ಸಿಎಂ ಯಡಿಯೂರಪ್ಪ ನೇತೃತ್ವದಲ್ಲಿ ಇಂದು 17 ಶಾಸಕರು ರಾಜಭವನದಲ್ಲಿ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. 17 ಶಾಸಕರಿಗೆ ಸಚಿವ ಸ್ಥಾನ ನೀಡಿದ್ದರು ಕರಾವಳಿ ಮತ್ತು ಹಳೇ ಮೈಸೂರು ಪ್ರಾಂತ್ಯಕ್ಕೆ ಒಂದೂ ಸಚಿವ ಸ್ಥಾನ ನೀಡಿಲ್ಲ. ಇನ್ನು ಹಿಂದಿನ ದೋಸ್ತಿ ಸರ್ಕಾರದಲ್ಲಿ ಹಳೆ ಮೈಸೂರು ಭಾಗದ ಹಲವು ಶಾಸಕರು ಮಂತ್ರಿಯಾಗಿದ್ದರೆ ಬಿಜೆಪಿ ಸರ್ಕಾರದ ಅವಧಿಯಲ್ಲಿ ಓರ್ವ ಶಾಸಕನಿಗೆ ಮಂತ್ರಿ ಸ್ಥಾನ ಸಿಕ್ಕಿಲ್ಲ.
ಅಚ್ಚರಿ ಎಂದರೆ ಮೈಸೂರು, ಚಾಮರಾಜನಗರ, ಮಡಿಕೇರಿ, ಹಾಸನ ಯಾವ ಜಿಲ್ಲೆಗಳಿಗೂ ಯಡ್ಡಿ ಸಂಪುಟದಲ್ಲಿ ಪ್ರಾತಿನಿಧ್ಯ ಸಿಕ್ಕಿಲ್ಲ. ಮೈಸೂರು, ಮಡಿಕೇರಿ, ಹಾಸನ, ಚಾಮರಾಜನಗರ ಭಾಗದಲ್ಲಿ ಎಂಟು ಶಾಸಕರು ಇದ್ದರು ಒಬ್ಬರಿಗೂ ಸಚಿವ ಸ್ಥಾನ ಸಿಕ್ಕಿಲ್ಲ. ಮೈಸೂರಿನ ರಾಮದಾಸ್ ಅವರಿಗೂ ಸಚಿವ ಸ್ಥಾನ ಕೈ ತಪ್ಪಿದೆ.
ಇನ್ನು ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕರಾವಳಿ ಭಾಗದಲ್ಲಿ ಬಿಜೆಪಿಗೆ ಹೆಚ್ಚಿನ ಸ್ಥಾನ ಸಿಕ್ಕಿದ್ದರು ಸಂಪುಟ ವಿಸ್ತರಣೆಯಲ್ಲಿ ಕರಾವಳಿ ಕರ್ನಾಟಕವನ್ನು ಕಡೆಗಣಿಸಲಾಗಿದೆ. ಕರಾವಳಿಯ ಮೂರು ಜಿಲ್ಲೆಗಳ ಪೈಕಿ ಯಾವೊಬ್ಬ ಶಾಸಕನಿಗೂ ಸಚಿವ ನೀಡಿಲ್ಲ, ಬದಲಾಗಿ ಎಂಎಲ್ಸಿ ಕೋಟಾ ಶ್ರೀನಿವಾಸ್ ಪೂಜಾರಿ ಅವರಿಗೆ ಸಚಿವ ಸ್ಥಾನ ನೀಡಲಾಗಿದೆ. ಒಟ್ಟಾರಿಯಾಗಿ ಬಿ.ಎಸ್. ಯಡಿಯೂರಪ್ಪನವರ ಸಂಪುಟ ಪ್ರಾದೇಶಿಕ ಅಸಮಾನತೆಯಿಂದ ಕೂಡಿದೆ ಎಂಬ ಆರೋಪ ಕೇಳಿ ಬರುತ್ತಿದೆ. ಇನ್ನು ಲಿಂಗಾಯತರಿಗೆ ಹೆಚ್ಚಿನ ಪ್ರಾತಿನಿಧ್ಯ ನೀಡಿರುವುದಕ್ಕೂ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ.