ಆರ್.ಆರ್.ನಗರ ಕಡಿಮೆ ವೋಟಿಂಗ್, ಯಾರಿಗೆ ಲಾಭ..? ಯಾರಿಗೆ ನಷ್ಟ..?

0
74

ಶಿರಾ ಮತ್ತು ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆ ಮತದಾನ ನವೆಂಬರ್ 3ಕ್ಕೆ ಮುಕ್ತಾಯಗೊಂಡಿದೆ. ತುಮಕೂರಿನ ಶಿರಾ ವಿದಾನಸಭಾ ಕ್ಷೇತ್ರದಲ್ಲಿ ಮತದಾರರು ಹೆಚ್ಚಿನ ಉತ್ಸಹದಿಂದ ಮತದಾನ ಮಾಡಿದ್ದರೆ, ಇತ್ತ ಬೆಂಗಳೂರಿನ ಪ್ರಜ್ಞಾವಂತ ನಾಗರಿಕರು ಪ್ರಜಾಪ್ರಭುತ್ವದಲ್ಲಿ ತಮಗಿರುವ ಹಕ್ಕನ್ನು ಚಲಾಯಿಸಲು ನಿರ್ಲಕ್ಷ್ಯ ತೋರಿದ ಪರಿಣಾಯ ಅತ್ಯಂತ ಕಡಿಮೆ ವೋಟಿಂಗ್ ಆಗಿದೆ. ಇನ್ನು ಕೋವಿಡ್ ನಡುವೆಯೂ ಮೂರು ಪಕ್ಷಗಳು ಅಬ್ಬರದಿಂದ ಪ್ರಚಾರ ಮಾಡಿದ್ದರು, ಅದಕ್ಕೆ ತಕ್ಕಂತೆ ಪ್ರತಿಕ್ರಿಯೆ ಮತದಾರರಿಂದ ವ್ಯಕ್ತವಾಗಿಲ್ಲ. ಇನ್ನು ಬೆಂಗಳೂರಿನ ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದಲ್ಲಾದ ಕಡಿಮೆ ಮತದಾನದ ಬಗ್ಗೆ ಮೂರು ಪಕ್ಷಗಳ ಮುಖಂಡರು ಭಾರೀ ಲೆಕ್ಕಾಚಾರದಲ್ಲಿ ತೊಡಗಿದ್ದಾರೆ. ಪ್ರತೀ ಬೂತ್‌ನಲ್ಲಾದ ಮತದಾನ ಪ್ರಮಾಣವನ್ನು ಕ್ರೋಢೀಕರಿಸಿಕೊಂಡು, ಯಾರಿಗೆ ಗೆಲುವು ಒಲಿಯಲಿದೆ ಎನ್ನುವುದನ್ನು ಲೆಕ್ಕಹಾಕುತ್ತಿದ್ದಾರೆ.

ರಾಜ್ಯ ಗುಪ್ತಚರ ವರದಿಯ ಪ್ರಕಾರ ಬೆಂಗಳೂರಿನ ರಾಜರಾಜೇಶ್ವರಿ ನಗರ ಉಪಚುನಾವಣೆಯಲ್ಲಿ, ಆರಂಭದಲ್ಲಿ ಬಿಜೆಪಿ ಅಭ್ಯರ್ಥಿ ಮುನಿರತ್ನರಂತಹ ಪ್ರಬಲ ಪ್ರತಿಸ್ಪರ್ಧಿಗೆ ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ಪೈಪೋಟಿ ನೀಡಲು ಸಾಧ್ಯವಿಲ್ಲ ಎನ್ನುವಂತ ಸ್ಥಿತಿ ಇತ್ತು. ಆದರೆ ದಿನ ಕಳೆದಂತೆ ಡಿಕೆಶಿ ಸಹೋದರರು ಕ್ಷೇತ್ರದ ಚಿತ್ರಣವನ್ನೇ ಬದಲಾಯಿಸಿದ್ದಾರೆ. ಹೀಗಾಗಿ ರಾಜರಾಜೇಶ್ವರಿ ಕ್ಷೇತ್ರದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ನೇರ ಹಣಾಹಣಿ ನಡೆದಿದೆ. ಇನ್ನು ಜೆಡಿಎಸ್ ಕೂಡಾ ಕೊನೆಯ ಹಂತದ ಪ್ರಚಾರವನ್ನು ಶ್ರಮವಹಿಸಿ ಮಾಡಿರುವುದರಿಂದ, ಕ್ಷೇತ್ರದಲ್ಲಿ ತನ್ನ ನೆಲೆ ಉಳಿಸಿಕೊಳ್ಳಲು ಬೇಕಾದಷ್ಟು ಮತ ಗಳಿಕೆಯತ್ತ ಗಮನ ಹರಿಸಿದೆ.

ರಾಜರಾಜೇಶ್ವರಿ ನಗರ ಕ್ಷೇತ್ರದಲ್ಲಿ ಒಟ್ಟು ಮತದಾರರ ಸಂಖ್ಯೆ 4,62,201, ಚಲಾವಣೆಯಾದ ಮತ 2,09,083. ಇದರಲ್ಲಿ ಪುರುಷರು ವೋಟಿಂಗ್ ಮಾಡಿದ್ದು 1,08,806, ಮಹಿಳೆಯರು 1,00,261. ಶೇಕಡಾವಾರು ಮತದಾನವಾಗಿದ್ದು 45.33. ಹೀಗಾಗಿ ಒಂದು ಲಕ್ಷ ಮಹಿಳಾ ಮತದಾರರು ಮತದಾನದಲ್ಲಿ ಭಾಗಿಯಾಗಿದ್ದರಿಂದ, ಕಾಂಗ್ರೆಸ್ಸಿನ ಅಭ್ಯರ್ಥಿ
ಕುಸುಮಾ ಅವರ ಗೆಲುವಿಗೆ ಕಾರಣವಾಗಲಿದೆ ಎನ್ನುವುದು ಕಾಂಗ್ರೆಸ್‌ನ ಲೆಕ್ಕಾಚಾರ.

ಬಿಜೆಪಿಗೆ ಇದರ ಲಾಭವಾಗಬಹುದು ಎನ್ನುತ್ತಿದ್ದಾರೆ ಕೆಲ ಕಮಲ ನಾಯಕರು. ಅದಕ್ಕೆ ಕಾರಣ, ಯಶವಂತಪುರ, ಜಾಲಹಳ್ಳಿ, ಆರ್.ಆರ್.ನಗರ, ಜ್ಞಾನಭಾರತಿ, ಲಕ್ಶ್ಮೀದೇವಿ ನಗರ ಭಾಗದಲ್ಲಿ ಹೆಚ್ಚಿನ ಮತದಾನ ನಡೆದಿದೆ. ಈ ಭಾಗದಲ್ಲಿ ಬಿಜೆಪಿ ಹೆಚ್ಚಿನ ಪ್ರಾಬಲ್ಯ ಹೊಂದಿರುವುದರಿಂದ ಮತ್ತು ಕ್ಷೇತ್ರದ ಚಿತ್ರಣವನ್ನು ಬಲ್ಲವರಾಗಿರುವುದರಿಂದ, ಬಿಜೆಪಿಗೆ ಇದರ ಲಾಭವಾಗಬಹುದು ಎನ್ನುವ ನಿರೀಕ್ಷೆಯಲ್ಲಿದ್ದಾರೆ.

ಒಟ್ಟಾರೆಯಾಗಿ ಕಳೆದ ಬಾರಿಯ ವಿಧಾನಸಭಾ ಚುನಾವಣೆಗೆ ಹೋಲಿಸಿದರೆ ರಾಜರಾಜೇಶ್ವರಿ ನಗರದಲ್ಲಿ ಈ ಬಾರಿ ಶೇ.10ರಷ್ಟು ಕಡಿಮೆ ಮತದಾನವಾಗಿದೆ. ಹೀಗಾಗಿ ಮೂರು ಅಭ್ಯರ್ಥಿಗಳಲ್ಲಿ ಯಾರಿಗೆ ಈ ಮತಗಳು ಹಂಚಿ ಹೋಗಲಿವೆ ಎನ್ನುವುದು ಸ್ಪಷ್ಟವಾಗಿ ತಿಳಿಯುತ್ತಿಲ್ಲ. ಯಾರು ಗೆದ್ದರೂ ಅಂತರ ಕಡಿಮೆ ಇರುತ್ತದೆ. ನವೆಂಬರ್ 10ಕ್ಕೆ ಎರಡು ವಿಧಾನಸಭಾ ಕ್ಷೇತ್ರಗಳ ಫಲಿತಾಂಶ ಪ್ರಕಟವಾಗಲಿದ್ದು, ಮತದಾರರ ಕುತೂಹಲ ಕೊನೆಗೊಳ್ಳಲಿದೆ.

LEAVE A REPLY

Please enter your comment!
Please enter your name here