ಬೆಂಗಳೂರು: ಪ್ರತಾಪ್ಸಿಂಹ ಪೇಟೆ ರೌಡಿ ರೀತಿ ಆಡೋದು ಮೊದಲು ಬಿಡ್ಲಿ ಎಂದು ಸಂಸದೆ ಸುಮಲತಾ ಅಂಬರೀಶ್ ಆಕ್ರೋಶ ವ್ಯಕ್ತಪಡಿಸಿದರು. ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ನಿವಾಸಕ್ಕೆ ಸಂಸದೆ ಸುಮಲತಾ ಅಂಬರೀಶ್ ಭೇಟಿ ನೀಡಿದ್ದರು. ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ಜೆಡಿಎಸ್ ಗೆ ಬಿಜೆಪಿ ಬೆಂಬಲ ನೀಡಬಾರದು ಎಂದು ಮನವಿ ಮಾಡಲು ಸಿಎಂ ನಿವಾಸ ಕಾವೇರಿಗೆ ಭೇಟಿ ನೀಡಿ ಚರ್ಚೆ ನಡೆಸಿದರು. ಬಳಿಕ ಮಾತನಾಡಿದ ಅವರು, ಪ್ರತಾಪ್ಸಿಂಹ ಅವರು ಪಕ್ಕದ ಕ್ಷೇತ್ರದ ಸಂಸದರು. ಅವರು ಎರಡು ಬಾರಿ ಸಂಸದರಾಗಿದ್ದಾರೆ. ಅವರು ಅರಿತು ಮಾತನ್ನಾಡಬೇಕಾಗುತ್ತದೆ. ಪೇಟೆ ರೌಡಿಯ ತರಹ ಮಾತನ್ನಾಡಬಾರದು ಎಂದು ವಾಗ್ದಾಳಿ ನಡೆಸಿದರು.
“ಅಂಬರೀಶ್ ಇದ್ದಾಗ ಮಾತಾಡೋ ಧೈರ್ಯ ಯಾರಿಗೂ ಇರ್ಲಿಲ್ಲ”
ಮುಂದುವರೆದು ಮಾತನಾಡಿದ ಅವರು, ಮೈಸೂರು ಕ್ಷೇತ್ರದಲ್ಲಿ ಏನೆಲ್ಲಾ ಅಭಿವೃದ್ಧಿ ಆಗಿದೆ ಎಂದು ನನಗೂ ಗೊತ್ತಿದೆ. ಕೊಡಗು ಭಾಗಗಳಲ್ಲಿ ರಸ್ತೆಗಳು ಕೊಚ್ಚಿ ಹೋಗಿರುವುದು ನಮಗೂ ದೂರು ಬಂದಿದೆ.
ಅಂಬರೀಶ್ ಇದ್ದಾಗ ಯಾರಿಗೂ ಧೈರ್ಯ ಇರಲಿಲ್ಲ.
ಅಂಬರೀಶ್ ಇದ್ದಾಗ ಇಂತಹ ಮಾತುಗಳನ್ನು ಯಾರು ಆಡುತ್ತಿರಲಿಲ್ಲ. ಇಂದು ಅಂಬರೀಶ್ ಇಲ್ಲ. ಹೀಗಾಗಿ, ಅವರೆಲ್ಲಾ ಮಾತನ್ನಾಡುತ್ತಿದ್ದಾರೆ ಎಂದು ಆರೋಪಿಸಿದರು.
“ಪ್ರತಾಪ್ ಸಿಂಹಗೆ ನನ್ನ ಬಗ್ಗೆ ಮಾತಾಡಲು ಅರ್ಹತೆ, ಹಕ್ಕಿಲ್ಲ”
ಪ್ರತಾಪ್ ಸಿಂಹಗೆ ನನ್ನ ಬಗ್ಗೆ ಮಾತಾಡಲು ಅರ್ಹತೆ, ಹಕ್ಕಿಲ್ಲ. ಪ್ರತಾಪ್ ಸಿಂಹ ಜವಾಬ್ದಾರಿ ಅರಿತು ಮಾತಾಡಲಿ
ಅವರು ಪಕ್ಕದ ಕ್ಷೇತ್ರದ ಸಂಸದರು. ನಮ್ಮ ಕ್ಷೇತ್ರದ ಬಗ್ಗೆ ಅವರು ಮಾತನ್ನಾಡುವುದು ಸರಿಯಲ್ಲ. ಒಬ್ಬ ಸಂಸದರು, ಇನ್ನೊಬ್ಬ ಸಂಸದರ ಬಗ್ಗೆ ಮಾತನ್ನಾಡಲು ಹಕ್ಕಿಲ್ಲ.
ಸಂಸದರು ಸಂಸದರ ಭಾಷೆ ಬಳಸಿದ್ರೆ ಮಾತನ್ನಾಡಿದ್ರೆ ಸರಿ, ಅವರು ಪೇಟೆ ರೌಡಿ ರೀತಿಯಲ್ಲಿ ಮಾತನ್ನಾಡಿದ್ರೆ ನಾನು ಉತ್ತರ ನೀಡುವುದಿಲ್ಲ. ಇದಕ್ಕೆ ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ನಮ್ಮ ಜಿಲ್ಲೆಯ ಜನ ಉತ್ತರ ಕೊಡುತ್ತಿದ್ದಾರೆ ಎಂದು ಸಂಸದೆ ಸುಮಲತಾ ಅಂಬರೀಶ್ ತಿರುಗೇಟು ನೀಡಿದರು.
ಆಯಮ್ಮ ಏನೂ ಕೆಲಸ ಮಾಡಲ್ಲ. ಮಂಡ್ಯದ ಕೆಲಸ ಏನೇ ಇದ್ದರೂ ನನಗೆ ಹೇಳಿ’ ಎಂದು ಯೋಜನಾ ನಿರ್ದೇಶಕರ ಜೊತೆ ಪ್ರತಾಪ್ ಸಿಂಹ ಮೊಬೈಲ್ ನಲ್ಲಿ ಸಂಭಾಷಣೆ ಮಾಡುವುದನ್ನು ಯಾರೋ ಮೊಬೈಲ್ ನಲ್ಲಿ ಸೆರೆಹಿಡಿದು ವಿಡಿಯೋ ವೈರಲ್ ಮಾಡಿದ್ದಾರೆ. ದೇವೇಗೌಡರ ಕುಟುಂಬದವರನ್ನು ಸೋಲಿಸುವ ಸಲುವಾಗಿ ಜನ ಅವರನ್ನು ಅಲ್ಲಿ ಗೆಲ್ಲಿಸಿದ್ದಾರಷ್ಟೇ. ಅವರ ಬಳಿ ಏನೂ ಕೆಲಸವಾಗಲ್ಲ ಎಂದು ಪ್ರತಾಪ್ ಸಿಂಹ ಹೇಳಿದ್ದು ಸುಮಲತಾ ಪರ ಬೆಂಬಲಿಗರನ್ನು ಕೆರಳಿಸಿತ್ತು.
ಡಿಸಿಸಿ ಬ್ಯಾಂಕ್ ಅಧ್ಯಕ್ಷರ ಆಯ್ಕೆ ವಿಚಾರದ ಬಗ್ಗೆ ಮಾತನಾಡಿದ ಅವರು, ಸೂಕ್ತ ವ್ಯಕ್ತಿಯನ್ನ ಆಯ್ಕೆ ಮಾಡಿ ಎಂದು ಮನವಿ ಮಾಡಿದ್ದೇನೆ.. ರೈತರ ಪರ, ರೈತರ ಅಭಿವೃದ್ಧಿಯನ್ನ ಮಾಡೋರನ್ನ ಆಯ್ಕೆ ಮಾಡಲಿ..
ನಾನು ಪಕ್ಷದ ವಿಚಾರ ಮಾತನಾಡೋದಿಲ್ಲ.ರೈತರಿಗೆ ಸ್ಪಂದಿಸೋ ವ್ಯಕ್ತಿಯನ್ನ ಆಯ್ಕೆ ಮಾಡಲಿ..
ಬಿಜೆಪಿ ಜೆಡಿಎಸ್ ಮೈತ್ರಿ ಆಗುತ್ತೋ ಬಿಡುತ್ತೋ ಅದ್ರ ಬಗ್ಗೆ ನಾನು ಮಾತನಾಡೋಕೆ ಹೋಗೋದಿಲ್ಲ. ಅದು ಮುಖ್ಯಮಂತ್ರಿಗಳಿಗೆ ಬಿಟ್ಟ ವಿಚಾರ. ಸೂಕ್ತ ವ್ಯಕ್ತಿಯನ್ನ ಆಯ್ಕೆ ಮಾಡ್ಲಿ. ಇದ್ರ ಹಿಂದೆ ಏನ್ ಏನ್ ನಡೆಯುತ್ತಿದೆ ಅದು ನಂಗೆ ಗೊತ್ತಿದೆ. ಆದ್ರೆ ಮುಖ್ಯಮಂತ್ರಿಗಳು ಪರಿಶೀಲಿಸಿ ನಿರ್ಧಾರ ಕೈಗೊಳ್ಳಲಿ. ನಾನು ಒಳ್ಳೆಯ ವ್ಯಕ್ತಿಯನ್ನ ಆಯ್ಕೆ ಮಾಡ್ಲಿ ಅಂತ ಮಾತ್ರ ಮನವಿ ಮಾಡಿದ್ದೇನೆ ಎಂದು ತಿಳಿಸಿದರು.