ಬೆಂಗಳೂರು: ಒಂದು ದಿನದಲ್ಲಿ ಸಂಪುಟ ವಿಸ್ತರಣೆ ಆಗುತ್ತೆ.. ಇನ್ನೆರಡು ದಿನದಲ್ಲಿ ಸಂಪುಟ ವಿಸ್ತರಣೆ ಆಗುತ್ತೆ ಅಂತ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಸಚಿವಾಕಾಂಕ್ಷಿಗಳನ್ನ ಸಮಾಧಾನ ಪಡಿಸುತ್ತಾ ಬರುತ್ತಿರುವಾಗಲೇ ಸಂಪುಟ ವಿಸ್ತರಣೆಗೆ ಹೈಕಮಾಂಡ್ ಅನುಮತಿ ನೀಡಿಲ್ಲ ಎಂದು ಕಂದಾಯ ಸಚಿವ ಆರ್ ಅಶೋಕ್ ಹೇಳಿಕೆ ನೀಡಿದ್ದು, ಸಚಿವ ಸ್ಥಾನಾಕಾಂಕ್ಷಿಗಳಿಗೆ ನಿರಾಸೆ ಮೂಡಿಸಿದೆ.
“ಒಂದೆರಡು ದಿನಗಳಲ್ಲಿ ಸಚಿವ ಸಂಪುಟ ವಿಸ್ತರಣೆಯಾಗುವ ಪ್ರಶ್ನೆಯೇ ಇಲ್ಲ”
ಮಲ್ಲೇಶ್ವರಂ ನ ಬಿಜೆಪಿ ಕಚೇರಿಯಲ್ಲಿ ಮಾತನಾಡಿದ
ಕಂದಾಯ ಸಚಿವ ಆರ್.ಅಶೋಕ್, ಸಚಿವ ಸಂಪುಟ ವಿಸ್ತರಣೆಗೆ ಹೈಕಮಾಂಡ್ ಅನುಮತಿ ನೀಡಿಲ್ಲ. ಒಂದೆರಡು ದಿನಗಳಲ್ಲಿ ಸಚಿವ ಸಂಪುಟ ವಿಸ್ತರಣೆಯಾಗುವ ಪ್ರಶ್ನೆಯೇ ಇಲ್ಲ. ಯಾವಾಗ ವಿಸ್ತರಣೆ ಮಾಡಬೇಕು ಎಂಬುದರ ಬಗ್ಗೆ ಇಂದು ಅರುಣ್ ಸಿಂಗ್ ಜೊತೆ ಸಿಎಂ ಚರ್ಚೆ ನಡೆಸುತ್ತಾರೆ. ಅದಕ್ಕೆ ಪೂರ್ವಭಾವಿಯಾಗಿ ಅಭಿಪ್ರಾಯ ಸಂಗ್ರಹಿಸಲು ಕರೆದಿದ್ದಾರೆ. ಅದಕ್ಕೆ ನಾನು ಬಿಜೆಪಿ ಕಚೇರಿಗೆ ಬಂದಿದ್ದೇನೆ. ಸಂಪುಟದ ಬಗ್ಗೆ ಮುಖ್ಯಮಂತ್ರಿಗಳಿಗೆ ಅಧಿಕಾರ ಇದೆ. ಅವರು ಆಕಾಂಕ್ಷಿ ಗಳ ಪಟ್ಟಿಯನ್ನು ಹೈಕಮಾಂಡ್ ಗೆ ಕಳುಹಿಸಿ ಕೊಟ್ಟಿದ್ದಾರೆ. ಅದಕ್ಕೆ ಹೈಕಮಾಂಡ್ ನಿಂದ ಒಪ್ಪಿಗೆ ಸಿಕ್ಕ ಬಳಿಕ ಸಿಎಂ ಆ ಬಗ್ಗೆ ಘೋಷಣೆ ಮಾಡ್ತಾರೆ ಎಂದು ಆರ್ ಅಶೋಕ್ ತಿಳಿಸಿದರು.
“ರಾಜ್ಯದಲ್ಲಿ ಪ್ರತಿಪಕ್ಷ ಇದ್ದರೆ ತಾನೇ ಅದನ್ನು ಎದುರಿಸಲು ನಾವು ಸಜ್ಜಾಗೋದು”
ನಾಳೆಯಿಂದ ಚಳಿಗಾಲದ ಅಧಿವೇಶನದ ತಯಾರಿ ಕುರಿತು ಮಾತನಾಡಿದ ಅವರು, ಈಗಾಗಲೇ ಕಾಂಗ್ರೆಸ್ ನ ನಂಬ ಬೇಡಿ ಎಂದು ಕುಮಾರಸ್ವಾಮಿ ಹೇಳಿದ್ದಾರೆ. ಈ ಮೂಲಕ ಇಬ್ಬರು ಕೂಡ ಜಗಳ ಮಾಡ್ತಿದ್ದಾರೆ.ಕಾಂಗ್ರೆಸ್ ಈಗ ಒಂಟಿಯಾಗಿದೆ. ಹೀಗಾಗಿ ಕಾಂಗ್ರೆಸ್ ನ್ನು ಎದುರಿಸಲು ನಾವು ಸಜ್ಜಾಗುವ ಅವಶ್ಯಕತೆ ಇಲ್ಲ. ಇಡೀ ದೇಶದಲ್ಲಿ ಇನ್ನೂ ಕಾಂಗ್ರೆಸ್ ಇರೋದಿಲ್ಲ. ಇನ್ನೂ ಏನು ಇದ್ರೂ ರಾಜ್ಯ ಹಾಗೂ ದೇಶದಲ್ಲಿ ಬಿಜೆಪಿಯ ಆಳ್ವಿಕೆಯೇ. ಇನ್ನೂ ೨೦ ವರ್ಷಗಳ ಕಾಲ ಬಿಜೆಪಿಯೇ ಅಧಿಕಾರದಲ್ಲಿ ಇರಲಿದೆ. ಇನ್ನೂ ಬಾಕಿ ಉಳಿದ ಕಾಂಗ್ರೆಸ್ ಗಿಡಗಳನ್ನು ಕಿತ್ತು, ಬಿಜೆಪಿ ಗಿಡಗಳನ್ನು ನೆಡ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
“ಕಾಂಗ್ರೆಸ್ ನ ನಂಬಿದರೆ ಗೋವಿಂದ, ಗೋವಿಂದ”
ಮುಂದುವರೆದು ಮಾತನಾಡಿದ ಆರ್ ಅಶೋಕ್,
ಬಿಜೆಪಿ ಕೊಟ್ಟ ಮಾತಿಗೆ ತಪ್ಪದ ಪಾರ್ಟಿ. ಈ ಹಿಂದೆ ಮಾತು ಕೊಟ್ಟಂತೆ ಕುಮಾರಸ್ವಾಮಿ ಯವರಿಗೆ ೨೦ ತಿಂಗಳು ಅಧಿಕಾರ ಕೊಟ್ಟಿದ್ವಿ. ಅದರಂತೆ ೨೦ ದಿನಗಳಿಗೆ ಒಂದು ದಿನವೂ ಕಡಿಮೆ ಇಲ್ಲದಂತೆ ಅವರಿಗೆ ಅಧಿಕಾರ ಕೊಟ್ಟು
ಆ ಮೂಲಕ ಕೊಟ್ಟ ಮಾತನ್ನು ನಾವು ಉಳಿಸಿಕೊಂಡಿದ್ದೇವೆ. ಆದರೆ ಕಾಂಗ್ರೆಸ್ ನವರು ಅವರಿಗೆ ೫ ವರ್ಷ ನೀವೇ ಸಿಎಂ ಎಂದು ಕೊನೆಗೆ ೧ ವರ್ಷಕ್ಕೆ ಕೆಳಗೆ ಇಳಿಸಿದ್ರು. ಕಾಂಗ್ರೆಸ್ ಪಕ್ಷ ಎಂಬುದು ಒಂದು ವಿಷ ಕಕ್ಕುವ ಪಾರ್ಟಿ. ಹೀಗಾಗಿ ಕಾಂಗ್ರೆಸ್ ನ ನಂಬಿದರೆ ಗೋವಿಂದ, ಗೋವಿಂದ ಎಂದ ಆರ್ ಅಶೋಕ್ ವ್ಯಂಗ್ಯ ಮಾಡಿದರು