ಹೊಸ ವರ್ಷ ಆದರೂ ಹಳೆ ವರಸೆ: ಸಂಬಂಧಗಳ ಹುಡುಕಾಟ!

0
164

ಹೊಸ ವರ್ಷ ಬಂತು ಆದರೆ ವರಸೆ ಮಾತ್ರ ಬದಲಾಗಲಿಲ್ಲ,ಮಾತುಕತೆ, ಆಲೋಚನಾ ಕ್ರಮ ಎಲ್ಲ ಹಾಗೆಯೇ ಮುಂದುವರೆದಿದೆ. ಇದು ಇಂಗ್ಲಿಷರ ಹೊಸ ವರ್ಷ ನಮ್ಮದಲ್ಲ ಎಂಬ ಮಾತುಗಳ ಮೂಲಕ ನಮ್ಮ ಸಣ್ಣತನದ ಪ್ರದರ್ಶನ. ಹಾಗೆ ಹೇಳುತ್ತಲೇ ಕಾಲ ಕಳೆಯುವ ಆಷಾಢಭೂತಿಗಳು ನಾವು.
ಎಲ್ಲಾ ಬೇಕು ನಖರಾನೂ ಹಂಗೆ.

 

ನಿನ್ನೆ ಸಭೆಯೊಂದರಲ್ಲಿ ಮಾತನಾಡುವಾಗ ‘ಟೆಕ್ನಾಲಜಿ ದಾಸರಾಗಿ ನಾವು ಮಾನವೀಯ ಸಂಬಂಧಗಳ ಕಳೆದುಕೊಂಡಿದ್ದೇವೆ.
ಪಾರ್ಕಿನಲ್ಲಿ ಕುಳಿತ ಪ್ರೇಮಿಗಳು ಮಾತಾಡುವುದ ಮರೆತು ತಮ್ಮ ಮೊಬೈಲ್ ಜೊತೆ ಕಾಲ ಕಳೆಯುವುದು ದೊಡ್ಡ ದುರಂತ. ಸುಂದರವಾದ ಹುಡುಗಿ,ಪ್ರೀತಿಸುವ ಮಕ್ಕಳು, ಜವಾವ್ದಾರಿಯುತ ಗೆಳೆಯರು ಯಾರೂ ಬೇಡವಾಗಿದೆ’ ಮಾತು ಕೇಳಿದವರಿಗೆ ಹೌದೆನಿಸಿತು.

 

ಈಗ ಮೊಬೈಲ್ ಫ್ರೀ ಆದರೆ ಮಾತುಗಳೇ ಮಾಯ!
ಏನೋ ಧಾವಂತ,ವ್ಯಕ್ತಿ ಕೇಂದ್ರಿತ ಬದುಕು. ಕೆಲಸ ಇಲ್ಲದೇ ಭೇಟಿ, ಮಾತುಕತೆ, ಹರಟೆಗೆ ಜನ ಬೇಡವೇ ಬೇಡ. ಮಹತ್ವದ ಕೆಲಸ ಇದ್ದರೆ, ದೌಲತ್ತಿಗೆ ಅಧಿಕಾರ ಇದ್ದರೆ ಮಾತ್ರ ಜನ ಬರ್ತಾರೆ,ಮಾತಾಡಿಸ್ತಾರೆ ಇಲ್ಲ ಅಂದರೆ ಗೋವಿಂದ.
ತಿಂಗಳುಗಟ್ಟಲೆ ಫೋನು ಇಲ್ಲ.

 

ಉದ್ಯೋಗ ಸ್ಥಳಗಳಲ್ಲಿ ಅದೇ ಪೈಪೋಟಿ, ಕೆಲಸದ ಒತ್ತಡ. ದುಡಿಯುವ ಮನಸುಗಳಿಗೆ ಒತ್ತಡ ನೀಗಿಸಲು ಆತ್ಮೀಯರ ನಿಷ್ಕಲ್ಮಶ ಮಾತು,ಪ್ರೀತಿ, ಸ್ನೇಹ ಬೇಡವಾಗಿ ಬಿಟ್ಟದೆ.
ಏನಿದ್ದರೂ ‘ಕಾಮಾ ಪೂರ್ತಿ ಮಾಮಾ’ ಅನ್ನೋ ಮತಲಬ್ ಕಿ ದುನಿಯಾ.

 

ಹಾಡು-ಹರಟೆ, ಆರೋಗ್ಯ ಪೂರ್ಣ ಚರ್ಚೆ ಸಿಗಬೇಕಾದರೆ ಒಂದಿಷ್ಟು ಹಿರಿಯರ ಬೆಳಗಿನ ವಾಕ್ ಸಮಯದಲ್ಲಿ, ಅವರು ಏಕತಾನತೆಯ ದೇಶಾವರಿ ಮಾತುಕತೆ, ಯಾವುದೇ ಆತ್ಮೀಯತೆಯಾಗಲಿ, ಪ್ರಾಮಾಣಿಕತೆಯಾಗಲಿ ಕಾಣುವುದಿಲ್ಲ.

ಎರಡು ದಶಕಗಳ ಹಿಂದೆ ಪ್ರೀತಿ, ಪ್ರೇಮ ಅಫೇರುಗಳ ನೆಪದಲ್ಲಿ ಜನ ಪರಸ್ಪರ ಸಾಂಗತ್ಯಕ್ಕಾಗಿ ಹಾತೊರೆಯುತ್ತಿದ್ದರು.
ಈಗ ಹಾದರದ ಅನುಸಂಧಾನ ಮಾಯವಾಗಿ ಅಲ್ಲಿ ಕಾಮವೂ ಡೇಟಿಂಗ್ ವ್ಯವಹಾರದ ಸರಕಾಗಿ ಹೋಗಿರುವುದು ಮನುಷ್ಯ ಸಂಬಂಧಗಳ ದುರಂತ.
ರಂಗು ರಂಗಿನ ಪ್ರೇಮ ಕಥೆಗಳ ಕಳಕೊಂಡ ಹಳವಂಡ.

 

ವೃತ್ತಿಯಿಂದ ನಿವೃತ್ತರಾದವರ ಪಾಡಂತು ಹೇಳತೀರದು.
ಮೈಯಲ್ಲಿ ಕಸುವು ಮಾಯಾವಾಗಿ ಮನಸು ಮೃದುವಾಗಿ ದರ್ಪ ಕಳಕೊಂಡು ಬಿಟ್ಟಿರುತ್ತಾರೆ.
ಹುಲಿಯಂತೆ ಉನ್ನತ ಹುದ್ದೆಗಳಲ್ಲಿ ಮೆರೆದವರು ಇಲಿಯಾಗಿ ಮೂಲೆ ಸೇರಿಕೊಂಡಾಗ ಯಾರೂ ಕೇರ್ ಮಾಡುವುದೇ ಇಲ್ಲ.

ದೇಹ ಮುಪ್ಪಾದರೂ ಒಳಗಿನ ಜೀವಚೈತನ್ಯಕೆ ಮುಪ್ಪು ಇರುವುದಿಲ್ಲ ಎಂಬುದನ್ನು ಕೆಲವರು ಮರೆತು ಬಿಡುತ್ತಾರೆ.
ಓದು,ಬರಹ,ಸಂಗೀತ, ಸಿನೆಮಾ ಮತ್ತು ಸಂಸ್ಕೃತಿಗಳ ಒಡನಾಟ ಇಲ್ಲದವರು, ಕ್ರಿಯಾಶೀಲ ಚಟುವಟಿಗಳ ಹವ್ಯಾಸ ಇಲ್ಲದವರು ಒಂಟಿತನದಿಂದ ನರಳಿ ಬೇಗ ಇನ್ನೂ ಮುದುಕರಾಗಿ ಹೊಸ ತಲೆಮಾರಿನ ಹುಡುಗರ ಬೈಯುತ್ತ ಎಲ್ಲರಿಗೂ ಬೇಡವಾಗುತ್ತಾರೆ.

 

ಟಿವಿಯಲ್ಲಿ ಬರುವ ಧಾರಾವಾಹಿಗಳ ಕಥೆಯೂ ಅದೇ.
ಅದೇ ಜಗಳ,ದ್ವೇಷ ಇಬ್ಬರು ನಟಿಯರಲ್ಲಿ ಒಬ್ಬಳು ವಿಲನ್… ಇಂತಹ ಕೆಲಸಕ್ಕೆ ಬಾರದ ಅವಾಸ್ತವ ಕತೆಗಳಲ್ಲಿ ಹೆಣ್ಣುಮಕ್ಕಳು ಕರಗಿ ಹೋಗಿದ್ದಾರೆ.

ಮನಸಿಗೆ ಮುದ ನೀಡುವ ಸಂಗೀತ ಆಲಿಸುವ, ಮಹತ್ವದ ಪುಸ್ತಕಗಳನ್ನು ಓದುವ, ಸರಿ ಕಂಡಂತೆ ಬರೆಯುವ ಹವ್ಯಾಸ ಇರದಿದ್ದರೆ ಬದುಕು ನೀರಸವಾಗಿ ಬಿಡುತ್ತದೆ.

 

ಕೆಲಸವಿಲ್ಲದಿದ್ದರೆ ಬರಲಾಗದ ಗೆಳೆಯರಿಗಾಗಿ ಕಾಯದೇ ನಿಮ್ಮ ಪಾಡಿಗೆ ವೈಯಕ್ತಿಕ ಸಾಂಸ್ಕೃತಿಕ ಲೋಕ ಸೃಷ್ಟಿ ಮಾಡಿಕೊಂಡು ಬದುಕಿದರೆ ಬದುಕು ಸಹನೀಯವಾದೀತು.

 

ಮುಪ್ಪಾದ ದೇಹವ ಶಪಿಸದೇ ಸಂಗಾತಿ ಜೊತೆ ಪ್ರೀತಿಯಿಂದ ಕಾಲ ಕಳೆಯುವ ಔದಾರ್ಯ ಈಗ ಅನಿವಾರ್ಯ.
ದೇಹಕ್ಕಿಂತ ಮನಸು ದೊಡ್ಡದು, ಕಾಮಕ್ಕಿಂತ ಪ್ರೇಮ ಹಿತಕಾರಿ ಅಂದುಕೊಂಡಾಗ ಬದುಕು ಬಾಳಾಗುತ್ತದೆ.
ಒಂಟಿತನ ಸುಂದರ ಏಕಾಂತವಾಗುತ್ತದೆ.
ಕಾಮದ ಕಸುವು ಮಾಯವಾದಾಗ ಪ್ರೇಮ, ಬಿಸಿ ಅಪ್ಪುಗೆ, ಮುದವಾದ ಮುತ್ತಿಗೂ ಬಡತನ ಇರಬಾರದು.
ಒಮ್ಮೆ ಅಲೋಚನೆ ಬದಲಿಸಿ ನೋಡಿ ಬದುಕು ಬಾಳಾಗಿ ಝಗಮಗ ಬೆಳಗಲು.

 

LEAVE A REPLY

Please enter your comment!
Please enter your name here