ದೇಶದ ಆರ್ಥಿಕತೆಯ ಭಯಾನಕ ವಾಸ್ತವ ಬಿಚ್ಚಿಟ್ಟ ನೀತಿ ಆಯೋಗ..!

0
1017

ಭಾರತದ ಆರ್ಥಿಕತೆ ಕುಂಠಿತಗೊಳ್ಳುತ್ತಿದೆ ಎಂದು ಅನೇಕ ಆರ್ಥಿಕ ತಜ್ಞರು ಮತ್ತು ಅಂತರಾಷ್ಟ್ರೀಯ ವಾಣಿಜ್ಯ ಸಂಸ್ಥೆಗಳು ಕೇಂದ್ರ ಸರ್ಕಾರವನ್ನು ಎಚ್ಚರಿಸುತ್ತಲೇ ಬಂದಿವೆ. ಆದರೆ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಇದನ್ನು ನಿರಾಕರಿಸುತ್ತಲೇ ಬಂದರೂ ಇದೀಗ ಆರ್ಥಿಕ ಹಿನ್ನಡೆಯ ಕರಾಳ ಮುಖವನ್ನು ಮುಚ್ಚಿಟ್ಟುಕೊಳ್ಳುವ ಸ್ಥಿತಿ ಇಲ್ಲ. ಹೌದು, ನೀತಿ ಆಯೋಗ್ ಉಪಾಧ್ಯಕ್ಷ ರಾಜೀವ್ ಕುಮಾರ್ ಅವರೇ ಇವತ್ತಿನ ಆರ್ಥಿಕ ದುಸ್ಥಿತಿಯ ಬಗ್ಗೆ ಕೆಲ ಭಯಾನಕ ವಾಸ್ತವಗಳನ್ನು ಬಿಚ್ಚಿಟ್ಟಿದ್ದಾರೆ.

ಕಳೆದ 7 ದಶಕದಲ್ಲೇ ಹಿಂದೆಂದೂ ಕಂಡು ಕೇಳರಿಯದ ಪರಿಸ್ಥಿತಿ ದೇಶದಲ್ಲಿದೆ. ದೇಶದ ಹಣಕಾಸು ವಲಯ ಸಂಕಷ್ಟಕ್ಕೆ ಸಿಲುಕಿದೆ. 2014ರಲ್ಲಿ ಮೋದಿ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರ ವಿವಿಧ ಕಾರಣಗಳಿಂದಾಗಿ ದೇಶದ ಆರ್ಥಿಕ ಅಭಿವೃದ್ಧಿ ದರ ಇಳಿಮುಖವಾಗುತ್ತಲೇ ಬಂದಿದೆ. ನೋಟು ಅಪಮೌಲ್ಯೀಕರಣ, ಜಿಎಸ್‍ಟಿ ಕ್ರಮಗಳಿಂದಲೂ ಭಾರತದ ಆರ್ಥಿಕತೆಗೆ ಹಿನ್ನಡೆಯಾಗಿದೆ. ಕೇಂದ್ರದ ಹಿಂದಿನ ಆರ್ಥಿಕ ಸಲಹೆಗಾರರು, ನೀತಿ ಆಯೋಗ್‍ನ ಮಾಜಿ ಮುಖ್ಯಸ್ಥರು, ಮಾಜಿ RBI ಗವರ್ನರ್‍ಗಳು ಸೇರಿದಂತೆ ಹಲವಾರು ಮಂದಿ ನಮ್ಮ ಆರ್ಥಿಕತೆ ಅಭಿವೃದ್ಧಿ ಬಗ್ಗೆ ಆಶಾದಾಯಕ ಅಭಿಪ್ರಾಯ ವ್ಯಕ್ತಪಡಿಸಲಿಲ್ಲ. ಸುಬ್ರಮಣಿಯನ್ ಸ್ವಾಮಿ ಅವರಂತಹ ಬಿಜೆಪಿ ನಾಯಕರೂ ಕೂಡ ಆರ್ಥಿಕ ಹಿನ್ನಡೆ ಬಗ್ಗೆ ಸತತವಾಗಿ ಎಚ್ಚರಿಸುತ್ತಲೇ ಬಂದಿದ್ದಾರೆ. ಜಾಗತಿಕ ಮಟ್ಟದ ಈ ಹಿನ್ನಡೆಯು ಭಾರತದ ಆರ್ಥಿಕ ಸ್ಥಿತಿಯ ಮೇಲೂ ದುಷ್ಪರಿಣಾಮ ಬೀರುತ್ತಿರುವ ಸಾಧ್ಯತೆ ಇದೆ. ಕೇಂದ್ರ ಸರ್ಕಾರ ಕುಸಿಯುತ್ತಿರುವ ಆರ್ಥಿಕತೆಗೆ ತಕ್ಷಣವೇ ಸರಿಯಾದ ಕ್ರಮಗಳ ಮೂಲಕ ಮತ್ತೆ ಉತ್ತೇಜನ ನೀಡಬೇಕಿದೆ.

ಇನ್ನು ಆರ್ಥಿಕ ಕುಸಿತ ತಡೆಯಲು ಭಾರತೀಯ ರಿಸರ್ವ್ ಬ್ಯಾಂಕ್ ಈ ಒಂದೇ ವರ್ಷದಲ್ಲಿ ಸತತ ನಾಲ್ಕು ಬಾರಿ ರಿಪೋ ದರ ಇಳಿಕೆ ಮಾಡಿದೆ. ಈ ಇಳಿಕೆಯ ಲಾಭವನ್ನು ಗ್ರಾಹಕರಿಗೆ ವರ್ಗಾವಣೆ ಮಾಡುವಂತೆಯೂ ಬ್ಯಾಂಕ್‍ಗಳಿಗೆ ಸೂಚಿಸಲಾಗಿದೆ. ಬ್ಯಾಂಕೇತರ ಹಣಕಾಸು ಸಂಸ್ಥೆ ವಲಯದ ಹಣಕಾಸು ಸ್ಥಿತಿಯನ್ನು ಉತ್ತಮಗೊಳಿಸಲು ಕ್ರಮ ತೆಗೆದುಕೊಳ್ಳಲಾಗಿದೆ. ಈ ಬ್ಯಾಂಕೇತರ ಹಣಕಾಸು ಸಂಸ್ಥೆಗಳ ಕೆಲ ಆಸ್ತಿಗಳನ್ನು ಖರೀದಿಸಲು ಸಾರ್ವಜನಿಕ ವಲಯದ ಬ್ಯಾಂಕುಗಳಿಗೆ ಸರ್ಕಾರ ಅನುಮತಿ ಕೊಟ್ಟಿದೆ. ಆದರು ಮುಂದಿನ ದಿನಗಳಲ್ಲಿ ದೇಶದ ಆರ್ಥಿಕತೆ ಯಾವ ದಿಕ್ಕಿನತ್ತ ಸಾಗುತ್ತದೆ ಎಂಬುದನ್ನು ಕಾದು ನೋಡಬೇಕಿದೆ.

LEAVE A REPLY

Please enter your comment!
Please enter your name here