ಬೆಂಗಳೂರು: ರಾಜ್ಯ ರಾಜಧಾನಿ ಸೇರಿದಂತೆ ಹಲವೆಡೆ ಧಾರಾಕಾರ ಮಳೆಯಾಗುತ್ತಿದೆ. ತಮಿಳುನಾಡು ಕರಾವಳಿಯಲ್ಲಿ ಟ್ರಫ್ (ವಾಯುಭಾರ ಕುಸಿತ) ನಿರ್ಮಾಣ ಆಗಿರುವುದರಿಂದ ಕರಾವಳಿ ಜಿಲ್ಲೆಗಳಲ್ಲಿ ಹಾಗೂ ದಕ್ಷಿಣ ಒಳನಾಡಿನ ಹಲವೆಡೆ ಮುಂದಿನ ಎರಡು ದಿನ ಮಳೆ ಪ್ರಮಾಣದಲ್ಲಿ ಹೆಚ್ಚಳವಾಗಲಿದ್ದು, ಹಗುರದಿಂದ ಸಾಧಾರಣ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ವರದಿ ನೀಡಿದೆ.
ಈ ಬಗ್ಗೆ ಮಾತನಾಡಿದ, ಹವಾಮಾನ ಮುನ್ಸೂಚನೆ ವಿಭಾಗದ ನಿರ್ದೇಶಕ ಸಿ.ಎಸ್ ಪಾಟೀಲ್, ದಕ್ಷಿಣ ಒಳನಾಡು ಹಾಗೂ ಕರಾವಳಿಯಲ್ಲಿ ಇಂದು ಅಲ್ಲಲ್ಲಿ ಮಳೆಯಾಗಿದೆ. ನ.೧೭ ಹಾಗೂ ೧೮ ರಂದು ಮಳೆಯ ಪ್ರಮಾಣ ಸ್ವಲ್ಪ ಮಟ್ಟಿಗೆ ಏರಿಕೆಯಾಗಲಿದ್ದು, ಹಗುರದಿಂದ ಸಾಧಾರಣ ಮಳೆಯಾಗಲಿದೆ. ನವೆಂಬರ್ ೧೯ ರಂದು ಮಳೆಯ ಪ್ರಮಾಣ ಕಡಿಮೆಯಾಗಿ, ನ.೨೦ ರಂದು ಒಣಹವೆ ಮುಂದುವರಿಯಲಿದೆ ಎಂದು ತಿಳಿಸಿದ್ದಾರೆ.
ರಾಜ್ಯದ ಯಾವ ಜಿಲ್ಲೆಗಳಲ್ಲಿ ಮಳೆ?
ಇನ್ನು ದಕ್ಷಿಣ ಒಳನಾಡು ಜಿಲ್ಲೆಗಳಾದ ಮೈಸೂರು, ಮಂಡ್ಯ, ಚಾಮರಾಜನಗರ, ತುಮಕೂರು, ಚಿತ್ರದುರ್ಗ, ರಾಮನಗರ, ದಾವಣಗೆರೆ, ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ನಗರ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ಇಂದು ಮತ್ತು ನಾಳೆ ಮಳೆಯಾಗಲಿದೆ.
ಇನ್ನು ಉತ್ತರ ಒಳನಾಡು ಜಿಲ್ಲೆಗಳಾದ ಬಳ್ಳಾರಿ, ಗದಗ, ಬಾಗಲಕೋಟೆ, ರಾಯಚೂರು, ಕೊಪ್ಪಳ, ಹಾವೇರಿ, ಧಾರವಾಡ, ಬೆಳಗಾವಿ ಜಿಲ್ಲೆಗಳಲ್ಲಿ ಅಲ್ಲಲ್ಲಿ ಚದುರಿದ ಹಾಗೂ ಹಗುರದಿಂದ ಸಾಧಾರಣ ಮಳೆಯಾಗಲಿದೆ. ಉಳಿದ ಜಿಲ್ಲೆಗಳಲ್ಲಿ ಒಣಹವೆ ಇರಲಿದೆ.
ಮಲೆನಾಡು ಜಿಲ್ಲೆಗಳಾದ, ಕೊಡಗು, ಚಿಕ್ಕಮಗಳೂರು, ಶಿವಮೊಗ್ಗ, ಹಾಸನ, ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಬೆಂಗಳೂರಿನಲ್ಲಿ ಧಾರಾಕಾರ ಮಳೆ
ಸಿಲಿಕಾನ್ ಸಿಟಿಯಲ್ಲಿ ಎರಡನೇ ದಿನವೂ ಧಾರಾಕಾರವಾಗಿ ಮಳೆಯಾಗುತ್ತಿದೆ. ವರುಣ ದೀಪಾವಳಿ ಸಂಭ್ರಮ ಕಸಿದಿದ್ದು, ಹೊರಗಡೆ ಓಡಾಡದಂತೆ ಮಾಡಿದೆ. ಇನ್ನು ದೀಪಾವಳಿ ವ್ಯಾಪಾರವನ್ನೇ ನೆಚ್ಚಿಕೊಂಡಿದ್ದ ವ್ಯಾಪಾರಸ್ಥರಿಗೂ ಮಳೆ ನಷ್ಟ ತಂದಿದೆ. ಮಾರುಕಟ್ಟೆಗಳು, ಫುಟ್ ಪಾತ್ ವ್ಯಾಪಾರಿಗಳಿಗೆ ಮಳೆ ಬಂದು, ಜನ ಹೊರಗೆ ಬಾರದ ಕಾರಣ ವ್ಯಾಪಾರವೇ ಇಲ್ಲದಾಗಿದೆ. ಕಳೆದ ಎರಡು ಮೂರು ಗಂಟೆಯಿಂದ ಸತತವಾಗಿ ಮಳೆಯಾಗುತ್ತಿದೆ. ನಗರದ ಮೆಜೆಸ್ಟಿಕ್, ರಾಜಾಜಿನಗರ, ಯಶವಂತಪುರ, ಹೆಬ್ಬಾಳ, ಜಯನಗರ, ಕಾರ್ಪೊರೇಷನ್, ಕೋರಮಂಗಲ, ಆಡುಗೋಡಿ, ಬಿಟಿಎಂ ಲೇಔಟ್, ಇಂದಿರಾನಗರ, ಶಾಂತಿನಗರದಲ್ಲಿ ಎಡೆಬಿಡದೆ ಮಳೆ ಸುರಿಯುತ್ತಿದೆ. ಸಧ್ಯ ಮಳೆಯಿಂದ ಯಾವುದೇ ಹಾನಿ ಸಂಭವಿಸಿಲ್ಲ ಎಂದು ಬಿಬಿಎಂಪಿ ಕಂಟ್ರೋಲ್ ರೂಂ ಮಾಹಿತಿ ನೀಡಿದೆ