ರಾಜ್ಯ ಕಾಂಗ್ರೆಸ್ನ ಪ್ರಭಾವಿ ನಾಯಕ ಡಿ.ಕೆ ಶಿವಕುಮಾರ್ ಅವರನ್ನು ನಿನ್ನೆ ರಾತ್ರಿ ದೆಹಲಿಯಲ್ಲಿ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ವಶಕ್ಕೆ ಪಡೆದ ಹಿನ್ನೆಲೆ ಅವರ ಸ್ವಕ್ಷೇತ್ರ ಕನಕಪುರದಲ್ಲಿ ಮತ್ತು ರಾಮನಗರದಲ್ಲಿ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಾಗಿದೆ. ಡಿಕೆಶಿ ಅಭಿಮಾನಿಗಳು ಮತ್ತು ಬೆಂಬಲಿಗರು ಬಂಧನ ಖಂಡಿಸಿ ಕನಕಪುರ ಮತ್ತು ರಾಮನಗರ ಬಂದ್ಗೆ ಕರೆ ನೀಡಿದ್ದಾರೆ. ಈ ಹಿನ್ನೆಲೆ ಯಾವುದೇ ಸರ್ಕಾರಿ ಹಾಗೂ ಖಾಸಗಿ ಬಸ್ಸುಗಳಾಗಲಿ ರಸ್ತೆಗಿಳಿಯದ ಕಾರಣ ಸಾರ್ವಜನಿಕರು ಪರದಾಡುತ್ತಿದ್ದಾರೆ. ಇನ್ನು ಬಸ್ ಸಂಚಾರ ಸಂಪೂರ್ಣ ಸ್ತಬ್ಧಗೊಂಡಿದೆ. ಕೆಸ್ಆರ್ಟಿಸಿ ಬಸ್ ಡಿಪೋ ಬಳಿ ಸಿಬ್ಬಂದಿ ಹಾಜರ್ ಆಗಿ ಬಸ್ಸುಗಳನ್ನು ಹೊರಗೆ ತೆಗೆಯದಿರಲು ನಿರ್ಧರಿಸಿದ್ದಾರೆ. ಅಂಗಡಿ ಮುಂಗಟ್ಟುಗಳು ಮುಚ್ಚಿದ್ದು, ವ್ಯಾಪಾರ ಸ್ಥಗಿತಗೊಂಡಿದೆ. ಈ ನಡುವೆ ನಿನ್ನೆ ರಾತ್ರಿ ಡಿಕೆಶಿ ಬೆಂಬಲಿಗರು, ಅಭಿಮಾನಿಗಳು ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಡಿಕೆಶಿ ಬಂಧನ ಖಂಡಿಸಿ, ರಾಜ್ಯ ಸಾರಿಗೆ ಬಸ್ಸಿಗೆ ಬೆಂಕಿ ಹಚ್ಚಿದ್ದು, ನಾಲ್ಕು ಬಸ್ಸುಗಳ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಅದೇ ರೀತಿ ರಾಮನಗರ ಬಿಜೆಪಿ ಕಚೇರಿ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ.

ಇನ್ನು ಕನಕಪುರ ಮಾರುಕಟ್ಟೆಯಲ್ಲಿ ವ್ಯಾಪಾರ ವಹಿವಾಟು ಆರಂಭಗೊಂಡಿದೆ. ಆದರೆ ಪರಿಸ್ಥಿತಿ ಉದ್ವಿಗ್ವ ಸ್ಥಿತಿಯಲ್ಲಿರುವ ಕಾರಣ ಖರೀದಿಗೆ ಸಾರ್ವಜನಿಕರು ಬರುತ್ತಿಲ್ಲ. ಯಾವುದೇ ಅಹಿತಕರ ಘಟನೆಗಳು, ಗಲಾಟೆಗಳು ನಡೆಯದಂತೆ ನೋಡಿಕೊಳ್ಳಲು ಪೊಲೀಸರು ಬೀಗಿ ಬಂದೋಬಸ್ತ ಕೈಗೊಂಡಿದ್ದಾರೆ. ಆದರು ಕೆಲವು ಕಡೆ ಕಲ್ಲು ತೂರಾಟ ನಡೆದಿದೆ.
ಇನ್ನು ರಾಮನಗರದಲ್ಲಿ ಬೆಂಗಳೂರು- ಮೈಸೂರು ಹೆದ್ದಾರಿ ತಡೆದು ಪ್ರಧಾನಿ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ವಿರುದ್ಧ ಡಿಕೆಶಿ ಅಭಿಮಾನಿಗಳು ಘೋಷಣೆ ಕೂಗಿದರು. ಈ ವೇಳೆ ಡಿಕೆ ಬೆಂಬಲಿಗನೋರ್ವ ವಾಹನದ ಕೆಳಗೆ ಮಲಗಲು ಯತ್ನಿಸಿದ ಘಟನೆ ಸಂಭವಿಸಿತ್ತು. ನಂತರ ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತೆಗೆದುಕೊಂಡರು. ಅದೇ ರೀತಿ ಡಿಕೆ ಬೆಂಬಲಿಗರು ಕನಕಪುರ ಕೋಡಿಹಳ್ಳಿ ಸಂಪರ್ಕ ರಸ್ತೆ ಬಂದ್ ಮಾಡಿ ರಸ್ತೆಗಳಲ್ಲಿ ಬೆಂಕಿ ಹಚ್ಚಿ, ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಪರಿಸ್ಥಿತಿಯನ್ನು ಪೊಲೀಸರು ಲಾಠಿ ಚಾರ್ಜ್ ಮಾಡಿ ಹತೋಟಿಗೆ ತೆಗೆದುಕೊಂಡರು.

ಇನ್ನು ದೆಹಲಿ ಮನೆಯಲ್ಲಿ 8.5 ಕೋಟಿ ರೂಪಾಯಿ ಹಣ ಸಿಕ್ಕ ಪ್ರಕರಣ ಸಂಬಂಧ ಇಡಿ ಅಧಿಕಾರಿಗಳು ಕೇಳಿದ ಪ್ರಶ್ನೆಗೆ ಡಿಕೆಶಿ ಸರಿಯಾಗಿ ಉತ್ತರಿಸಿದ ಕಾರಣ ನಿನ್ನೆ ರಾತ್ರಿ 8.30ಕ್ಕೆ ಡಿಕೆ ಶಿವಕುಮಾರ್ರನ್ನು ಇಡಿ ಅಧಿಕಾರಿಗಳು ಬಂಧಿಸಿದ್ದರು. ಇನ್ನು ಡಿಕೆ ಶಿವಕುಮಾರ್ ಬಂಧನವಾಗುತ್ತಿದ್ದಂತೆ, ಇಡಿ ಕಚೇರಿ ಮುಂದೆ ಭಾರೀ ಹೈಡ್ರಾಮಾ ನಡೆದಿತ್ತು. ಡಿಕೆಶಿ ಬೆಂಬಲಿಗರು ನಿನ್ನೆ ರಾತ್ರಿಯೇ ಪ್ರತಿಭಟನೆ ನಡೆಸಿದ್ದರು. ಅಭಿಮಾನಿಗಳು ಬೆಂಕಿಹಚ್ಚಿ ಆಕ್ರೋಶ ಹೊರಹಾಕಿದ್ದು, ಈ ವೇಳೆ ಕೆಲವೆಡೆ ಹಿಂಸಾಚಾರ ಕೂಡ ನಡೆದಿತ್ತು. ಇಂದು ಕೂಡಾ ರಾಜ್ಯದ ಅನೇಕ ಕಡೆ ಪ್ರತಿಭಟನೆ ನಡೆಸಲು ಕಾಂಗ್ರೆಸ್ ಕಾರ್ಯಕರ್ತರು ಮುಂದಾಗಿದ್ದಾರೆ.