ದಸರಾ ಆಚರಣೆ ಜಟಾಪಟಿ: ನನ್ನೊಬ್ಬನ ತೀರ್ಮಾನವಲ್ಲ ಎಂದ ಸಚಿವ ಎಸ್.ಟಿ. ಸೋಮಶೇಖರ್

0
89

ಮೈಸೂರು: ದಸರಾ ಆಚರಣೆ ಕುರಿತು ಪಕ್ಷದಲ್ಲೇ ಭಿನ್ನಾಭಿಪ್ರಾಯ ವ್ಯಕ್ತವಾದ ಹಿನ್ನೆಲೆಯಲ್ಲಿ ದಸರಾವನ್ನು ಹೇಗೆ ಆಚರಿಸಬೇಕು ಎಂಬುದು ನನ್ನೊಬ್ಬನ ನಿರ್ಧಾರವಲ್ಲ ಎಂದು ಸಚಿವ ಎಸ್ ಟಿ ಸೋಮಶೇಖರ್ ಸ್ಪಷ್ಟಪಡಿಸಿದ್ದಾರೆ.

ಹೈಪವರ್ ಕಮಿಟಿ ತೀರ್ಮಾನವೇ ಅಂತಿಮ

ಈ ಕುರಿತು ಮೈಸೂರಿನಲ್ಲಿ ಸ್ಪಷ್ಟನೆ ನೀಡಿರುವ ಸಚಿವ ಎಸ್ ಟಿ ಸೋಮಶೇಖರ್ ಅವರು, ದಸರಾ ಆಚರಣೆ ನನ್ನ ನಿರ್ಧಾರವಲ್ಲ. ಇದಕ್ಕೆಂದು ಹೈಪವರ್ ಕಮಿಟಿ ಇದೆ. ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿರುವ ಹೈಪವರ್ ಕಮಿಟಿಯಲ್ಲಿ ಒಂದು ಒಮ್ಮತದ ನಿರ್ಧಾರಕ್ಕೆ ಬಂದು ತೀರ್ಮಾನವನ್ನುತೆಗೆದುಕೊಳ್ಳಲಾಗುತ್ತದೆ. ಆ ಬಳಿಕ ನಿರ್ಧಾರವನ್ನು ಹೇಳಲಾಗುತ್ತದೆ ಎಂದು ಸಹಕಾರ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ.ಸೋಮಶೇಖರ್ ಹೇಳಿದರು.

ಇಲ್ಲಿ ನಾನೊಬ್ಬನೇ ತೀರ್ಮಾನ ತೆಗೆದುಕೊಳ್ಳಲಾಗದು. 27 ಕ್ಕೂ ಹೆಚ್ಚು ಮಂದಿ ಕಮಿಟಿಯಲ್ಲಿರುತ್ತಾರೆ. ಇಲ್ಲಿ ತೆಗೆದುಕೊಳ್ಳಲಾಗುವ ತೀರ್ಮಾನವನ್ನು ಅನುಷ್ಠಾನ ಮಾಡುವ ಹೊಣೆ ಇಲ್ಲಿನ ಜಿಲ್ಲಾಡಳಿತ ಹಾಗೂ ಉಸ್ತುವಾರಿ ಸಚಿವನಾಗಿ ನನ್ನದಾಗಿರುತ್ತದೆ. ಇಲ್ಲಿ ಯಾವುದೇ ಗೊಂದಲವನ್ನು ಮಾಡಿಕೊಳ್ಳುವುದು ಬೇಡ ಎಂದು ಸಚಿವರು ತಿಳಿಸಿದರು.

ಪಕ್ಷದ ನಾಯಕರಾದ ಹೆಚ್ ವಿಶ್ವನಾಥ್ ಸೇರಿದಂತೆ ಎಲ್ಲರೂ ಅವರವರ ಅಭಿಪ್ರಾಯಗಳನ್ನು ತಿಳಿಸಬಹುದು. ಒಳ್ಳೆಯದಿದ್ದರೆ ನಾನು ಅದನ್ನು ಸ್ವಾಗತಿಸುತ್ತೇನೆ. ಅಂತಿಮವಾಗಿ ಎಲ್ಲ ತೀರ್ಮಾನವನ್ನು ಹೈಪವರ್ ಕಮಿಟಿ ತೆಗೆದುಕೊಳ್ಳುತ್ತದೆ ಎಂದು ಸಚಿವರು ಸ್ಪಷ್ಟಪಡಿಸಿದರು.

ಇನ್ನು ದಸರಾ ಆಚರಣೆ ಕುರಿತು ಸ್ವಪಕ್ಷದವರೇ ಆದ ಹೆಚ್ ವಿಶ್ವನಾಥ್ ಅಸಮಾಧಾನ ವ್ಯಕ್ತಪಡಿಸಿದ್ದರು. ಯಾರ ಅನುಮತಿ ಪಡೆದು ಊರ ತುಂಬ ಲೈಟ್ ಹಾಕಿಸಲಾಗಿದೆ. ಏಕೆ ಈ ರೀತಿ ಹಠಕ್ಕೆ ಬಿದ್ದಿದ್ದೀರಿ..? ಕೊರೊನಾ ಮಹಾಸ್ಪೋಟವಾದರೆ ಯಾರು ಹೊಣೆ. ? ಎಂದು ವಾಗ್ದಾಳಿ ನಡೆಸಿದ್ದರು.

ಸರಕಾರಕ್ಕೆ ಕುಟುಕಿದ ಹಳ್ಳಿ ಹಕ್ಕಿ

ಈ ಕುರಿತು ಮಾತನಾಡಿದ ಅವರು, ಯಾವುದೇ ಕಾರಣಕ್ಕೂ ದಸರಾಗೆ ಹೆಚ್ಚಿನ ಜನ ಸಂಧಣಿ ಬೇಡ. ಮೈಸೂರಿಗೂ ಕಳಂಕ ಬರಲಿದೆ. ಇದೆಲ್ಲವನ್ನೂ ಯೋಚಿಸಿ ನಿರ್ಧರಿಸಬೇಕಲ್ಲವೇ ಎಂದು ಕುಟುಕಿದ್ದಾರೆ.

ಈ ಬಗ್ಗೆ ಮಾತನಾಡಿದ ಶಾಸಕ ತನ್ವೀರ್ ಸೇಠ್, ದಸರೆಯ ಉದ್ಘಾಟನೆ ಚಾಮುಂಡಿ ಬೆಟ್ಟದಲ್ಲಿ ಮಾಡಿ. ಅರಮನೆಯಲ್ಲಿ ಮಾತ್ರ ಕೆಲ ಕಾರ್ಯಕ್ರಮ ಮಾಡಿ ಅಂತ ಸಲಹೆ ನೀಡಿದ್ದೆ. ಹೈಪವರ್ ಕಮಿಟಿ ನನ್ನ ಸಲಹೆಗೆ ಒಪ್ಪಿದೆ. ಆದರೆ ಊರು ತುಂಬೆಲ್ಲ ದೀಪದ ಅಲಂಕಾರ ಮಾಡಿಕೊಂಡಿದ್ದಾರೆ. ಅದೆಲ್ಲವೂ ಬೇಕಿರಲಿಲ್ಲ ಎಂದು ಶಾಸಕ ತನ್ವೀರ್ ಸೇಠ್ ಅಸಮಾಧಾನ ವ್ಯಕ್ತಪಡಿಸಿದರು.

ಜಿಲ್ಲಾ ಉಸ್ತುವಾರಿ ಸಚಿವರು, ಪ್ರವಾಸೋದ್ಯಮ ಸಚಿವರು ಮಾಡಬೇಕಾದ ಕೆಲಸಗಳನ್ನು ಆರೋಗ್ಯ ಸಚಿವರು ಮಾಡುತ್ತಿದ್ದಾರೆ. ದಸರಾ ಹಬ್ಬ ತಾಯಿ ಚಾಮುಂಡೇಶ್ವರಿಯ ಹಬ್ಬ. ದಸರಾ ಹಬ್ಬವನ್ನು ಅದ್ದೂರಿಯಾಗಿ ಆಚರಿಸಬೇಕೆಂಬುದು ಸರಿ. ಆದರೆ ಈ ವರ್ಷ ಜನ ಸೇರಿದರೆ ಸಮಸ್ಯೆ ಆಗುವುದಂತೂ ನಿಜ. ಆದ್ದರಿಂದ ಅತ್ಯಂತ ಸರಳವಾಗಿ ಆಚರಣೆ ಮಾಡಬೇಕು ಎಂದು ಸಚಿವ ತನ್ವೀರ್ ಸೇಠ್ ಒತ್ತಾಯಿಸಿದ್ದಾರೆ.

LEAVE A REPLY

Please enter your comment!
Please enter your name here