ಬೆಂಗಳೂರು: ಬೈ ಎಲೆಕ್ಷನ್ ಇದೀಗ ಕ್ಲೈಮ್ಯಾಕ್ಸ್ ಹಂತಕ್ಕೆ ಬಂದು ತಲುಪಿದೆ. ನವೆಂಬರ್ 3 ರಂದು ಮತದಾನ ನಡೆಯಲಿದ್ದು, ಇಂದು ಬಹಿರಂಗ ಪ್ರಚಾರ ಅಂತ್ಯವಾಗಲಿದೆ. ಹೀಗಾಗಿ ಇಂದು ಇಡೀ ದಿನ ಬಹಿರಂಗ ಪ್ರಚಾರ ಮಾಡಿ ತಮಗೆ ಬೆಂಬಲ ಕೊಡಿಸುವಂತೆ ಆರ್ ಆರ್ ನಗರ ವಿಧಾನ ಸಭಾ ಕ್ಷೇತ್ರದ ಅಭ್ಯರ್ಥಿಗಳು ಮತಯಾಚಿಸಿದರು. ಈ ವೇಳೆ ಕಾಂಗ್ರೆಸ್ ನಾಯಕರ ವಿರುದ್ಧ ಆರೋಪ ಮಾಡಿದ ಬಿಜೆಪಿ ಅಭ್ಯರ್ಥಿ ಮುನಿರತ್ನ, ನಿನ್ನೆ ಹಣ ಹಂಚುತ್ತಿದ್ದ ಕಾಂಗ್ರೆಸ್ ಕಾರ್ಯಕರ್ತರನ್ನು ಬಂಧಿಸಲಾಗಿದೆ. ಏಳು ಎಫ್ಐಆರ್ ಗಳಾಗಿದೆ. ಕೆಲವರು ವಾಹನಗಳನ್ನು ಬಿಟ್ಟು ಓಡಿ ಹೋಗಿದ್ದಾರೆ. ಎಲ್ಲವೂ ತನಿಖೆ ಆಗುತ್ತಿದೆ. ನಾನು ಮೊದಲಿಂದಲೂ ಇದನ್ನೇ ಹೇಳ್ತಿದ್ದೆ. ಸ್ವಲ್ಪ ಮೈಮರೆತರೂ ಈ ಕ್ಷೇತ್ರ ಕೆಜಿ, ಡಿಜೆ ಹಳ್ಳಿ ಆಗುತ್ತೆ ಅಂದಿದ್ದೆ. ಕೊಲೆಗಳೂ ನಡೆಯುತ್ತವೆ ಅಂದಿದ್ದೆ. ನಿನ್ನೆ ರಾತ್ರಿ ಅದಾಗಬೇಕಿತ್ತು. ಪೊಲೀಸರ ಮುನ್ನೆಚ್ಚರಿಕೆಯಿಂದ ಅದು ತಪ್ಪಿದೆ ಎಂದು ತಿಳಿಸಿದರು.
ಮುಂದುವರೆದು ಮಾತನಾಡಿದ ಅವರು, ಕಾಂಗ್ರೆಸ್ ನವ್ರು ಅಷ್ಟು ಪ್ರಾಮಾಣಿಕರು ಆಗಿದ್ರೆ ಹಣ ಹಂಚೋ ಕೆಲಸ ಯಾಕೆ ಮಾಡಬೇಕಿತ್ತು. ಕನಕಪುರದಿಂದ ಬಂದವರು ನಿನ್ನೆ ಕ್ಷೇತ್ರದಲ್ಲಿ ಹಣ ಹಂಚಿದ್ದಾರೆ. ಏಳು ಕಡೆ ಹಣ ಹಂಚಿ ಸಿಕ್ಕಿಬಿದ್ದಿದ್ದಾರೆ. ನಮ್ಮ ಪಕ್ಷದ ಸಿದ್ದೇಗೌಡರು, ಅವರ ಮಗನ ಮೇಲೆ ಹಲ್ಲೆ ಮಾಡಿದ್ದಾರೆ. ಇಂಥ ದೌರ್ಜನ್ಯ ಯಾಕೆ ಮಾಡ್ತಿದೀರಿ? ನಿಮ್ಮ ಪರ ಕನಕಪುರದಿಂದ ಜನ ಬರ್ತಾರೆ ಅಂತ ನಮಗೂ ಗೊತ್ತು. ಆದ್ರೆ ಕನಕಪುರದಿಂದ ಜನರನ್ನ ಕರೆಸಿ ಬೆಂಗಳೂರು ಹಾಳು ಮಾಡುವ ಅಗತ್ಯ ಇತ್ತಾ? ಬೆಂಗಳೂರನ್ನು ಶಾಂತಿಯಿಂದ ಇರೋಕ್ಕೆ ಬಿಡಿ. ನಾನು ಕ್ಷೇತ್ರಕ್ಕೆ ಮಿಲಿಟರಿ ಬರಲಿ ಅಂತ ಕೇಳಿದ್ದು ಈ ಕಾರಣಕ್ಕೆನೇ ಎಂದು ಆರೋಪಿಸಿದರು.
ಬಿಜೆಪಿಗೆ ಮುನಿರತ್ನ ಮುಳ್ಳು ಎಂಬ ಡಿಕೆಶಿ ಆರೋಪ ವಿಚಾರದ ಬಗ್ಗೆ ಮಾತನಾಡಿದ ಅವರು, ಯಾರು ಒಳ್ಳೆಯವ್ರು ಯಾರು ಭ್ರಷ್ಟರು ಅಂತ ಇಡೀ ಪ್ರಪಂಚಕ್ಕೆ ಗೊತ್ತು. ಮುನಿರತ್ನ 18 ನೇ ವಯಸ್ಸಿಂದಲೇ ಸಣ್ಣ ಗುತ್ತಿಗೆದಾರನಾಗಿ ಕೆಲಸ ಶುರು ಮಾಡಿದ. 18 ನೇ ವಯಸ್ಸಿಂದಲೇ ಆದಾಯ ತೆರಿಗೆ ಕಟ್ಟಿದ. ಮುನಿರತ್ನ ಭ್ರಷ್ಟ ಅನ್ನೋದಿಕ್ಕೆ ಯಾವುದೂ ಇಲ್ಲ. ಶಾಸಕನಾಗಿ ಎರಡನೇ ಸಲ ಗೆದ್ದಿದ್ದೇನೆ. ಭ್ರಷ್ಟ ಆಗಿದ್ರೆ ಕಾಂಗ್ರೆಸ್ ನವ್ರು ಯಾಕೆ ಸೇರಿಸಿಕೊಂಡಿದ್ರು. ಅವತ್ತೇ ಪಕ್ಷದಿಂದ ಕಳಿಸಬೇಕಿತ್ತು ನನ್ನನ್ನು ಎಂದು ಪ್ರಶ್ನೆ ಹಾಕಿದರು.