ಬೆಂಗಳೂರು: ಅಶೋಕ್ ಗಸ್ತಿಯವರ ನಿಧನದಿಂದ ತೆರವಾಗಿರುವ ರಾಜ್ಯಸಭಾ ಸದಸ್ಯ ಸ್ಥಾನಕ್ಕೆ ಬಿಜೆಪಿಯಿಂದ ಡಾ. ನಾರಾಯಣ ಗೌಡ ನಾಮಪತ್ರ ಸಲ್ಲಿಸಿದರು. ಚುನಾವಣಾಧಿಕಾರಿಯೂ ಆಗಿರುವ , ವಿಧಾನಸಭೆ ಕಾರ್ಯದರ್ಶಿ ಎಂ ಕೆ. ವಿಶಾಲಾಕ್ಷಿಗೆ ನಾಮಪತ್ರ ಸಲ್ಲಿಕೆ ಮಾಡಿದರು. ರಾಜ್ಯಸಭಾ ಚುನಾವಣೆ ನಾಮಪತ್ರ ಸಲ್ಲಿಕೆಗೆ ಇಂದು ಕೊನೆಯ ದಿನ. ಈ ಹಿನ್ನಲೆಯಲ್ಲಿ ಬಿಜೆಪಿಯ ಡಾ.ನಾರಾಯಣ ಹೊರತು ಪಡಿಸಿ ಬೇರೆ ಯಾವುದೇ ಅಭ್ಯರ್ಥಿ ನಾಮಪತ್ರ ಸಲ್ಲಿಸಿಲ್ಲ. ಹಾಗಾಗಿ ಡಾ. ನಾರಾಯಣ ಗೌಡ ಅವಿರೋಧ ಆಯ್ಕೆ ಬಹುತೇಕ ಖಚಿತವಾಗಿದೆ.
ನಾಮಪತ್ರ ಸಲ್ಲಿಸಿದ ಬಳಿಕ ವಿಧಾನ ಸೌಧದಲ್ಲಿ ಮಾತನಾಡಿದ ಬಿಜೆಪಿ ಅಭ್ಯರ್ಥಿ ಡಾ. ನಾರಾಯಣ ಗೌಡ, ನನ್ನನ್ನು ರಾಜ್ಯಸಭಾ ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಿದ್ದು ಅಚ್ಚರಿ ಉಂಟು ಮಾಡಿದೆ. ನಿನ್ನೆ ಸಂಜೆಯವರೆಗೂ ನನ್ನನ್ನು ಆಯ್ಕೆ ಮಾಡುತ್ತಾರೆ ಎಂಬ ಸಣ್ಣ ಸುಳಿವೂ ಇರಲಿಲ್ಲ. ಹಿಂದುಳಿದ ಸಮಾಜಕ್ಕೆ ಸೇರಿದ ನನ್ನನ್ನು ಗುರ್ತಿಸಿದ ಪಕ್ಷದ ಪ್ರಮುಖರಿಗೆ ನಾನು ಆಭಾರಿ ಎಂದು ತಿಳಿಸಿದರು.
ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಮಾತನಾಡಿ, ಡಾ.ನಾರಾಯಣ್ ಆಯ್ಕೆ ನಮಗೆ ಅಚ್ಚರಿಯೇನಲ್ಲ. ಕೋರ್ ಕಮಿಟಿ ಸಭೆಯಲ್ಲಿ ಚರ್ಚಿಸಿ ಕಳುಹಿಸಿದ ನಾಲ್ಕೈದು ಜನರಲ್ಲಿ ಒಬ್ಬರನ್ನು ಕೇಂದ್ರದ ವರಿಷ್ಟರು ಆಯ್ಕೆ ಮಾಡಿದ್ದಾರೆ. ಈ ಬಾರಿಯೂ ಸಾಮಾನ್ಯ ಕಾರ್ಯಕರ್ತರನ್ನೇ ಆಯ್ಕೆ ಮಾಡಿರುವುದು ವಿಶೇಷ. ಸಚಿವ ಸಂಪುಟ ಪುನಾರಚನೆ ಅಥವಾ ವಿಸ್ತರಣೆ ವಿಷಯದಲ್ಲೂ ಹೀಗೆ ಆಗುತ್ತಾ ಗೊತ್ತಿಲ್ಲ. ಸಿಎಂ ದೆಹಲಿಗೆ ಹೋಗಿದ್ದಾರೆ. ವರಿಷ್ಟರೊಂದಿಗೆ ಚರ್ಚಿಸಿ ನಿರ್ಧರಿಸುತ್ತಾರೆ. ಅದು ಸಿಎಂ ಮತ್ತು ಪಕ್ಷದ ವರಿಷ್ಟರಿಗೆ ಬಿಟ್ಟ ವಿಷಯ ಎಂದರು. ಆದ್ರೆ ಮರಾಠಾ ಅಭಿವೃದ್ದಿ ನಿಗಮದ ಬಗ್ಗೆ ಪ್ರತಿಕ್ರಯಿಸಲು ಕಟೀಲ್ ನಕಾರ ವ್ಯಕ್ತಪಡಿಸಿದರು.
ನಾಮಪತ್ರ ಸಲ್ಲಿಕೆ ವೇಳೆ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್, ಸಚಿವರಾದ ಕೆ.ಎಸ್.ಈಶ್ವರಪ್ಪ, ನಾರಾಯಣಗೌಡ, ಮುಖ್ಯ ಸಚೇತಕ ಸುನೀಲ್ ಕುಮಾರ್ ಮತ್ತು ಎಂಎಲ್ ಸಿ ರವಿಕುಮಾರ್ ಸಾಥ್ ನೀಡಿದರು.