ತಮಿಳುನಾಡು ರಾಜಕೀಯದಲ್ಲಿ ಮತ್ತೆ ಸಂಚಲನ ಸೃಷ್ಟಿಸ್ತಾರಾ ರಜನಿಕಾಂತ್…?

0
20

ಸೂಪರ್ ಸ್ಟಾರ್ ರಜನಿಕಾಂತ್ ರಾಜಕೀಯ ಪ್ರವೇಶದ ಬಗ್ಗೆ ಕಳೆದ ಮೂರು ವರ್ಷಗಳಿಂದ ಭಾರೀ ಚರ್ಚೆ ನಡೆಯುತ್ತಲೇ ಇತ್ತು. 2017ರಲ್ಲಿ ರಜನಿಕಾಂತ್ ರಾಜಕೀಯ ಪ್ರವೇಶಿಸುವ ನಿಟ್ಟಿನಲ್ಲಿ ರಜನಿ ಮಕ್ಕಳ್ ಮಂಡ್ರಂ ಸಂಘಟನೆ ಮೂಲಕ ರಾಜಕೀಯ ಚಟುವಟಿಕೆ ಆರಂಭಿಸಿದ್ದರು. ಅಂದಿನಿಂದ ರಜನೀಕಾಂತ್ ಯಾವಾಗ ರಾಜಕೀಯ ರಂಗಕ್ಕೆ ಎಂಟ್ರಿ ಕೊಡ್ತಾರೆ? ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧೆ ಮಾಡ್ತಾರಾ? ಜಯಲಲಿತಾ, ಎಂಜಿಆರ್ ರೀತಿ ರಜನಿಕಾಂತ್ ಕೂಡ ತಮಿಳುನಾಡು ಮುಖ್ಯಮಂತ್ರಿಯಾಗಲಿದ್ದಾರಾ? ಹೀಗೆ ಹಲವಾರು ಪ್ರಶ್ನೆ ಕುತೂಹಲಗಳ ಜೊತೆಗೆ ಚರ್ಚೆ ನಡೆಯುತ್ತಲೇ ಇತ್ತು. ಇದೀಗ ಸ್ವತ: ರಜನಿಕಾಂತ್ ಅವರೇ ಸಕ್ರಿಯ ರಾಜಕೀಯ ಪ್ರವೇಶದ ಬಗ್ಗೆ ಮುಹೂರ್ತ ಫಿಕ್ಸ್ ಮಾಡಿದ್ದಾರೆ. ಡಿಸೆಂಬರ್ 31ರಂದು ತಮ್ಮ ಹೊಸ ಪಕ್ಷದ ಸ್ಥಾಪನೆಯನ್ನು ಘೋಷಿಸಿದ್ದಾರೆ.

ಜನವರಿಯಿಂದ ತಮ್ಮ ಹೊಸ ರಾಜಕೀಯ ಪಕ್ಷದ ಕಾರ್ಯಾರಂಭ ಮಾಡುವುದಾಗಿಯೂ ತಿಳಿಸಿದ್ದಾರೆ. ಈ ಮೂಲಕ ತಮಿಳುನಾಡು ಚುನಾವಣೆಗೆ ಐದು ತಿಂಗಳು ಬಾಕಿಯಿರುವಾಗ ನಟ ರಜನಿಕಾಂತ್ ತಮ್ಮ ಸಕ್ರಿಯ ರಾಜಕಾರಣದ ಎಂಟ್ರಿ ಘೋಷಿಸಿದ್ದಾರೆ. ತಮ್ಮ ಹೊಸ ಪಕ್ಷದಿಂದ ಆಧ್ಯಾತ್ಮದ ಜಾತ್ಯಾತೀತ ರಾಜಕೀಯ ನಡೆಸುವುದಾಗಿ ಹೇಳಿರುವ ರಜನಿಕಾಂತ್, ತಮಿಳುನಾಡಿಗಾಗಿ ತಾವು ಪ್ರಾಣತ್ಯಾಗಕ್ಕೂ ಸಿದ್ಧ. ಚುನಾವಣೆಯಲ್ಲಿ ತಾವು ಗೆದ್ದರೆ ಅದು ಜನರ ಗೆಲುವು, ತಾವು ಸೋತರೆ ಅದು ಜನರ ಸೋಲು ಎಂದು ಹೇಳಿದ್ದಾರೆ. ತಮಿಳುನಾಡಿನಲ್ಲಿ ಜಯಲಲಿತಾ, ಎಂಜಿ ಆರ್ ನಿಧನದಿಂದ ದೊಡ್ದ ನಾಯಕತ್ವದ ಕೊರತೆ ಎದುರಾಗಿದೆ. ಈ ನಾಯಕತ್ವದ ಕೊರತೆ ನೀಗಿಸಲು ರಜನಿಕಾಂತ್ ರಾಜಕೀಯ ರಂಗ ಪ್ರವೇಶಿಸಿದ್ದಾರೆ. ಆದರೆ ತಮಿಳುನಾಡಿನಲ್ಲಿ ರಾಜಕೀಯ ಅಷ್ಟು ಸುಲಭದ ಮಾತಲ್ಲ, ಈಗಾಗಲೇ ರಾಜ್ಯದಲ್ಲಿ ಡಿಎಂಕೆ ಎಐಎಡಿಎಂಕೆ ಪಕ್ಷಗಳು ಪ್ರಬಲವಾಗಿವೆ. ಬಿಜೆಪಿ ಸೆಲೆಬ್ರಿಟಿಗಳನ್ನು ಪಕ್ಷಕ್ಕೆ ಬರಮಾಡಿಕೊಳ್ಳುವ ಮೂಲಕ ತಮಿಳುನಾಡಿನಲ್ಲಿ ಖಾತೆ ತೆರೆಯಲು ಹವಣಿಸುತ್ತಿದೆ. ಈ ಸಂದರ್ಭದಲ್ಲಿ ರಜನಿಕಾಂತ್ ಹೊಸ ಪಕ್ಷ ಸ್ಥಾಪಿಸಿ ರಾಜಕಾರಣ ಹೇಗೆ ನಡೆಸುತ್ತಾರೆ ಎಂಬುದು ಕುತೂಹಲಕ್ಕೆ ಕಾರಣವಾಗಿದೆ.

ರಜನಿಕಾಂತ್ ಅವರ ಹೇಳಿಕೆಗಳು ತಮಿಳುನಾಡಿನ ರಾಜಕೀಯದಲ್ಲಿ ಹಿಂದೆ ಸಂಚಲನ ಮೂಡಿಸಿತ್ತು. 1995ರಲ್ಲಿ ಜಯಲಲಿತಾ ನೇತೃತ್ವದ ಎಐಎಡಿಎಂಕೆ ಅಧಿಕಾರದಲ್ಲಿದ್ದಾಗ ಎಐಐಎಡಿಎಂಕೆ ಹಿರಿಯ ಸದಸ್ಯ, ಸಿನಿಮಾ ನಿರ್ಮಾಪಕ ಆರ್.ಎಂ ವೀರಪ್ಪನ್ ಅವರನ್ನು ಸಚಿವ ಸ್ಥಾನದಿಂದ ಜಯಲಲಿತಾ ವಜಾ ಮಾಡಿದ್ದರು. ಈ ಸಂದರ್ಭದಲ್ಲಿ ನಟ ರಜನಿಕಾಂತ್, ಮುಂದಿನ ಚುನಾವಣೆಯಲ್ಲಿ ಜಯಲಲಿತಾ ಗೆಲುವು ಸಾಧಿಸಿದರೆ ತಮಿಳುನಾಡನ್ನು ಆ ದೇವರು ಕೂಡ ಕಾಪಾಡಲು ಸಾಧ್ಯವಿಲ್ಲ ಎಂದು ಕರೆ ನೀಡಿದ್ದರು. ಈ ವೇಳೆಗಾಗಲೇ ಜಯಲಲಿತಾ ವಿರುದ್ಧ ಭ್ರಷ್ಟಾಚಾರ ಆರೋಪಗಳು ಕೂಡ ಕೇಳಿಬಂದಿದ್ದವು. ಇಂತಹ ಸಂದರ್ಭದಲ್ಲಿ ರಜನಿಕಾಂತ್ ನೀಡಿದ್ದ ಕರೆಗೆ ತಮಿಳುನಾಡು ಜನರು ಕೂಡ ಸ್ವಾಗತಿಸಿದ್ದರು. ಹಾಗಾಗಿ ರಜನಿಕಾಂತ್ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಮೂಡಿ ಮಾಡಬಹುದು ಎಂಬ ನಿರೀಕ್ಷೆ ಕೂಡ ಇದೆ. ಇನ್ನೊಂದು ವಿಚಾರವೆಂದರೆ ರಜನಿಕಾಂತ್ ಈ ಹಿಂದೆ ಹಲವು ಬಾರಿ ಪ್ರಧಾನಿ ಮೋದಿಯವರನ್ನು ಬೆಂಬಲಿಸಿದ್ದಾರೆ. ರಾಜಕೀಯದಲ್ಲಿ ನಿರೀಕ್ಷಿತ ಯಶಸ್ಸು ಸಿಗದಿದ್ದರೆ ಮುಂದಿನ ದಿನಗಳಲ್ಲಿ ರಜನಿಕಾಂತ್ ಬಿಜೆಪಿ ಜತೆ ಮೈತ್ರಿ ಅಥವಾ ಬೆಂಬಲದ ನಿರ್ಧಾರ ಕೈಗೊಂಡರೂ ಅಚ್ಚರಿಲ್ಲ.

ಅಂದಹಾಗೆ ಚಿತ್ರರಂಗದಲ್ಲಿ ತಮ್ಮದೇ ವಿಭಿನ್ನ ಶೈಲಿಯ ನಟನೆ, ಡೈಲಾಗ್ ಮೂಲಕ ಅಭಿಮಾನಿಗಳ ಮನಗೆದ್ದಿರುವ ರಜನಿಕಾಂತ್ ಮೂಲ ಹೆಸರು ಶಿವಾಜಿ ರಾವ್ ಗಾಯಕ್ವಾಡ್. 1949 ಡಿಸೆಂಬರ್ 12ರಂದು ಬೆಂಗಳೂರಿನಲ್ಲಿ ಮರಾಠಿ ಸಂಸ್ಕಾರದ ಮನೆಯಲ್ಲಿ ಜನಿಸಿದವರು. ಪ್ರಾಥಮಿಕ ಶಿಕ್ಷಣವನ್ನು ಆಚಾರ್ಯ ಪಾಠಶಾಲೆಯಲ್ಲೂ, ಮುಂದೆ ಕರ್ನಾಟಕದ ರಾಮಕೃಷ್ಣ ವಿದ್ಯಾಶಾಲೆಯಲ್ಲೂ ವಿದ್ಯಾಭಾಸಮಾಡಿದ್ದ ಶಿವಾಜಿ ರಾವ್, 1968ರಿಂದ 73 ರ ಅವಧಿಯಲ್ಲಿ ಚೆನ್ನೈ ಮತ್ತು ಬೆಂಗಳೂರಿನಲ್ಲಿ ಕೆಲಸಕ್ಕಾಗಿ ಓಡಾಡುತ್ತಿದ್ದರು. ಕೊನೆಗೆ ಬೆಂಗಳೂರಿನಲ್ಲಿ ಕಂಡಕ್ಟರ್ ಆಗಿ ಕೆಲಸ ಮಾಡಿದರು. ನಾಟಕಗಳಲ್ಲಿ ಅಭಿನಯಿಸುತ್ತಿದ್ದ ಶಿವಾಜಿಗೆ ಸಿನಿಮಾ ಹುಚ್ಚು, ಅಭಿನಯದಲ್ಲಿ ಅತಿಯಾದ ಆಸಕ್ತಿ. ಇದನ್ನು ಕಂಡ ರಾಜ್ ಬಹದ್ದೂರ್ ಎಂಬ ಗೆಳೆಯ ಮದ್ರಾಸು ಫಿಲಂ ಇನ್ಸ್ಟಿಟ್ಯೂಟಿನಲ್ಲಿ ತರಬೇತಿ ಪಡೆಯಲು ಸೂಚಿಸಿದರು. ಚೆನ್ನೈಗೆ ತೆರಳಿದ ಶಿವಾಜಿಗೆ ಎರಡು ವರ್ಷ ಬೆಂಗಾವಲಾಗಿ ನಿಂತರು. ರಜನಿಕಾಂತ್ ಅವರ ಮೊದಲ ಚಿತ್ರ “ಅಪೂರ್ವ ರಾಗಂಗಳ್”. ಚಿತ್ರರಂಗ ಪ್ರವೇಶಿಸುವ ಮೂಲಕ ಶಿವಾಜಿ ರಾವ್ ಹೆಸರು ರಜನಿಕಾಂತ್ ಆಗಿ ಬದಲಾಯಿತು. ರಜನಿಕಾಂತ್ ಆರಂಭದಲ್ಲಿ ಹಲವು ಚಿತ್ರಗಳಲ್ಲಿ ವಿಲನ್ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಕೆಲ ಯಶಸ್ವಿ ವಾಣಿಜ್ಯ ಚಿತ್ರಗಳಲ್ಲಿ ಮುಖ್ಯ ಪಾತ್ರಗಳಲ್ಲಿ ಗುರುತಿಸಿಕೊಂಡ ನಂತರ, ಇವರಿಗೆ “ಸೂಪರ್ ಸ್ಟಾರ್” ಎಂದು ಕರೆಯಲಾಯಿತು.

LEAVE A REPLY

Please enter your comment!
Please enter your name here