ಬಿ.ಎಸ್.ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರಕಾರದ ಸಚಿವ ಸಂಪುಟ ವಿಸ್ತರಣೆಯಾದ ಬೆನ್ನಲ್ಲೇ ರಾಜ್ಯ ಬಿಜೆಪಿಯಲ್ಲಿ ಬಂಡಾಯ ಭುಗಿಲೆದ್ದಿದೆ. ಸಂಪುಟದಲ್ಲಿ ಸಚಿವ ಸ್ಥಾನ ಕೈತಪ್ಪಿದ ಶಾಸಕರು ಅಸಮಾಧಾನ ಹೊರಹಾಕಿದ್ದು, ಬಹಿರಂಗವಾಗಿ ವರಿಷ್ಠರ ವಿರುದ್ದ ತಿರುಗಿ ಬಿದ್ದಿದ್ದಾರೆ. ಪಕ್ಷ ನಿಷ್ಠರು, ಹಿರಿಯರನ್ನು ಕಡೆಗಣಿಸಲಾಗಿದೆ ಎಂಬ ಆಕ್ಷೇಪ ರಾಜ್ಯ ಬಿಜೆಪಿ ವಲಯದಲ್ಲಿ ಕೇಳಿಬರುತ್ತಿದೆ.
ಸಚಿವ ಸ್ಥಾನ ಸಿಗದಿರುವುದಕ್ಕೆ ತೀವ್ರ ಅಸಮಾಧಾನ ಹೊರ ಹಾಕಿರುವ ಬಸನ ಗೌಡ ಪಾಟೀಲ್ ಯತ್ನಾಳ್, ಉಮೇಶ್ ಕತ್ತಿ, ಮುರುಗೇಶ್ ನಿರಾಣಿ, ರೇಣುಕಾಚಾರ್ಯ, ಜಿ.ಎಚ್.ತಿಪ್ಪರೆಡ್ಡಿ ಸೇರಿದಂತೆ ಹಲವು ಹಿರಿಯ ಮತ್ತು ಪ್ರಮುಖ ಬಿಜೆಪಿ ನಾಯಕರು ರಾಜಭವನದಲ್ಲಿ ನಡೆದ ಪ್ರಮಾಣ ವಚನ ಸಮಾರಂಭಕ್ಕೆ ಗೈರುಹಾಜರಾಗಿದ್ದರು.
ಇನ್ನುಳಿದಂತೆ ರಾಜುಗೌಡ, ಪ್ರಭು ಪಾಟೀಲ್, ಬಾಲಚಂದ್ರ ಜಾರಕಿಹೊಳಿ, ಸಿ.ಪಿ.ಯೋಗೇಶ್ವರ್ ಸೇರಿದಂತೆ ಅನೇಕ ಸಚಿವ ಆಕಾಂಕ್ಷಿ ಶಾಸಕರು ಬಿಜೆಪಿ ವರಿಷ್ಠರ ವಿರುದ್ಧ ಬಹಿರಂಗವಾಗಿ ಅಸಮಾಧಾನ ಹೊರಹಾಕಿದ್ದಾರೆ.
“ನಮ್ಮ ಪಕ್ಷ ನಮ್ಮ ಯೋಗ್ಯತೆ ಮನ್ನಣೆ ನೀಡಿಲ್ಲ. ಪಕ್ಷದ ವರಿಷ್ಠರಿಗೆ ನಮ್ಮ ಅರ್ಹತೆ ಇನ್ನೂ ಮನವರಿಕೆ ಆಗಿರಲಿಕ್ಕೆ ಇಲ್ಲ, ಹೀಗಾಗಿ ನಮಗೆ ಸಚಿವ ಸ್ಥಾನ ನೀಡಿಲ್ಲ” ಎಂದು ಅನೇಕ ಶಾಸಕರು ಅಸಮಾಧಾನ ಹೊರಹಾಕಿದ್ದಾರೆ. ಬಿಜೆಪಿಯಲ್ಲಿ ಎದ್ದಿರುವ ಈ ಬಂಡಾಯ ಮುಂದಿನ ದಿನಗಳಲ್ಲಿ ತೀವ್ರ ಸ್ವರೂಪ ಪಡೆದುಕೊಳ್ಳುವ ಸಾಧ್ಯತೆಗಳಿವೆ ಎನ್ನಲಾಗಿದೆ. ತೆರೆಮರೆಯಲ್ಲಿ ಅನೇಕ ಶಾಸಕರು ಬಂಡಾಯಕ್ಕೆ ಕಿಚ್ಚು ಹೊತ್ತಿಸಿದ್ದಾರೆ.