“ಪೊಲೀಸ್ ಅಧಿಕಾರಿಗಳು ಮುನಿರತ್ನ ಜೊತೆ ಕೈಜೋಡಿಸಿ ಅಕ್ರಮಕ್ಕೆ ರಕ್ಷಣೆ ನೀಡುತ್ತಿದ್ದಾರೆ”: ಡಿಕೆ ಸುರೇಶ್

0
59

ಪೊಲೀಸ್ ಅಧಿಕಾರಿಗಳು ಮುನಿರತ್ನ ಅವರ ಜೊತೆ ಕೈಜೋಡಿಸಿ ಇವರ ಅಕ್ರಮಕ್ಕೆ ರಕ್ಷಣೆ ನೀಡುತ್ತಿದ್ದಾರೆ ಎಂದು ಸಂಸದ ಡಿಕೆ ಸುರೇಶ್ ಆರೋಪಿಸಿದರು.

ಕೆಪಿಸಿಸಿ ಕಚೇರಿ ಯಲ್ಲಿ ಸುದ್ದಿ ಗೋಷ್ಠಿ ನಡೆಸಿ ಮಾತನಾಡಿದ ಅವರು,
ಈತನಿಗೆ ಚುನಾವಣಾ ಆಯೋಗವಾಗಲಿ, ಪೊಲೀಸ್ ಇಲಾಖೆಯಾಗಲಿ ಯಾವುದೂ ಲೆಕ್ಕಕ್ಕೆ ಇಲ್ಲ. ನಿನ್ನೆ ರಾತ್ರಿ ಮುಂಚಿತವಾಗಿ ಎಚ್ಚರಿಕೆ ನೀಡದೆ ರಿಂಗ್ ರೋಡ್ ನಲ್ಲಿ ತಡೆ ನಡೆಸಿದರು. ಬೆಳಗಿನ ಜಾವ 3 ಗಂಟೆವರೆಗೂ ರಸ್ತೆ ತಡೆದರು. 12 ತಾಸು ಕಳೆದರೂ ಅವರ ಮೇಲೆ ಯಾವುದೇ ಕ್ರಮ ಇಲ್ಲ. ಅವರು ಪೊಲೀಸ್ ಠಾಣೆಯ ಮುಂದೆಯೋ, ಚುನಾವಣಾ ಆಯೋಗದ ಮುಂದೆಯೋ ಧರಣಿ ಕೂರಬೇಕಿತ್ತು. ಆದರೆ ಅದನ್ನು ಮಾಡಲಿಲ್ಲ.
ಈಗಲೂ ಮತದಾರರ ಗುರುತಿನ ಚೀಟಿ ಹಾಗೂ ಆಧಾರ್ ಕಾರ್ಡ್ ಪಡೆಯುತ್ತಿದ್ದಾರೆ. ಅಲ್ಪಸಂಖ್ಯಾತರಿಗೆ ಸಾವಿರ ರೂಪಾಯಿ ಕೊಟ್ಟು, ಮತದಾನ ಮಾಡಬೇಡಿ ಅಂತಾ ಹೇಳುತ್ತಿದ್ದಾರೆ. ಇದರ ಬಗ್ಗೆ ಚುನಾವಣಾ ಆಯೋಗಕ್ಕೆ ದೂರು ಕೊಟ್ಟರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ದೂರಿದರು.

ಇನ್ನು ಪೊಲೀಸ್ ಅಧಿಕಾರಿಗಳು ಇವರ ಜತೆ ಕೈಜೋಡಿಸಿ ಇವರ ಅಕ್ರಮಕ್ಕೆ ರಕ್ಷಣೆ ನೀಡುತ್ತಿದ್ದಾರೆ. ಮುನಿರತ್ನ ಅವರೇ ಗೃಹಮಂತ್ರಿ ಆಗಿ ಬರುತ್ತೇನೆ ಅಂತಿದ್ದಾರೆ. ಹಾಗಾದ್ರೆ ಈಗಿನ ಗೃಹ ಸಚಿವರು ಜಾಗ ಖಾಲಿ ಮಾಡ್ತಾರಾ? ಯಡಿಯೂರಪ್ಪನವರು ಗೃಹ ಸಚಿವ ಸ್ಥಾನ ನೀಡುವುದಾಗಿ ಮಾತು ಕೊಟ್ಟಿದ್ದಾರಾ? ಇದೇ ವೇಳೆ ಕೆಲವು ಮಾಧ್ಯಮಗಳು ಕೂಡ ಅವರ ಪರವಾಗಿ ಕೆಲಸ ಮಾಡುತ್ತಿವೆ. ಇದನ್ನು ನೋಡಿದರೆ ಪತ್ರಿಕಾ ಸ್ವಾತಂತ್ರ್ಯವೂ ಹರಣವಾಗಿದೆಯಾ ಅಂತಾ ಅನುಮಾನ ಮೂಡುತ್ತಿದೆ ಎಂದರು.

ನಿನ್ನೆ ರಾತ್ರಿ ಜಾಲಹಳ್ಳಿಯಲ್ಲಿ ನಮ್ಮ ಕಾರ್ಯಕರ್ತರ ಮನೆಗೆ ನುಗ್ಗಿ ಅವರಿಗೆ ಜೀವ ಬೆದರಿಕೆ ಹಾಕಿದ್ದಾರೆ. 3ನೇ ತಾರೀಖಿನ ನಂತರ ನೋಡಿಕೊಳ್ಳುತ್ತೇವೆ ಎಂದು ಬೆದರಿಕೆ ಹಾಕುತ್ತಿದ್ದಾರೆ. ಪೊಲೀಸರಿಗೆ ದೂರು ಕೊಟ್ಟರೆ ಅದನ್ನು ತೆಗೆದುಕೊಳ್ಳುವುದಿಲ್ಲ. ಪೊಲೀಸ್ ಅಧಿಕಾರಿಗಳೇ ಚುನಾವಣೆ ಏಜೆಂಟರಂತೆ ವರ್ತಿಸುತ್ತಿದ್ದಾರೆ ಎಂದು ಆರೋಪಿಸಿದರು.

ಈ ಚುನಾವಣೆಯಲ್ಲಿ ಹಣದ ಹೊಳೆ ಹರಿಯುತ್ತಿದೆ. ಅಧಿಕಾರಿಗಳ ದುರುಪಯೋಗ ಆಗುತ್ತಿದೆ. ಆದರೂ ಚುನಾವಣಾ ಆಯೋಗ ಕಣ್ಣುಮುಚ್ಚಿ ಕೂತಿದೆ. ಎಲ್ಲರೂ ಮುನಿರತ್ನ ಅವರ ಪರ ಕೆಲಸ ಮಾಡುತ್ತಿದ್ದಾರೆ ಎಂದು ದೂರಿದರು.

LEAVE A REPLY

Please enter your comment!
Please enter your name here