ಪ್ರವಾಸಿ ವೆಸ್ಟ್ ಇಂಡೀಸ್ ಹಾಗೂ ಭಾರತ ತಂಡದ ನಡುವಿನ ಟ್ವೆಂಟಿ-20 ಸರಣಿ ಮುಗಿದಿದ್ದು, ಇದೀಗ ಎರಡು ತಂಡಗಳು ಏಕದಿನ ಸರಣಿಗೆ ಸಜ್ಜಾಗಿದೆ. ಟಿ20 ಸರಣಿಯನ್ನು 2-1ರ ಅಂತರದಲ್ಲಿ ಜಯಿಸಿರುವ ಭಾರತ ತಂಡ ಏಕದಿನ ಸರಣಿಯನ್ನು ಜಯಿಸುವ ವಿಶ್ವಾಸದೊಂದಿಗೆ ಚೆನ್ನೈಗೆ ಬಂದಿಳಿದಿದೆ.
ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ, ತಂಡದೊಂದಿಗೆ ಚೆನ್ನೈಗೆ ಬಂದಿಳಿದಿರುವ ವಿಚಾರವನ್ನು ಫೋಟೋವೊಂದನ್ನು ಪೋಸ್ಟ್ ಮಾಡುವ ಮೂಲಕ ಟ್ವಿಟರ್ ನಲ್ಲಿ ತಿಳಿಸಿದ್ದಾರೆ.ಮೂರು ಪಂದ್ಯಗಳ ಏಕದಿನ ಸರಣಿಯ ಮೊದಲ ಪಂದ್ಯ ಡಿ.15 ರಂದು ಎಂಎ ಚಿದಂಬರಂ ಮೈದಾನದಲ್ಲಿ ನಡೆಯಲಿದೆ. ಎರಡನೇ ಪಂದ್ಯ ಡಿ.18 ರಂದು ವಿಶಾಖಪಟ್ಟಣದಲ್ಲಿ, ಕೊನೆಯ ಪಂದ್ಯ ಡಿ. 22 ರಂದು ಕಟಕ್ ನಲ್ಲಿ ನಡೆಯಲಿದೆ.
ಭಾರತ ತಂಡದಲ್ಲಿ ಗಾಯಾಳು ಶಿಖರ್ ಧವನ್ ಸ್ಥಾನಕ್ಕೆ ಮಯಾಂಕ್ ಅಗರ್ವಾಲ್ ಸೇರ್ಪಡೆಯಾಗಿದ್ದಾರೆ. ನಾಯಕ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಹಾಗೂ ಕೆ.ಎಲ್.ರಾಹುಲ್ ಉತ್ತಮ ಫಾರ್ಮ್ ಮುಂದುವರಿಸುವ ಇರಾದೆಯಲ್ಲಿದ್ದಾರೆ.
ಏಕದಿನ ಸರಣಿಯಲ್ಲೂ ವಿಂಡೀಸ್ ತಂಡವನ್ನು ಪೊಲಾರ್ಡ್ ಮುನ್ನಡೆಸುತ್ತಿದ್ದಾರೆ. ಗಾಯದ ಸಮಸ್ಯೆಗೊಳಗಾಗಿರುವ ಎವಿನ್ ಲೂವಿಸ್ ಪಂದ್ಯಕ್ಕೆ ಲಭ್ಯವಾಗುವರೇ ಎಂಬುದು ಅನುಮಾನವೆನಿಸಿದೆ.