ವೀರಶೈವ-ಲಿಂಗಾಯತ ನಿಗಮಕ್ಕೆ ‘ಬಸವೇಶ್ವರ ಅಭಿವೃದ್ಧಿ ನಿಗಮ’ ಎಂದು ಹೆಸರಿಡಿ – ಸಾಣೇಹಳ್ಳಿ ಶ್ರೀ

0
62

ಇಂದಿನ ದಿನಗಳಲ್ಲಿ ಅತಿಹೆಚ್ಚು ಪ್ರಚಲಿತಕ್ಕೆ ಬರುತ್ತಿರುವ ವಿಷಯಗಳಲ್ಲಿ ಮುಖ್ಯವಾದದ್ದು ಒಂದು ಮೀಸಲಾತಿ ಇನ್ನೊಂದು ಜಾತಿಕೇಂದ್ರಿತವಾದ ವಿಚಾರಗಳು. ಇಂತಹದ್ದೇ ಪ್ರಮುಖ ನಿರ್ಣಯವೊಂದನ್ನು ಕರ್ನಾಟಕ ಸರ್ಕಾರವು ಕೈಗೆತ್ತಿಕೊಂಡಿದ್ದು ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ ಅವರು ಕರ್ನಾಟಕ ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮವನ್ನು ಸ್ಥಾಪಿಸುವುದಾಗಿ ಹೇಳಿಕೆಯನ್ನು ನೀಡಿದ್ದಾರೆ. ಇಂತಹ ನಿರ್ಧಾರವನ್ನು ವೀರಶೈವ ಲಿಂಗಾಯತ ಸಮಾಜವು ಸರ್ಕಾರದ ಮುಂದೆ ಬಹಳ ಕಾಲದಿಂದಲೂ ಬೇಡಿಕೆಯನ್ನು ಇಟ್ಟಿತ್ತು. ಚಿತ್ರದುರ್ಗ ಮುರುಘಾಮಠದ ಡಾ.ಶಿವಮೂರ್ತಿ ಮುರುಘಾ ಶರಣರು ಸ್ವಾಗತಿಸಿ ಅಭಿನಂದಿಸಿದ್ದಾರೆ.


ಸಮಾಜದ ಎಲ್ಲಾ ಸಮುದಾಯಗಳಲ್ಲೂ ಇರುವಂತೆ ಲಿಂಗಾಯತ ಸಮಾಜದಲ್ಲೂ ಕೂಡಾ ಅಲ್ಪಸಂಖ್ಯಾತರು, ಬಡವರು, ನಿರ್ಗತಿಕರು ಇದ್ದಾರೆ. ಅವರನ್ನು ಶೈಕ್ಷಣಿಕವಾಗಿ, ಸಾಮಾಜಿಕವಾಗಿ, ಸಾಂಸ್ಕೃತಿಕವಾಗಿ ಹಾಗೂ ಆರ್ಥಿಕವಾಗಿ ಸಮಾಜದ ಮುನ್ನೆಲೆಗೆ ತರುವಲ್ಲಿ ಇಂತಹ ಅಭಿವೃದ್ಧಿ ನಿಗಮಗಳ ಅಗತ್ಯತೆ ಹೆಚ್ಚಿದೆ ಎಂದಿದ್ದಾರೆ. ಸರ್ಕಾರವು ತೆಗೆದುಕೊಂಡಿರುವ ಈ ನಿಲುವನ್ನು ಈ ಹಿಂದೆ ಕೇಂದ್ರ ಸರ್ಕಾರವು ತೆಗೆದುಕೊಂಡಿದ್ದ ಮೇಲ್ವರ್ಗದ ಜನಾಂಗದಲ್ಲಿರುವ ಅಲ್ಪಸಂಖ್ಯಾತರಿಗೆ ಮೀಸಲಾತಿಯನ್ನು ನೀಡುವ ದಿಸೆಯಲ್ಲಿನ ನಿರ್ಧಾರಕ್ಕೆ ಸರಿಸಮಾನ ಎನ್ನಲಾಗುತ್ತಿದೆ. ಜಾತಿ ಉಪಜಾತಿಗಳಲ್ಲಿ ಕಂಡುಬರುತ್ತಿರುವ ಮೀಸಲಾತಿಯನ್ನು ತೆಗೆದುಹಾಕಿ ಲಿಂಗಾಯತರಿಗೆ ಶೇ.೧೬ರಷ್ಟು ಮೀಸಲಾತಿಯನ್ನು ಮುಂದಿನ ದಿನಗಳಲ್ಲಿ ನೀಡಬೇಕೆಂದು ಸರ್ಕಾರಕ್ಕೆ ಸಮುದಾಯದ ಮುಖಂಡರು ಮನವಿಯನ್ನು ಮಾಡಿಕೊಂಡರು.

ಲಿಂಗಾಯತ ಧರ್ಮವನ್ನು ಸ್ವತಂತ್ರ ಧರ್ಮವೆಂದು ಘೋಷಿಸಿ ಅದಕ್ಕೆ ಲಿಂಗಾಯತ ಅಭಿವೃದ್ಧಿ ನಿಗಮ ಎಂದು ಹೆಸರಿಸುವ ಬದಲು ಬಸವೇಶ್ವರ ಅಭಿವೃದ್ಧಿ ನಿಗಮವೆಂದು ಹೆಸರಿಡುವಂತೆ ಸಾಣೇಹಳ್ಳಿ ಪೀಠದ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿಯವರು ಅಭಿಪ್ರಾಯಪಟ್ಟಿದ್ದಾರೆ. ಬಾಬುಜಗಜೀವನರಾವ್ ಅಭಿವೃದ್ಧಿ ನಿಗಮ, ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮ, ಡಿ.ದೇವರಾಜ ಅರಸು ಅಭಿವೃದ್ಧಿ ನಿಗಮಗಳಂತೆ ಲಿಂಗಾಯತ ಅಭಿವೃದ್ಧಿ ನಿಗಮವನ್ನು ಬಸವೇಶ್ವರ ಅಭಿವೃದ್ಧಿ ನಿಗಮ ಎಂದು ನಾಮಕರಣ ಮಾಡುವಂತೆ ಬಿ.ಎಸ್.ಯಡಿಯೂರಪ್ಪ ಅವರಿಗೆ ಮನವಿ ಮಾಡಿದರು. ಅಲ್ಲದೇ ಈ ನಿಗಮಕ್ಕೆ ಸಾವಿರಾರು ಕೋಟಿಗಳ ಅನುದಾನವನ್ನು ನೀಡಿ ನಿಗಮವು ಜನಪರವಾಗಿ ಕೆಲಸ ಮಾಡುವಂತೆ ಸಹಕರಿಸಲು ತಿಳಿಸಿದರು. ನಿಗಮಕ್ಕೆ ರಾಜಕೀಯದ ಪ್ರೇರಣೆ, ಒತ್ತಾಸೆ ಇರದಂತೆ ರಾಜಕೀಯೇತರ ವ್ಯಕ್ತಿಯನ್ನು ಅಧ್ಯಕ್ಷನನ್ನಾಗಿ ನೇಮಿಸಬೇಕು ಎಂದು ಒತ್ತಾಯಿಸಿದರು.


ಮಹಾರಾಷ್ಟ್ರ ಸರ್ಕಾರವು ಅಲ್ಲಿನ ಅತಿಹೆಚ್ಚು ಜನಸಂಖ್ಯೆ ಇರುವ ಮರಾಠಿಗರಿಗೆ ಶೇ.೧೬ರಷ್ಟು ಮೀಸಲಾತಿಯನ್ನು ನೀಡುವಂತೆ ಕರ್ನಾಟಕದಲ್ಲಿ ಅತೀ ಹೆಚ್ಚು ಸಂಖ್ಯೆಯಲ್ಲಿರುವ ಲಿಂಗಾಯತರಿಗೆ ಅದೇ ರೀತಿ ಮೀಸಲಾತಿಯನ್ನು ನೀಡಬೇಕು. ಕೇಂದ್ರ ಸರ್ಕಾರದ ಓಬಿಸಿ ಪಟ್ಟಿಯಲ್ಲಿ ಲಿಂಗಾಯತರಿಗೆ ಸ್ಥಾನವಿದ್ದರೂ ಅವರು ಯಾವುದೇ ಹುದ್ದೆ ಇತ್ಯಾದಿಗಳಿಗೆ ಅರ್ಜಿಯನ್ನು ಸಲ್ಲಿಸುವಾಗ ಅವರು ಸಾಮಾನ್ಯ ವರ್ಗಕ್ಕೆ ಸೇರುತ್ತಾರೆ. ಇಂತಹ ಕೆಲವು ಸಮಸ್ಯೆಗಳನ್ನು ರಾಜ್ಯ ಸರ್ಕಾರವು ಸಮುದಾಯದ ಜೊತೆಗೆ ನಿಂತು ಸರಿದೂಗಿಸಬೇಕೆಂದು ತಿಳಿಸಿದರು. ಅಲ್ಲದೇ ಇಂತಹ ಯಾವುದೇ ಕ್ರಮಗಳು ಒಂದು ಸರ್ಕಾರವಿದ್ದಾಗ ಜಾರಿಗೆ ಬಂದು ಮತ್ತೊಂದು ಸರ್ಕಾರ ಬದಲಾದರೆ ಅಂತಹ ಸಂದರ್ಭದಲ್ಲಿ ಹೇಳ ಹೆಸರಿಲ್ಲದಂತೆ ಕಣ್ಮರೆಯಾಗುತ್ತವೆ. ಆದ್ದರಿಂದ ನಿಗಮವನ್ನು ಸರಿಯಾದ ಕ್ರಮದಲ್ಲಿ ಕಟ್ಟುನಿಟ್ಟಿನ ನಿಯಮಗಳನ್ನು ಜಾರಿಗೆ ತಂದು ಜನರಿಗೆ ಉಪಯೋಗವಾಗಿರುವಂತೆ ಮಾಡಬೇಕು. ಇಂತಹ ನಿಗಮಗಳು ಕೇವಲ ಸರ್ಕಾರದ ಚುನಾವಣಾ ಪ್ರಚಾರದ ಭಾಗವಾಗದೇ ಅದು ಸರ್ಕಾರದ ಭಾಗವಾಗಿ ಮುಂದುವರಿದು ಸಮಾಜದ ಏಳ್ಗೆ ಸಹಕಾರಿಯಾಗಬೇಕು ಎಂಬ ಆಶಯವನ್ನು ವ್ಯಕ್ತಪಡಿಸಿದರು.

LEAVE A REPLY

Please enter your comment!
Please enter your name here