ಬಾಯಿ ಹುಣ್ಣು ಅಥವಾ ಮೌತ್ ಅಲ್ಸರ್ ಈ ಸಮಸ್ಯೆಯಿಂದ ಒಮ್ಮೆಯಾದರೂ ಬಳಲದ ವ್ಯಕ್ತಿಯಿಲ್ಲ. ಈ ಸಮಸ್ಯೆಯಾದಾಗ ಪ್ರತಿಯೊಬ್ಬರೂ ಅದೊಂದು ಅಸಾಮಾನ್ಯವಾದ ನೋವನ್ನು ಅನುಭವಿಸಿಯೇ ಇರುತ್ತಾರೆ. ಸಾಮಾನ್ಯವಾಗಿ ಪ್ರತಿಯೊಬ್ಬರಲ್ಲೂ ಈ ಬಾಯಿ ಹುಣ್ಣಿನ ಸಮಸ್ಯೆ ಅನುಭವಿಸಿರುತ್ತಾರೆ. ಬಾಯಿ ಹುಣ್ಣು ಹಲವು ಕಾರಣಕ್ಕೆ ಬರುತ್ತದೆ. ದೇಹದಲ್ಲಿನ ಉಷ್ಣತೆ, ಕಡಿಮೆ ನೀರು ಕುಡಿಯುವುದು, ದೈಹಿಕ ಅಥವಾ ರಾಸಾಯನಿಕ ಗಾಯಗಳು, ಸೂಕ್ಷ್ಮಾಣುಜೀವಿಗಳಿ೦ದಾಗುವ ಸೋ೦ಕು, ಮಸಾಲೆಯುಕ್ತ ಆಹಾರ, ಆ್ಯಸಿಡಿಕ್ ಆಹಾರ, ಹಲ್ಲನ್ನು ಸರಿಯಾಗಿ ಶುಚಿಗೊಳಿಸದ ಕಾರಣದಿಂದಾಗಿ ಬರುತ್ತದೆ.
ಪದೇ ಪದೇ ಬರುವ ಬಾಯಿ ಹುಣ್ಣುಗಳು ರೋಗನಿರೋಧಕ ಕೊರತೆಯಯನ್ನು ಸೂಚಿಸುತ್ತದೆ, ಅಲ್ಲದೆ ಇವುಗಳು ಬಾಯಿಯಲ್ಲಿರುವ ಮ್ಯೂಕಸ್ ಪದರದಲ್ಲಿಯ ಇಮ್ಯೂನೋಗ್ಲೋಬುಲಿನ್ನ ಮಟ್ಟ ಕಡಿಮೆಯಾಗಿರುವುದರ ಸೂಚಕ. ವಿಟಮಿನ್ Cಯ ಕೊರತೆಯಿ೦ದ ಸಹ ಬಾಯಲ್ಲಿ ಉಂಟಾಗುವ ಸಣ್ಣ ಗಾಯ ಹುಣ್ಣು ಉ೦ಟಾಗಲು ಕಾರಣವಾಗುತ್ತದೆ ವಿಟಮಿನ್ B12, ಜಿ೦ಕ್ಗಳ ಕೊರತೆಯೂ ಸಹ ನೇರವಾಗಿ ಹುಣ್ಣಿಗೆ ಎಡೆಮಾಡಿಕೊಡುತ್ತದೆ.
ಅತಿಯಾದ ಆಸ್ಪಿರಿನ್ ಅಥವಾ ಆಲ್ಕೊಹಾಲ್ಗಳು ಬಾಯಿ ಹುಣ್ಣಿಗೆ ರಾಸಾಯನಿಕ ಕಾರಣ. ಸೋಡಿಯಮ್ ಲಾರಿಲ್ ಸಲ್ಫೇಟ್, ಬಾಯಿ ಹುಣ್ಣನ್ನು ಹೆಚ್ಚು ಮಾಡುತ್ತದೆ. ವೈರಲ್, ಫ೦ಗಲ್ ಹಾಗೂ ಬ್ಯಾಕ್ಟೀರಿಯಲ್ ಕಾರಣದಿಂದಲೂ ಬಾಯಿ ಹುಣ್ಣು ಬರುತ್ತದೆ. ಬಾಯಿ ಹುಣ್ಣು ಉ೦ಟಾಗಲು ಮತ್ತೊ೦ದು ಕಾರಣವೆ೦ದರೆ ತೊಳೆಯದ ಕೈಗಳಿ೦ದ ಒಣಗಿದ ತುಟಿಗಳನ್ನು ಮುಟ್ಟುವುದು. ಇದಕ್ಕೆ ಪ್ರಮುಖ ಕಾರಣವೆ೦ದರೆ ಕೈಗಳಲ್ಲಿ ಇರುವ೦ತಹ ಬ್ಯಾಕ್ಟೀರಿಯಾಗಳು ಒಣಗಿದ ತುಟಿಗಳಲ್ಲಿ ಇರುವ ತೆಳ್ಳನೆಯ, ತೆರೆದ ಸೀಳುಗಳನ್ನು ಪ್ರವೇಶಿಸುತ್ತವೆ ಈ ಕಾರಣಕ್ಕೂ ಬಾಯಿಹುಣ್ಣುಗಳು ಹೆಚ್ಚುತ್ತವೆ.
ಬಾಯಿ ಹಿಣ್ಣಿನ ಸಮಸ್ಯೆಯನ್ನು ಮನೆ ಮದ್ದಿನಲ್ಲೇ ನಿವಾರಿಸಿಕೊಳ್ಳಬಹುದು ದೇಹದಲ್ಲಿನ ಉಷ್ಣತೆ ಕಡಿಮೆ ಮಾಡುವುದರಿಂದ ಈ ಸಮಸ್ಯೆ ನಿವಾರಿಸಬಹುದು. ಹೆಚ್ಚು ಹೆಚ್ಚು ನೀರು ಕುಡಿಯುವುದು, ಎಳನೀರು, ಮಜ್ಜಿಗೆ ಹೀಗೆ ದೇಹಕ್ಕೆ ತಂಪು ನೀಡುವ ಆಹಾರ ಸೇವನೆಯಿಂದ ಹಣ್ಣು ಕಡಿಮೆಯಾಗುತ್ತದೆ. ದನಿಯಾ ನೀರು, ಜೀರಿಗೆ ನೀರು, ಕೂಡ ಬಾಯಿ ಹುಣ್ಣು ನಿವಾರಿಸಬಲ್ಲದು. ಬಿಸಿ ನೀರಿಗೆ ಕಲ್ಲುಪ್ಪು ಸೇರಿಸಿ ಬಾಯಿ ಮುಕ್ಕಳಿಸುವುದರಿಂದ ಬಾಯಿ ಹುಣ್ಣಿನ ಸಮಸ್ಯೆಯನ್ನು ನಿವಾರಿಸಿಕೊಳ್ಳಬಹುದು. ಹುಣ್ಣಿನ ಮೇಲೆ ಸ್ವಲ್ಪ ಪ್ರಮಾಣದಲ್ಲಿ ವಿನೇಗರ್ ಅನ್ನು ಹಚ್ಚುವುದರಿ೦ದ ಅಲ್ಪ ಪ್ರಮಾಣದ ನೋವು ನಿವಾರಣೆಯಾಗುತ್ತದೆ.
ಊಟದ ಬಳಿಕ ತುಳಸಿ ಕೊಡಿ ಅಥವಾ ಎಲೆ ಜಗಿಯುವುದರಿಂದ ಹಾಗೂ ಎರಡು ಬಸಲೆ ಸೊಪ್ಪನ್ನು ಚೆನ್ನಾಗಿ ಅಗೆದು ತಿನ್ನುವುದರಿಂದ ಬಾಯಿ ಹುಣ್ಣು ನಿವಾರಣೆಯಾಗುತ್ತದೆ. ಹುಣ್ಣಾಗಿರುವ ಜಾಗದಲ್ಲಿ ಜೇನುತುಪ್ಪವನ್ನು ಹಚ್ಚಿ ಹತ್ತು ನಿಮಿಷ ಬಿಟ್ಟು ತೊಳೆದುಕೊಂಡರೆ ಅದರ ಉರಿ ಕಡಿಮೆಯಾಗುತ್ತದೆ.