ ಸ್ಪಿಂದಿಸುತ್ತಿದ್ದಾರೆ ಎನ್ನಲಾಗಿತ್ತು. ಶೀಘ್ರದಲ್ಲಿಯೇ ಗುಣಮುಖರಾಗಿ ಮನೆಗೆ ಮರಳಲಿದ್ದಾರೆ ಎಂದೂ ಹೇಳಲಾಗಿತ್ತು. ಆದರೀಗ ಆಸ್ಪತ್ರೆ ಬಿಡುಗಡೆ ಮಾಡಿರುವ ಹೆಲ್ತ್ ಬುಲೆಟಿನ್ ಎಸ್ ಪಿಬಿ ಆರೋಗ್ಯದ ಬಗ್ಗೆ ಆತಂಕವನ್ನು ಹೆಚ್ಚಿಸಿದೆ.

LEAVE A REPLY

Please enter your comment!
Please enter your name here