‘ಇಂಡಿಯಾ VS ಇಂಗ್ಲೆಂಡ್’ ಚಿತ್ರದ ಮೊದಲ ಹಾಡು ಬಿಡುಗಡೆ ಮಾಡಿದ ಪವರ್ ಸ್ಟಾರ್!

0
183

ಸ್ಯಾಂಡಲ್‍ವುಡ್ ಮೇಷ್ಟ್ರು ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶಿಸುತ್ತಿರುವ ಹೊಸ ಚಿತ್ರ ‘ಇಂಡಿಯಾ VS ಇಂಗ್ಲೆಂಡ್’ ಸಿನಿಮಾ ಬಿಡುಗಡೆಗೆ ಸಿದ್ಧವಿದೆ. ವಸಿಷ್ಠಸಿಂಹ ಹಾಗೂ ಮಾನ್ವಿತಾ ಹರೀಶ್ ಈ ಚಿತ್ರದಲ್ಲಿ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರದ ಮೊದಲ ಹಾಡನ್ನು ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಶುಕ್ರವಾರ ಬಿಡುಗಡೆ ಮಾಡಿದ್ದಾರೆ. ‘ಲವ್ವೇ ಇಲ್ಲದೆ ಗೆಳೆಯ ಲೈಫ್ಲ್ಲೇನಿದೆ’ ಎಂಬ ಸಾಲಿನಿಂದ ಆರಂಭವಾಗುವ ಹಾಡನ್ನು ಬಿಡುಗಡೆ ಮಾಡಿದ ಪುನೀತ್, ಚಿತ್ರತಂಡಕ್ಕೆ ಶುಭ ಕೋರಿದ್ದಾರೆ.

 

ಹಾಡಿನ ಸಾಹಿತ್ಯವನ್ನು ನಾಗತಿಹಳ್ಳಿ ಅವರೇ ಬರೆದಿದ್ದು ಅರ್ಜುನ್ ಜನ್ಯ ಸಂಗೀತ ನೀಡಿದ್ದಾರೆ. ಸಂಜಿತ್ ಹೆಗ್ಡೆ ಈ ಹಾಡನ್ನು ಹಾಡಿದ್ದು ಇದುವರೆಗೂ ಸುಮಾರು 52 ಸಾವಿರಕ್ಕೂ ಹೆಚ್ಚು ಮಂದಿ ಈ ವಿಡಿಯೋ ಹಾಡನ್ನು ನೋಡಿದ್ದಾರೆ. ಇದು ಹೀರೋ ಇಂಟ್ರೊಡಕ್ಷನ್ ಹಾಡಾಗಿದ್ದು ವಸಿಷ್ಠ ಇದೇ ಮೊದಲ ಬಾರಿಗೆ ಲವರ್ ಬಾಯ್ ಪಾತ್ರದಲ್ಲಿ ನಟಿಸಿದ್ದಾರೆ.

 

ನಾಗತಿಹಳ್ಳಿ ಸಿನಿ ಕ್ರಿಯೇಷನ್ಸ್ ಬ್ಯಾನರ್ ಅಡಿ ವೈ.ಎನ್. ಶಂಕ್ರೇಗೌಡ ಹಾಗೂ ಸ್ನೇಹಿತರು ಜೊತೆಗೂಡಿ ಸಿನಿಮಾವನ್ನು ನಿರ್ಮಿಸಿದ್ದಾರೆ. ಇದು ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ 15 ನೇ ಸಿನಿಮಾವಾಗಿದ್ದು ಭಾರತ ಹಾಗೂ ಇಂಗ್ಲೆಂಡ್ ಎರಡೂ ದೇಶಗಳ ಸಂಸ್ಕøತಿ, ಆಚಾರ, ವಿಚಾರಗಳ ಬಗ್ಗೆ ಕೂಡಾ ಸಿನಿಮಾದಲ್ಲಿ ತೋರಿಸಲಾಗಿದೆ. ಚಿತ್ರೀಕರಣ ಬಹುತೇಕ ಇಂಗ್ಲೆಂಡ್‍ನಲ್ಲೇ ಜರುಗಿದೆ.

 

ಈಗಾಗಲೇ ಕೊಲ್ಕತ್ತಾ ಫಿಲ್ಮ್ ಫೆಸ್ಟಿವಲ್‍ನಲ್ಲಿ ಪ್ರೀಮಿಯರ್ ಶೋ ಏರ್ಪಡಿಸಲಾಗಿದ್ದು ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ದೊರೆತಿದೆ ಎನ್ನಲಾಗಿದೆ. ವಿಶೇಷ ಎಂದರೆ ಇದೇ ಮೊದಲ ಬಾರಿಗೆ ಮೇಷ್ಟ್ರು ಸಿನಿಮಾದ ವಿತರಣೆ ಜವಾಬ್ದಾರಿ ಕೂಡಾ ವಹಿಸಿಕೊಂಡಿದ್ದಾರೆ. 2020 ಜನವರಿ 24 ರಂದು ‘ಇಂಡಿಯಾ VS ಇಂಗ್ಲೆಂಡ್’ ಬಿಡುಗಡೆಯಾಗಲಿದೆ.

LEAVE A REPLY

Please enter your comment!
Please enter your name here