ರೈತರ ಖಾತೆಗಳಿಗೆ ಆನ್ ಲೈನ್ ಮೂಲಕ 36.57 ಕೋಟಿ ರೂಪಾಯಿ ಹಣ ಜಮೆ

0
91

ಬೆಂಗಳೂರು: ಅತಿವೃಷ್ಠಿಯಿಂದ ಬೆಳೆ ಹಾನಿ ಹಿನ್ನೆಲೆಯಲ್ಲಿ ನೊಂದ 51,810 ರೈತರ ಬ್ಯಾಂಕ್ ಖಾತೆಗಳಿಗೆ 36.57 ಕೋಟಿ ರೂಪಾಯಿಗಳ ಇನ್ ಪುಟ್ ಸಬ್ಸಿಡಿ ಜಮಾವಣೆ ಮಾಡಿದೆ. ಈ ಹಿಂದೆ ಸುರಿದ ಮಳೆಯಿಂದ ಬೆಳೆನಾಶವಾಗಿದ್ದ ರೈತರ ಖಾತೆಗೆ ಆನ್ ಲೈನ್ ಮೂಲಕ ಹಣ ಜಮೆ ಮಾಡಲಾಗಿದೆ.

ಅತಿವೃಷ್ಟಿ ಹಿನ್ನಲೆಯಲ್ಲಿ ಡಿಸಿಗಳ ಜೊತೆ ಸಿಎಂ ಬಿ.ಎಸ್ ಯಡಿಯೂರಪ್ಪ ಗೃಹ ಕಚೇರಿ ಕೃಷ್ಣಾದಲ್ಲಿ ವಿಡಿಯೋ ಕಾನ್ಪರೆನ್ಸ್ ನಡೆಸಿದರು. ಸಭೆಯ ಬಳಿಕ ಮಾತನಾಡಿದ ಬಿಎಸ್ ಯಡಿಯೂರಪ್ಪ, ನೀತಿ ಸಂಹಿತೆ ಇರುವ ಕಾರಣ ವಿವರವಾಗಿ ಏನೂ ಹೇಳಲು ಸಾಧ್ಯವಾಗಲ್ಲ. ೧೫ ಜನ ಡಿಸಿಗಳ ಜೊತೆ ಮಳೆ ಪರಿಸ್ಥಿತಿ ಚರ್ಚೆ ಮಾಡಿದ್ದೇನೆ. ಪರಿಹಾರ ಕ್ರಮ, ನೆರವಿನ ಬಗ್ಗೆ ಚರ್ಚೆ ಮಾಡಿದ್ದೇನೆ. ಜಿಲ್ಲಾಧಿಕಾರಿಗಳ ಬಳಿ ಅಗತ್ಯ ಹಣ ಇದೆ. ಈಗಷ್ಟೇ ನಾನು ಕೇಂದ್ರ ಗೃಹ ಸಚಿವರ ಜೊತೆ ಮಾತನಾಡಿದ್ದೇನೆ. ಅಗತ್ಯ ನೆರವು ಕೊಡುವುದಾಗಿ ಭರವಸೆ ಕೊಟ್ಟಿದ್ದಾರೆ. ರೈತರ ರಕ್ಷಣೆಗೆ ನಾವು ಬದ್ಧವಾಗಿದ್ದೇವೆ. ಕ್ರಮ ತೆಗೆದುಕೊಂಡು ಎಲ್ಲಾ ಸರಿಪಡಿಸುತ್ತೇವೆ ಎಂದು ತಿಳಿಸಿದರು.

ಸಭೆಯಲ್ಲಿ ರೈತರ ಬೆಳೆ ಹಾನಿ ಕುರಿತು ಒಂದು ವಾರದೊಳಗೆ ವರದಿ ನೀಡಿ ಎಂದು ಜಿಲ್ಲಾಧಿಕಾರಿಗಳಿಗೆ ಸಿಎಂ ಯಡಿಯೂರಪ್ಪ ಸೂಚನೆ ನೀಡಿದರು. ಯಾವ ಯಾವ ಜಿಲ್ಲೆಗಳಲ್ಲಿ ಮಳೆಯಿಂದ ಎಷ್ಟು ಬೆಳೆ ನಾಶ ಆಗಿದೆ. ಅದರ ಅಂದಾಜು ವಿವರ ಸಲ್ಲಿಸಿ, ವರದಿ ಸಲ್ಲಿಕೆ ನಂತರ ಪರಿಹಾರದ ಬಗ್ಗೆ ನಿರ್ಧಾರ ಮಾಡೋಣ ಎಂದು ತಿಳಿಸಿದ್ದಾರೆ

ಮತ್ತಷ್ಟು ಕೋವಿಡ್ ಪ್ರಕರಣ ಉಲ್ಬಣ..?

ಕೋವಿಡ್ 19 ಹಿನ್ನೆಲೆಯಲ್ಲಿ ಎಲ್ಲಾ ಮುನ್ನೆಚ್ಚರಿಕೆ ಕ್ರಮ ಕೈಗೊಂಡೇ ಪರಿಹಾರ ಕ್ರಮ ತೆಗೆದುಕೊಳ್ಳಿ. ಮಳೆಯಿಂದ ಕೊವೀಡ್ ಮತ್ತಷ್ಟು ಉಲ್ಬಣ ವಾಗುವ ಸಾಧ್ಯತೆ ಇದೆ. ಇದಕ್ಕಾಗಿ ಎಲ್ಲಾ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಿ. ಈಗ ಶೀತ, ಕೆಮ್ಮು ಬಂದೇ ಬರುತ್ತದೆ. ಜನರಿಗೆ ಅಗತ್ಯ ವೈದ್ಯಕೀಯ ನೆರವು ನೀಡಿ. ಮಣ್ಣಿನ ಮನೆಗಳ ಒಂದು ಗೋಡೆ ಬಿದ್ದರೆ ಮತ್ತೆ ಅದೇ ಮನೆ ಕಟ್ಟಿಕೊಡುವುದು ಬೇಡ. ಪೂರ್ತಿ ಮನೆ ಮರು ನಿರ್ಮಾಣ ಮಾಡಿ ಕೊಡಿ ಎಂದು ಜಿಲ್ಲಾಧಿಕಾರಿಗಳಿಗೆ ಸಿಎಂ ಯಡಿಯೂರಪ್ಪ ಸೂಚನೆ ನೀಡಿದರು.

ಇನ್ನು ನೆರೆ ಸಂತ್ರಸ್ತರ ರಕ್ಷಣೆಗಾಗಿ ಪುಣೆ ಮತ್ತು ಚನ್ನೈ ರಾಜ್ಯಗಳಿಂದ ಎನ್‍ಡಿಆರ್‍ಎಫ್ ನ ಆರು ಹೆಚ್ಚುವರಿ ತಂಡಗಳು ಸೇರಿದಂತೆ ಒಟ್ಟು 12 ಎನ್.ಡಿ.ಆರ್.ಎಫ್ ತಂಡಗಳನ್ನು ನಿಯೋಜಿಸಲಾಗಿದೆ. ಕಲಬುರಗಿಗೆ ಮೂರು ತಂಡಗಳು, ಯಾದಗಿರಿಗೆ ಎರಡು ಹಾಗೂ ರಾಯಚೂರಿಗೆ ಒಂದು ತಂಡವನ್ನು ನಿಯೋಜಿಸಲಾಗಿದೆ. ಇದರೊಂದಿಗೆ ಎಸ್.ಡಿ.ಆರ್.ಎಫ್ ತಂಡಗಳನ್ನು ರಕ್ಷಣಾ ಕಾರ್ಯಗಳಿಗೆ ನಿಯೋಜಿಸಲಾಗಿದೆ.

ಉಡುಪಿ, ದಕ್ಷಿಣ ಕನ್ನಡ, ಬಾಗಲಕೋಟೆ ಹಾಗೂ ಬಳ್ಳಾರಿ ಜಿಲ್ಲೆಗಳಿಂದ 14 ದೋಣಿಗಳನ್ನು ಕಲಬುರಗಿ ಮತ್ತು ಯಾದಗಿರಿ ಜಿಲ್ಲೆಗಳಿಗೆ ಕಳುಹಿಸಲಾಗಿದೆ. ನೆರೆ ಸಂತ್ರಸ್ತರ ರಕ್ಷಣೆಗಾಗಿ ರಕ್ಷಣಾ ಹೆಲಿಕಾಪ್ಟರ್‍ಗಳನ್ನು ಕಳುಹಿಸಲಾಗಿದೆ ಎಂದ ಮುಖ್ಯಮಂತ್ರಿಗಳು ಸಂಘ ಸಂಸ್ಥೆಗಳನ್ನು, ಸಾರ್ವಜನಿಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ನಿರ್ವಹಿಸಿ. ಜನರ ನೋವಿಗೆ ತಕ್ಷಣ ಸ್ಪಂದಿಸಿ ಎಂದು ಅಧಿಕಾರಿಗಳಿಗೆ ಕರೆ ನೀಡಿದರು.

LEAVE A REPLY

Please enter your comment!
Please enter your name here