ವೆಸ್ಟ್ ಇಂಡೀಸ್ ಹಾಗೂ ಟೀಂ ಇಂಡಿಯಾ ನಡುವೆ ನಡೆದ ಮೂರನೇ ಹಾಗೂ ಕೊನೆಯ ಟಿ-ಟ್ವೆಂಟಿ ಪಂದ್ಯದಲ್ಲಿ ೬೫ ರನ್ ಬಾರಿಸುವ ಮೂಲಕ ಕ್ಯಾಪ್ಟನ್ ಕೂಲ್ ಅವರ ದಾಖಲೆಯನ್ನು ಹಿಂದಿಕ್ಕಿದ್ದಾರೆ ಡೆಲ್ಲಿ ಡ್ಯಾಶರ್ ರಿಷಬ್ ಪಂತ್. ಹೌದು,ಮೂರು ಪಂದ್ಯಗಳನ್ನು ಆಡಿದ ಟೀಂ ಇಂಡಿಯಾ ಮೂರು ಪಂದ್ಯಗಳನ್ನು ಗೆಲ್ಲುವ ಮೂಲಕ ಟಿ-ಟ್ವೆಂಟಿ ಸರಣಿಯನ್ನು ವಶಪಡಿಸಿಕೊಂಡಿದೆ. ನಾಯಕ ವಿರಾಟ್ ಕೊಹ್ಲಿ ಅವರೊಡನೆ ಬ್ಯಾಟಿಂಗ್ ಜೊತೆಗೂಡಿದ ರಿಷಬ್ ಪಂತ್ ೪೨ ಎಸೆತಗಳಲ್ಲಿ ೬೫ ರನ್ ಗಳಿಸಿದ್ದಾರೆ. ೪ ಬೌಂಡರಿ ಹಾಗೂ ೪ ಸಿಕ್ಸರ್ ಸಿಡಿಸಿ ತಂಡದ ಗೆಲುವಿಗೆ ಆಸರೆಯಾಗಿದ್ದಾರೆ.

ಕಳೆದ ೨ ಪಂದ್ಯಗಳಲ್ಲಿ ರಿಷಬ್ ಉತ್ತಮ ಆಟ ನೀಡಿರಲಿಲ್ಲ.! ಆದರೆ ಮೂರನೇ ಪಂದ್ಯದಲ್ಲಿ ಅಬ್ಬರಿಸುವ ಮೂಲಕ ತಂಡದಲ್ಲಿ ಸ್ಥಾನವನ್ನು ಭದ್ರವಾಗಿ ಉಳಿಸಿಕೊಂಡಿದ್ದಾರೆ ಎನ್ನಬಹುದು. ಮಂಗಳವಾರ ನಡೆದ ಮೂರನೇ ಕೊನೆಯ ಟಿ-ಟ್ವೆಂಟಿ ಪಂದ್ಯದಲ್ಲಿ ತಮ್ಮ ಬ್ಯಾಟಿಂಗ್ ವೈಖರಿಯಿಂದ ೬೫ ರನ್ ಗಳಿಸಿ ಟಿ-ಟ್ವೆಂಟಿ ಅಂತಾರಾಷ್ಟ್ರೀಯ ಪಂದ್ಯದಲ್ಲಿ ವೇಗವಾಗಿ ಹೆಚ್ಚು ರನ್ಗಳಿಸಿದ ವಿಕೆಟ್ ಕೀಪರ್ ಎಂಬ ದಾಖಲೆಯನ್ನೂ ನಿರ್ಮಿಸಿದರು. ಈ ಹಿಂದೆ ಧೋನಿ ಅವರು ೨೦೧೭ ರಲ್ಲಿ ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ೫೬ ರನ್ ಗಳಿಸಿ ದಾಖಲೆಯನ್ನು ಬರೆದಿದ್ದರು. ಈಗ ಧೋನಿ ಅವರ ದಾಖಲೆಯನ್ನು ಹಿಂದಿಕ್ಕಿದ್ದಾರೆ ರಿಷಬ್ ಪಂತ್, ಇದಕ್ಕೆ ರಿಷಬ್ ಅವರ ಅಭಿಮಾನಿಗಳು ಟ್ವೀಟ್ ಮಾಡುವ ಮೂಲಕ ಅಭಿನಂದನೆಗಳನ್ನು ತಿಳಿಸಿದ್ದಾರೆ.