ಈ ಬಾರಿ ದಸರಾ ಅಂಬಾರಿ ಹೊರುವ ಆನೆ ಅಭಿಮನ್ಯು ಬಗ್ಗೆ ನಿಮಗೆಷ್ಟು ಗೊತ್ತು..?

0
138

ಮಹಾಮಾರಿ ಕೊರೋನಾದ ದೆಸೆಯಿಂದ ಈ ಬಾರಿಯ ವಿಶ್ವವಿಖ್ಯಾತ ದಸರಾವನ್ನು ಸರಳವಾಗಿ ಆಚರಿಸಲು ನಿರ್ಧಾರಿಸಲಾಗಿದೆ. ದಸರಾದ ಪ್ರಮುಖ ಆಕರ್ಷಣೆಯೇ ಜಂಬೂ ಸವಾರಿ. ಸರಳ ದಸರಾ ಹಿನ್ನೆಲೆಯಲ್ಲಿ ಅರಮನೆಗಷ್ಟೆ ಮೀಸಲಾಗಿರುವ ಜಂಬೂ ಸವಾರಿಯಲ್ಲಿ ಈ ಬಾರಿ ಅಂಬಾರಿ ಹೊರುವ ಭಾಗ್ಯವನ್ನು ಅಭಿಮನ್ಯು ಪಡೆದಿದ್ದಾನೆ. ಸತತ 20 ವರ್ಷಗಳಿಂದ ದಸರಾದಲ್ಲಿ ಪಾಲ್ಗೊಂಡು ಪ್ರಮುಖ ಆಕರ್ಷಣೆಯಾಗಿದ್ದ ಅಭಿಮನ್ಯುವಿಗೆ ಈಗ ಅಂಬಾರಿ ಹೊರುವ ಜವಾಬ್ದಾರಿ ಸಿಕ್ಕಿದೆ. ಪ್ರತಿಸಾರಿ ದಸರಾ ಸಂದರ್ಭದಲ್ಲಿ ಅರಮನೆಗೆ ಆಗಮಿಸುವ ಗಜಪಡೆಯಲ್ಲಿ ಅಭಿಮನ್ಯುವಿಗೊಂದು ವಿಶೇಷ ಸ್ಥಾನ ಇರುತ್ತಿತ್ತು. ಹೆಚ್ಚು ಧೈರ್ಯಶಾಲಿ ಹಾಗೂ ಬಲಶಾಲಿಯಾದ ಅಭಿಮನ್ಯುವಿನ ಕಡೆ ಎಲ್ಲರ ಗಮನವಿತ್ತಾದರು ಅಂಬಾರಿ ಭಾರ ಮಾತ್ರ ಅರ್ಜುನನ ಹೆಗಲೇರುತ್ತಿತ್ತು. ತೀರ ವಯಸ್ಸಾದ ಕಾರಣ ಹಾಗೂ ಕೋರ್ಟ್‍ನಲ್ಲಿ ವಯಸ್ಸಾದ ಆನೆಗೆ ಅತಿ ಭಾರವಾದ ಅಂಬಾರಿಯನ್ನು ಹೊರಿಸುವುದು ಸೂಕ್ತವಲ್ಲವೆಂಬ ನಿರ್ಧಾರದಿಂದ ಅರ್ಜುನನಿಗೆ ರಿಲೀಫ್ ಸಿಗುತ್ತಲೆ ಅಭಿಮನ್ಯು ಈ ಅವಕಾಶ ಗಿಟ್ಟಿಸಿಕೊಂಡಿದ್ದಾನೆ.

ನೋಡಲು ಗಂಭೀರವಾಗಿ ತನ್ನದೆ ಠೀವಿ ಹೊಂದಿರುವ ಅಭಿಮನ್ಯುವಿನ ಪಾಲಿಗೆ ಅಂಬಾರಿ ಹೊರುವ ಅವಕಾಶ ಸೂಕ್ತವಾಗಿದೆ. ಈಗಾಗಲೇ ಹಲವು ದಸರಾಗಳಲ್ಲಿ ಪಾಲ್ಗೊಂಡ ಅಭಿಮನ್ಯು ಈ ಬಾರಿ ಪ್ರಮುಖ ಜವಾಬ್ದಾರಿಯೊಂದನ್ನು ಹೆಗಲಿಗೇರಿಸಿಕೊಂಡಿದ್ದಾನೆ. ಇದರ ಮಾವುತ ಹೇಳುವಂತೆ ಈ ಹಿಂದೆ ಶ್ರೀರಂಗಪಟ್ಟಣದ ದಸರಾದಲ್ಲಿ ಅಂಬಾರಿ ಹೊತ್ತ ಅನುಭವವಿದೆ ಅಭಿಮನ್ಯುವಿಗೆ.

ಅಭಿಮನ್ಯು 1977ರಲ್ಲಿ ಕಾಡೊಂದರಲ್ಲಿ ಕಾರ್ಯಚರಣೆಯ ವೇಳೆ ಸೆರೆ ಹಿಡಿದ ಆನೆ. ಅದನ್ನು ನಿಧಾನವಾಗಿ ಪಳಗಿಸಿ ಈ ಮೂಲಕ ಸಾಕಷ್ಟು ಯಶಸ್ವಿ ಕಾರ್ಯಚರಣೆಗಳನ್ನು ಮಾಡಲಾಗಿದೆ. ಇತರೆ ಆನೆಗಳಿಗೆ ಹೋಲಿಸಿದರೆ ಅಭಿಮನ್ಯುವಿನ ಧೈರ್ಯ ಮತ್ತು ಸಹಾಸ ಮೆಚ್ಚತಕ್ಕದ್ದೆ. ನಾಡಿನ ಗದ್ದೆ, ತೋಟಗಳಿಗೆ ನುಗ್ಗಿದ ಕಾಡಿನ ಪುಂಡಾನೆಗಳ ಮತ್ತೆ ಕಾಡಿಗೆ ಹಟ್ಟಲು, ಸೆರೆ ಹಿಡಿಯಲು ಪ್ರಮುಖವಾಗಿ ಅಭಿಮನ್ಯು ಮೊದಲಿಗೆ ಕರೆದೊಯ್ಯಲಾಗುತ್ತದೆ. ಈ ರೀತಿಯ ಕಾರ್ಯಚರಣೆಯ ವೇಳೆ ಆನೆಗಳ ನಡುವೆ ಕಾದಾಟ ಸಾಮಾನ್ಯವಾಗಿದ್ದು, ಕೆಲವು ಆನೆಗಳು ಇದಕ್ಕೆ ಬೆಚ್ಚಿದರೆ ಅಭಿಮನ್ಯು ಇದಕ್ಕೆ ತದ್ವಿರುದ್ಧ. ಎಂಥಾ ಪುಂಡಾನೆಯಾದರು ಸರಿಯೇ ಅದನ್ನು ಎದುರಿಸಿ ನಿಂತು ನಂತರ ತನ್ನ ದಂತಗಳಿಂದ ಬಲವಂತವಾಗಿ ಲಾರಿಗೆ ದಬ್ಬುತ್ತದೆ. ಅಭಿಮನ್ಯುವಿನ ಆರ್ಭಟದ ಮುಂದೆ ಆ ಆನೆಗಳು ಸಾಕಷ್ಟು ಪ್ರತಿರೋಧ ಒಡ್ಡಿ ವಿಫಲವಾಗಿ ಶರಣಾಗುತ್ತವೆ. ಈ ಎಲ್ಲಾ ಕಾರಣಕ್ಕೆ ಅಭಿಮನ್ಯುವನ್ನು ಎಕೆ-47 ಎಂದು ಕರೆಯಲಾಗುತ್ತದೆ.


ಹಾಗೆ ಹುಲಿ ಸೆರೆ ಕಾರ್ಯಚರಣೆಯಲ್ಲೂ ಅಭಿಮನ್ಯುವಿನದು ಎತ್ತಿದ ಕೈ. ಅದರ ಮೇಲೇರಿ ಕುಳಿತವರನ್ನು ರಕ್ಷಿಸುತ್ತ ಸುರಕ್ಷಿತವಾಗಿ ತನ್ನ ಕಾರ್ಯ ಮುಗಿಸುವ ಚಾಣಾಕ್ಷತನ ಹೊಂದಿದೆ. ಕರ್ನಾಟಕ ಸೇರಿದಂತೆ ನೆರೆಯ ಮಹಾರಾಷ್ಟ್ರ, ಕೇರಳ, ಆಂಧ್ರಪ್ರದೇಶ ರಾಜ್ಯಗಳಲ್ಲೂ ಅಭಿಮನ್ಯುವಿನ ಯಶಸ್ವಿ ಕಾರ್ಯಚರಣೆಯ ಸಾಧನೆಗಳು ಹಲವಿದೆ. ಯಾವುದಕ್ಕೂ ಎದುರದೆ ಮುನ್ನುಗ್ಗುವ ಪ್ರವೃತ್ತಿಯಿರುವ ಅಭಿಮನ್ಯುವಿಗೆ ಅರಣ್ಯ ಇಲಾಖೆಯ ಸಿಬ್ಬಂದಿ ಹಾಗೂ ಪಶುವೈದ್ಯರಿಂದ ಮೆಚ್ಚಿಗೆಯಿದೆ. ಎಂಥಾ ಕಠಿಣ ಕಾರ್ಯಚರಣೆಯಾದರು ಅಭಿಮನ್ಯುವಿನ ನೆರವಿನಿಂದ ಸುಲಭವಾಗಿ ಸಾಧಿಸಿದ ಉದಾಹರಣೆಗಳಿವೆ. ಹಾಗೇ ಈ ಅಭಿಮನ್ಯು ಮಾವುತನ ಹೊರತಾಗಿ ಹೊಸಬ್ಬರನ್ನ ಅಷ್ಟು ಸುಲಭವಾಗಿ ಹತ್ತಿರ ಸೇರಿಸುವುದಿಲ್ಲ. ಈ ಕಾರಣಕ್ಕೆ ಅಭಿಮನ್ಯುವಿನ ಬಳಿ ಮಾವುತನಿಲ್ಲದೆ ಹೋಗುವುದು ಅಪಾಯಕಾರಿ.


ಇಷ್ಟೆಲ್ಲಾ ಕೀರ್ತಿ, ಯಶಸ್ಸುಗಳಿಸಿರುವ ಅಭಿಮನ್ಯುವಿಗೆ ಈ ಬಾರಿ ದಸರಾದಲ್ಲಿ ಅಂಬಾರಿ ಹೊರುವ ಯೋಗ. ಅದು 20 ವರ್ಷಗಳ ಕಾಲ ಸತತವಾಗಿ ದಸರಾದಲ್ಲಿ ಭಾಗವಹಿಸಿದ ಕಾರಣಕ್ಕೆ ಮತ್ತು ಅದರ ಶ್ರಮಕ್ಕೆ ತಕ್ಕ ಪ್ರತಿಫಲವೆಂದರು ತಪ್ಪಿಲ್ಲ. ಈ ಬಾರಿ ಅಂಬಾರಿ ಹೊರುವ ಪ್ರಮುಖ ಆನೆ ಅಭಿಮನ್ಯುವೆಂದು ಗೊತ್ತು ಮಾಡಿದ್ದು ಅದಕ್ಕೆಂದು ಅಭಿಮನ್ಯು ತಯಾರಾಗುತ್ತಿದ್ದಾನೆ. ಇಂಥಾ ಅಭಿಮನ್ಯುವಿಗೆ ಎಲ್ಲಾರ ಕಡೆಯಿಂದ ಆಲ್ ದ ಬೆಸ್ಟ್ ಹೇಳೋಣ.

LEAVE A REPLY

Please enter your comment!
Please enter your name here