ಪೊಸಿಟಿವ್ ದೃಷ್ಟಿಕೋನದ ಅವಲೋಕನ: ಇದೊಂಥರಾ ಆತ್ಮಕಥೆ.!

0
508

ಹಾಯ್ ಬೆಂಗಳೂರು ಪತ್ರಿಕೆಯ ರಾಜಕೀಯ ಲೇಖನಗಳು ಸದಾ ವಿಭಿನ್ನ, ಒಂಥರಾ ಆಫ್ ದಿ ರೆಕಾರ್ಡ್ ಸ್ಟೋರಿಗಳಂತೆ. ಮುಂದೇನಾಗಬಹುದು ? ಎಂಬ ಊಹೆ ಇಟ್ಟುಕೊಂಡು ಬರೆದ ಸಂಗತಿಗಳು ನಿಜವಾಗಲೂ ರಾಜಕೀಯ ನಾಯಕರೊಡನೆ ಆರ್.ಟಿ.ವಿಠ್ಠಲಮೂರ್ತಿ ಹೊಂದಿದ್ದ‌ ವೈಯಕ್ತಿಕ ಅನುಬಂಧವೂ ಕಾರಣವಾಗಿರಬಹುದು. ಒಟ್ಟಾರೆ ಬೆಳಗೆರೆ ಖಾಸ್ ಬಾತ್ ನಲ್ಲಿನ ಗೇಯತೆ ರಾಜಕೀಯ ಲೇಖನಗಳಲ್ಲಿ ಇರುತ್ತಿತ್ತು.
ಪತ್ರಿಕೆಯ ಮೊದಲ ವಾರ್ಷಿಕೋತ್ಸವದ ಸಂದರ್ಭದಲ್ಲಿ ತುಂಬಾ ಉತ್ಸಾಹದಿಂದ ಆರ್.ಟಿ.ವಿ ಓಡಾಡುವುದ ಕಂಡಿದ್ದೆ.

 


ವೈಯಕ್ತಿಕ ಪರಿಚಯ ಬೆಳೆಸಿಕೊಳ್ಳದೇ ಮೂರು ದಶಕ ಲೇಖನಗಳ ಅಸ್ವಾಧಿಸಿದೆ.

ಮತ್ತೆ ಇವರ ಭೇಟಿ ಹೆಚ್ಚು ಆಪ್ತವಾದದ್ದು ಈ ಫೇಸ್ ಬುಕ್ ಎಂಬ ಅಕ್ಷರ ಸರೋವರದಲ್ಲಿ.
ಸೋಷಿಯಲ್ ಮೀಡಿಯಾ ಲೆಕ್ಕಕ್ಕೆ ಲೇಖನಗಳು ತುಂಬ ದೊಡ್ಡದೆನಿಸಿದರೂ ಓದಿಸಿಕೊಂಡು ಹೋಗುವ ಕಂಟೆಂಟ್ ಇರುತ್ತಿತ್ತು. ನನ್ನಿಂದ ನಿರಂತರ ಕಮಂಟ್ ಹೋಗಲು ಹಾಯ್ ಓದಿನ ಬಿಸುಪು ಕಾರಣವಾಯಿತು.

ಇಂದಿನ ರಾಜಕಾರಣದಂತೆ ಮಾಧ್ಯಮವೂ ತನ್ನ ಮೌಲ್ಯ ಕಳೆದುಕೊಂಡಿದೆ. ಪ್ರಾಮಾಣಿಕರಿಗೆ ಜಾಗ ಕಡಿಮೆಯಾಗಿದೆ. ಹಣ,ಲಾಬಿ,ಪೇಯ್ಡ್ ನ್ಯೂಸ್, ಟಿ ಆರ್ ಪಿ, ಸೆಲೆಬ್ರಿಟಿ ಆಗುವ ಧಾವಂತ,ರಾಜಕೀಯ ನಾಯಕರ ಸಖ್ಯ, ಐಷಾರಾಮಿ ಬದುಕು, ಎಡ-ಬಲ ಸೈದ್ಧಾಂತಿಕ ಗೊಂದಲಗಳ ಮಧ್ಯೆ ಪತ್ರಿಕಾ ಧರ್ಮ ಕಳೆದುಹೋಗಿದೆ. ಆದರೆ ಇದೊಂಥರಾ ಆತ್ಮಕಥೆ ವಿಠ್ಠಲಮೂರ್ತಿಯ ಪ್ರಾಮಾಣಿಕ ಮನಸ್ಥಿತಿಯನ್ನು ಅನಾವರಣ ಮಾಡುತ್ತದೆ.
ಪ್ರತಿಯೊಬ್ಬ ರಾಜಕೀಯ ನಾಯಕರಲ್ಲಿ ಇರುವ ಅಥವಾ ಇರಬಹುದಾದ ಒಳ್ಳೆಯ ಮುಖ ಮತ್ತು ಸಂದೇಶಗಳ ಮೇಲೆ ಬೆಳಕು ಚೆಲ್ಲುತ್ತದೆ.

 

ಯಾರನ್ನಾದರೂ ಪ್ರಾಮಾಣಿಕ ಎಂದು ಕರೆಯಲು ಭಯವಾಗುವಷ್ಟು ಹಿಪ್ಪೊಕ್ರೇಟ್ಸ್ ತುಂಬಿ ತುಳುಕುತ್ತಿದ್ದಾರೆ.
ಪ್ರಾಮಾಣಿಕತೆಯ ಸೋಗಿನಲ್ಲಿ ಟ್ರಾನ್ಸಫರ್ ಮತ್ತು ರಿಯಲ್ ಎಸ್ಟೇಟ್ ಧಂದೆ ಮಾಡುವವರ ಕಥೆ ಕೇಳಿ ಬೆರಗಾಗಿದ್ದೇನೆ. ಲೇಖನಿ ಹಿಡಿದು ಬೆದರಿಸುವ ಜನರ ಮಧ್ಯೆ ಸಭ್ಯ, ಸೌಮ್ಯ ಗುಣದ ವಿಠ್ಠಲಮೂರ್ತಿ ಪ್ರಾಮಾಣಿಕತೆಯ ಸ್ಪೂರ್ತಿ. ಲಂಕೇಶ್, ರವಿ ಬೆಳಗೆರೆ, ಜೋಗಿ,ವಿಶ್ವೇಶ್ವರ ಭಟ್ ಮತ್ತು ಆರ್.ಟಿ.ವಿಠ್ಠಲಮೂರ್ತಿ ತಮ್ಮದೇ ಆದ ಓದುಗರ ಬಳಗ ಹೊಂದಿದ್ದಾರೆ.

ಆರ್.ಟಿ.ವಿ. ಅವರನ್ನು ಖುದ್ದಾಗಿ ಭೇಟಿ ಆಗದಿದ್ದರೂ ನಮ್ಮ ಬರಹ ಆತ್ಮೀಯತೆಯನ್ನು ಹುಟ್ಟು ಹಾಕಿದೆ. ಅದೇ ಪ್ರೀತಿಯಿಂದ ಅವರು ಕಳಿಸಿದ ಪುಸ್ತಕವನ್ನು ಒಂದೇ ಓದಿಗೆ ಪ್ರಯಾಣದ ವೇಳೆಯಲ್ಲಿ ಮುಗಿಸಿ ತಲೆ ಎತ್ತಿದಾಗ ಬಾನ ತುಂಬ ಅದೇನೋ ಹೊಳಪು, ಬೆಳಗು.
ಕೇವಲ ನಿಶಬ್ದಾನುಭವದ ಸದ್ದು.

 

ಬಾಲ್ಯದಲ್ಲಿ ತಾಯಿ ಹೇಳಿದ ಪ್ರಾಮಾಣಿಕತೆಯ ಮಹತ್ವ ಮರೆಯದ ಅವರದು ಖಂಡಿತ ನಂಬಬಹುದಾದ ವ್ಯಕ್ತಿತ್ವ. ಹತ್ತಾರು ಪತ್ರಿಕೆಗಳಿಗಾಗಿ ನಿರಂತರ ದುಡಿಯುವ ಅಲೆಮಾರಿ ಬ್ರಹ್ಮಚಾರಿ. ‌ಇದು ಕೇವಲ ಹೊಟ್ಟೆಪಾಡಲ್ಲ ಅದರಾಚೆಗಿನ ಹಸಿವು,ತುಡಿತ ಒಳ್ಳೆಯದನ್ನು ಮಾತ್ರ ಗ್ರಹಿಸಿ ದಾಖಲಿಸಬೇಕೆಂಬ ಜೀವಚೈತನ್ಯ. ಚಿಕ್ಕ ಪುಟ್ಟ ಅಧ್ಯಾಯಗಳು ಓದಿಸಿಕೊಂಡು ಹೋಗಿ ಕುತೂಹಲ ಉಳಿಸಿಕೊಳ್ಳುತ್ತವೆ. ಅತಿ ಹೆಚ್ಚು ಸಲ ಬಂದು ಹೋಗುವ ಜೆ.ಎಚ್.ಪಟೇಲರ ಮಾತುಗಳು ಅವರೊಳಗಡಗಿರುವ ಸಂತನನ್ನು ಪರಿಚಯಿಸುತ್ತವೆ.

ಅನೇಕ ರಾಜಕಾರಣಿಗಳ‌ ಗೊತ್ತಿರದ ಒಳ್ಳೆಯತನ ದಾಖಲಾಗಿದೆ. ಹೆಗಡೆ ಅವರ ಆರ್ಥಿಕ ದುಸ್ಥಿತಿಯನ್ನು ಓದಿದಾಗ ನಂಬೋದೇ ಕಷ್ಟ. ನಮಗೆ ಇಂದಿನ‌ ರಾಜಕಾರಣದ ಹಣದಾಹ ಮತ್ತು ನೂರಾರು ಕೋಟಿಗಳ ಪ್ರಕರಣಗಳ ಮುಂದೆ ಇದೆಲ್ಲಾ ವಿಚಿತ್ರ ಅನಿಸಿಬಿಡುತ್ತೆ. ಆಫ್ ದಿ ರೆಕಾರ್ಡ್ ಮಾತುಕತೆಯ ಮಹತ್ವ ಅರ್ಥವಾಗುತ್ತದೆ. ಜೀವನದಲ್ಲಿ ನಾವು ಅನೇಕ ವ್ಯಕ್ತಿಗಳ ಕೆಟ್ಟ ಗುಣಗಳನ್ನು ಮಾತ್ರ ನೋಡಿ ಅವುಗಳನ್ನು ಮಾತ್ರ ಮಾತನಾಡಿ ನಮ್ಮ ಅಭಿರುಚಿ ಕೆಡಿಸಿಕೊಂಡಿರುತ್ತೇವೆ. ಆದರೆ ವಿಠ್ಠಲಮೂರ್ತಿ ಸಕಾರಾತ್ಮಕ ದೃಷ್ಟಿಕೋನದಿಂದ ವ್ಯಕ್ತಿಗಳ ಇನ್ನೊಂದು ಅಪರೂಪದ ಮುಖ ಪರಿಚಯಿಸಿ ಅಷ್ಟೇ ಅಪರೂಪದ ಘಟನೆಗಳ ಮೆಲುಕು ಹಾಕಿ ಹೊಸ ಅನುಭವ ಹುಟ್ಟು ಹಾಕುತ್ತಾರೆ.

 

ಈಗ ಇದು ವ್ಯಕ್ತಿಗಳನ್ನು ನೋಡುವ ಅನಿವಾರ್ಯ ಮತ್ತು ಉತ್ತಮ ಉಪಕ್ರಮವಾಗಿದೆ.
ಬರೀ ನೆಗೆಟಿವ್ ಸಂಗತಿ ನೋಡಿ ನಮ್ಮ ಮನಸ್ಸು ಕೊಳಕಾಗಿ ಹೋಗಿರುವಾಗ ಈ ಕೃತಿ ಕೊಂಚ ಭಿನ್ನ ಅನುಭವ ಕೊಡುತ್ತದೆ. ಹದಿಮೂರನೇ ಅಧ್ಯಾಯ ಹೊರತು ಪಡಿಸಿದರೆ ಉಳಿದ ಲೇಖನಗಳಲ್ಲಿ ದಾಖಲಾಗಿರುವ ಸಂಗತಿಗಳಲ್ಲಿ ‌ಪ್ರಾಮಾಣಿಕತೆ ಎದ್ದು ಕಾಣುತ್ತದೆ.

 

ಇಂತಹ ಸಾವಿರಾರು ಘಟನೆಗಳನ್ನು ದಾಖಲಿಸುವಷ್ಟು ಸಂಗ್ರಹ ಹೊಂದಿರುವ ವಿಠ್ಠಲಮೂರ್ತಿ ಅವರಿಂದ ಇನ್ನಷ್ಟು ಕೃತಿಗಳು ಹೊಸ ತಲೆಮಾರಿನ ಪತ್ರಕರ್ತರ ಕೈಪಿಡಿಯಾಗಲಿ.
ಇನ್ನೋರ್ವ ಹಿರಿಯ ಪತ್ರಕರ್ತ ಜಿ.ಎನ್.ಮೋಹನ ತುಂಬಾ ಸುಂದರವಾಗಿ ಪ್ರಕಾಶಿಸಿದ್ದಾರೆ. ವಿನೂತನ ಪುಸ್ತಕ ಕೊಟ್ಟ ಇಬ್ಬರಿಗೂ ಥ್ಯಾಂಕ್ಸ್.

#ಸಿದ್ದು_ಯಾಪಲಪರವಿ.

LEAVE A REPLY

Please enter your comment!
Please enter your name here