ಕುಡಿದ ಮತ್ತಿನಲ್ಲಿ ಸಾಕಷ್ಟು ಅಪರಾಧಗಳು , ಯಡವಟ್ಟುಗಳು ಜರುಗುತ್ತಿರುತ್ತವೆ. ಇದೀಗ ವ್ಯಕ್ತಿಯೊಬ್ಬ ಕಂಠಪೂರ್ತಿ ಕುಡಿದು ಆ ಮತ್ತಿನಲ್ಲಿ ಗಬ್ಬು ನಾರುವ ಕಸದ ತೊಟ್ಟಿಯೊಳಗೆ ಬಂದು ಮಲಗಿದ್ದಾನೆ. ಅಷ್ಟಕ್ಕೂ ಆತನಿಗೆ ಸ್ವಲ್ಪವೂ ಕಸದ ವಾಸನೆ ಬರಲಿಲ್ವಾ ಅನ್ನೋದೇ ಅನುಮಾನ.
ಮೈಸೂರಿನ ಕಾರ್ಪೋರೇಷನ್ ಬಳಿಯ ಆರ್ಎಂಸಿ ಮಾರುಕಟ್ಟೆ ಹಿಂಭಾಗದಲ್ಲಿ ಕಸದ ದೊಡ್ಡ ಕಂಟೇನರ್ ಇದೆ. ಇದರಲ್ಲಿ ಸುತ್ತಮುತ್ತಲಿನ ಏರಿಯಾಗಳ ಜನರು ಕಸ ತಂದು ಸುರಿಯುತ್ತಾರೆ. ಬಹುಶ: ಮೊನ್ನೆ ರಾತ್ರಿ ಈ ವ್ಯಕ್ತಿ ಕಂಠಪೂರ್ತಿ ಕುಡಿದು ಯಾರಿಗೂ ತಿಳಿಯದಂತೆ ಈ ಕಂಟೇನರ್ ಒಳಗೆ ಬಂದು ಮಲಗಿದ್ದಾನೆ. ಜನರು ಇದನ್ನು ತಿಳಿಯದೆ ಆತನ ಮೇಲೆ ತಂದು ಕಸ ಸುರಿದಿದ್ದಾರೆ. ಕಂಟೇನರ್ ತುಂಬಿದಾಗ ಕಾರ್ಪೊರೇಷನ್ ಸಿಬ್ಬಂದಿಗಳು ಕಂಟೇನರ್ ತೆಗೆದುಕೊಳ್ಳಲು ಬಂದಿದ್ದಾರೆ. ಆದರೆ ಕಂಟೇನರ್ ಒಳಗಿನಿಂದ ಆ ವ್ಯಕ್ತಿಯ ಕಾಲು ಕಾಣುತ್ತಿದ್ದು ಇದನ್ನು ನೋಡಿದವರು ಶಾಕ್ ಆಗಿದ್ದಾರೆ.
ಆರಂಭದಲ್ಲಿ ಯಾರೋ ಕೊಲೆ ಮಾಡಿ ದೇಹವನ್ನುಇಲ್ಲಿ ಬಿಸಾಡಿರಬಹುದು ಎಂಬ ಅನುಮಾನ ಬಂದಿದೆ. ಆದರೆ ಕಾಲು ಅಡುಗಾಡುತ್ತಿದ್ದನ್ನು ಕಂಡು ಕೂಡಲೇ ಕಸವನ್ನು ಹೊರಗೆ ಚೆಲ್ಲಿ ಆ ವ್ಯಕ್ತಿ ಜೀವಂತ ಇರುವುದನ್ನು ನೋಡಿ ನಿಟ್ಟುಸಿರುಬಿಟ್ಟಿದ್ದಾರೆ. ಕೊನೆಗೆ ಆತನಿಗೆ ಪಾಲಿಕೆ ಆರೋಗ್ಯ ಅಧಿಕಾರಿಗಳೇ ಪ್ರಥಮ ಚಿಕಿತ್ಸೆ ನೀಡಿ ಕಳಿಸಿದ್ದಾರೆ. ಸ್ಥಳದಲ್ಲೇ ಇದ್ದವರು ಈ ವಿಡಿಯೋ ಮಾಡಿದ್ದಾರೆ. ಈ ಸುದ್ದಿ ಕೇಳಿ ಅಳಬೇಕೋ…ನಗಬೇಕೋ ಎಂಬುದನ್ನು ನೀವೇ ನಿರ್ಧಾರ ಮಾಡಿ.