ಹೊಸ ಸಂಸತ್ ಭವನಕ್ಕೆ ಮೋದಿ ಶಿಲಾನ್ಯಾಸ..! ಹೇಗಿರಲಿದೆ ಗೊತ್ತಾ ನೂತನ ಸಂಸತ್ ಭವನ..?

0
24

ಪ್ರಪಂಚದ ಬಲಿಷ್ಠ ಪ್ರಜಾಪ್ರಭುತ್ವ ದೇಶವಾಗಿರುವ ಭಾರತವು ಅತಿದೊಡ್ಡ ಶಕ್ತಿಕೇಂದ್ರವನ್ನು ಮರು ನಿರ್ಮಿಸುವ ನಿಟ್ಟಿನಲ್ಲಿ ಹೊಸ ಸಂಸತ್ ಭವನಕ್ಕೆ ಮುಂದಿನ ಗುರುವಾರ ಮಧ್ಯಾಹ್ನ ೧ ಗಂಟೆಗೆ ಶಿಲಾನ್ಯಾಸ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಈ ಶಿಲಾನ್ಯಾಸವನ್ನು ನೆರವೇರಿಸಲಿದ್ದು ಭೂಮಿ ಪೂಜೆಯನ್ನು ಸಹ ಮಾಡಲಿದ್ದಾರೆ. ಈ ಕಾರ್ಯಕ್ರಮದ ಆಹ್ವಾನಕ್ಕಾಗಿ ಲೋಕಸಭೆಯ ಸ್ಪೀಕರ್ ಆದ ಓಂಪ್ರಕಾಶ್ ಬಿರ್ಲಾ ಅವರು ಪ್ರಧಾನಿ ಮೋದಿಯವರನ್ನು ಶನಿವಾರ ಭೇಟಿ ಮಾಡಿ ಆಮಂತ್ರಣ ನೀಡಿದ್ದಾರೆ. ೭೫ನೇ ಸ್ವಾತಂತ್ರೊತ್ಸವದ ನೆನಪಿನಲ್ಲಿ ನಿರ್ಮಿಸುತ್ತಿರುವ ಹೊಸ ಸಂಸತ್ ಭವನ ಹಾಲಿ ಸಂಸತ್ ಭವನದ ಸಮೀಪದಲ್ಲಿರುವ ಶ್ರಮಶಕ್ತಿ ಭವನದ ಜಾಗದಲ್ಲಿ ಸುಮಾರು ೬೪,೫೦೦ ಸಾವಿರ ಚದರ ಮೀ ಸುತ್ತಳತೆಯಲ್ಲಿ ನಿರ್ಮಾಣ ಕಾರ್ಯ ಆರಂಭವಾಗುತ್ತದೆ. ಈ ಕಟ್ಟಡದ ವಿಶೇಷತೆಯೆಂದರೆ ಎರಡು ಅಂತಸ್ತಿನ ಕಟ್ಟಡವು ಭೂಕಂಪನ ನಿರೋಧಕವಾಗಿರಲಿದೆ.

ಇನ್ನು ಹೊಸ ಭವನದಲ್ಲಿ ಪ್ರತಿ ಸಂಸದರಿಗೂ ಪ್ರತ್ಯೇಕ ಕಚೇರಿ ಇರಲಿದ್ದು, ಕಾಗದ ರಹಿತ ಸಂವಹನಕ್ಕಾಗಿ ಡಿಜಿಟಲ್ ಮೂಲಸೌಕರ್ಯ ಒಳಗೊಂಡಿರಲಿದೆ. ಮೊಗಸಾಲೆ, ಕಾನ್‌ಸ್ಟಿಟ್ಯೂಷನ್ ಹಾಲ್, ಗ್ರಂಥಾಲಯ, ಸಂಸದೀಯ ಸಮಿತಿ ಕೋಣೆಗಳು, ಭೋಜನದ ಹಾಲ್, ಹೊರ ಆವರಣದಲ್ಲಿ ವಾಹನ ನಿಲುಗಡೆಗೆ ಸಾಕಷ್ಟು ಸ್ಥಳಾವಕಾಶವಿದೆ. ವಾಯು ಮತ್ತು ಶಬ್ದ ಮಾಲಿನ್ಯ ತಡೆಯುವಂತಹ ತಂತ್ರಜ್ಞಾನವನ್ನು ಉಪಯೋಗಿಸಿಕೊಂಡು ಈ ಕಟ್ಟಡವನ್ನು ನಿರ್ಮಿಸುವ ಉದ್ದೇಶವನ್ನು ಹೊಂದಲಾಗಿದೆ. ದೇಶದ ಪ್ರಜಾತಂತ್ರ ಪರಂಪರೆಯ ದ್ಯೋತಕವಾದ ಕಾನ್‌ಸ್ಟಿಟ್ಯೂಷನ್ ಹಾಲ್ ವಿಸ್ತಾರವಾಗಿರಲಿದ್ದು, ಸಂವಿಧಾನದ ಮೂಲಪ್ರತಿಯ ಡಿಜಿಟಲ್‌ರೂಪವನ್ನು ಇಲ್ಲಿ ಪ್ರದರ್ಶಿಸಲಾಗುತ್ತದೆ. ಈ ಹಾಲ್ ವೀಕ್ಷಣೆಗೆ ಸಾರ್ವಜನಿಕರಿಗೆ ಅವಕಾಶ ಇರಲಿದೆ. ಭವಿಷ್ಯದ ದೃಷ್ಟಿಯಿಂದ ೮೮೮ ಸದಸ್ಯರಿಗೆ ಆಸನ ಕಲ್ಪಿಸುವಷ್ಟು ವಿಶಾಲತೆಯನ್ನು ಲೋಕಸಭೆಯ ಹಾಲ್ ಹೊಂದಿರಲಿದೆ. ರಾಜ್ಯಸಭೆ ೩೮೪ ಸದಸ್ಯರಿಗೆ ಆಸೀನರಾಗುವಷ್ಟು ದೊಡ್ಡದಾಗಿರಲಿದೆ. ಹಾಲಿ ಲೋಕಸಭೆಯಲ್ಲಿ ೫೪೩ ಸದಸ್ಯರಿದ್ದು, ರಾಜ್ಯಸಭೆ ೨೪೫ ಸದಸ್ಯ ಬಲ ಇದೆ.

ಹೊಸ ಸಂಸತ್ ಭವನವನ್ನು ಟಾಟಾ ಪ್ರೊಜೆಕ್ಟ್ ಲಿಮಿಟೆಡ್ ೮೬೧.೯೦ ರೂ. ಕೋಟಿ ವೆಚ್ಚದಲ್ಲಿ ನಿರ್ಮಿಸಲಿದೆ. ಸೆಂಟ್ರಲ್ ವಿಸ್ಟಾ ಮರುಅಭಿವೃದ್ಧಿ ಯೋಜನೆಯಲ್ಲಿ ೩ ಕಿ.ಮೀ. ಉದ್ದದ ರಾಜಪಥ ಮತ್ತು ಅದರ ಅಕ್ಕಪಕ್ಕದಲ್ಲಿ ಅಭಿವೃದ್ಧಿಯನ್ನು ೨೦೧೯ರಲ್ಲಿ ಸರ್ಕಾರ ಘೋಷಿಸಿತು. ಗುಜರಾತ್‌ನ ಎಚ್‌ಸಿಪಿ ಡಿಸೈನ್ಸ್ ಸಂಸ್ಥೆ ಇದರ ವಿನ್ಯಾಸ ಮಾಡಿದೆ. ಇದರ ಪ್ರಕಾರ, ಪ್ರಧಾನಿ ಹೊಸ ನಿವಾಸ ಸೌಥ್ ಬ್ಲಾಕ್‌ನಲ್ಲಿ ಮತ್ತು ಉಪರಾಷ್ಟ್ರಪತಿಯ ನೂತನ ನಿವಾಸ ನಾರ್ಥ್ ಬ್ಲಾಕ್‌ನಲ್ಲಿ ಇರಲಿದೆ. ಸಚಿವಾಲಯಗಳ ನಿರ್ಮಾಣವು ಕೂಡ ಯೋಜನೆಯಲ್ಲಿ ಸೇರಿವೆ.

LEAVE A REPLY

Please enter your comment!
Please enter your name here