ಪ್ರವಾಹ ವೀಕ್ಷಸಲೆಂದು ಕಲಬುರಗಿಯ ಚಿಂಚೋಳಿ ಗ್ರಾಮಕ್ಕೆ ತೆರಳಿದ್ದ ಕಂದಾಯ ಸಚಿವ ಆರ್. ಅಶೋಕ್ 10 ನಿಮಿಷದಲ್ಲಿ ಪ್ರವಾಹ ವೀಕ್ಷಣೆ ಮಾಡಿ ವಾಪಸ್ ಆಗಿದ್ದಾರೆ..!
ಇಂದು ಆರ್ ಆಶೋಕ್ ಮತ್ತು ಕಲಬುರಗಿ ದಕ್ಷಿಣ ಶಾಸಕ ದತ್ತಾತ್ರೇಯ ಪಾಟೀಲ್ ಹಾಗೂ ಸುರಪುರ ಶಾಸಕ ರಾಜೂಗೌಡ ಅವರು ಕಲಬುರಗಿ ತಾಲೂಕಿನ ಸೈಯದ್ ಚಿಂಚೋಳಿ ಗ್ರಾಮಕ್ಕೆ ಭೇಟಿ ನೀಡಿದ್ದಾರೆ. ಇದಾದ ನಂತರ ಗ್ರಾಮದ ಗಂಜಿ ಕೇಂದ್ರಕ್ಕೂ ಭೇಟಿ ಕೊಟ್ಟಿದ್ದಾರೆ. ಈ ವೇಳೆ ನಮ್ಮನ್ನು ಬೇರೆ ಕಡೆ ಸ್ಥಳಾಂತರ ಮಾಡಿ ಎಂದು ಕೈ ಮುಗಿದು ಗ್ರಾಮದ ಮಹಿಳೆಯರು ಬೇಡಿಕೊಂಡಿದ್ದಾರೆ. ಆದರೆ ಇಂತಹ ಸಂದರ್ಭದಲ್ಲಿ ಅವರ ಜೊತೆಯಲ್ಲಿ ಇದ್ದು ಧೈರ್ಯ ಹೇಳಬೇಕಾದ ಜನಪ್ರತಿನಿಧಿಗಳು ಕೇವಲ 10 ನಿಮಿಷ ಸ್ಥಳದಲ್ಲಿದ್ದು, ಅಲ್ಲಿಂದ ಕಲ್ಕಿತ್ತಿದ್ದಾರೆ.
ಪ್ರವಾಹ ಉಂಟಾಗಿದೆ. ಊರಿಗೆ ಊರೇ ಮುಗಿಳಿದೆ. ಎಷ್ಟೋ ವರ್ಷಗಳಿಂದ ಕಷ್ಟ ಪಟ್ಟು ಕಟ್ಟಿದ ಮನೆ ಬಿದ್ದೋಗಿದೆ. ಜೀನವಕ್ಕೆ ಆಧಾರವಾಗಿದ್ದ ಜಾನುವಾರುಗಳು ಮೃತ ಪಟ್ಟಿವೆ.. ಎಂಥಾ ಸ್ಥಿತಿಯಲ್ಲಿ ಈಗ ಜನರ ಪರಿಸ್ಥಿತಿ ಇರ್ಬಹುದು.. ಕಳೆದ ಐದು ದಿನಗಳಿಂದ ಸುರಿಯುತ್ತಿರುವ ಮಹಾಮಳೆಗೆ ಕಲಬುರಗಿ ಅಕ್ಷರಸಃ ತತ್ತರಿಸಿ ಹೋಗಿದೆ. ಮಹಾಮಳೆಗೆ ಕಲಬುರಗಿ ತಾಲೂಕಿನ ಸೈಯದ್ ಚಿಂಚೋಳಿ ಗ್ರಾಮದ 30 ಹೆಚ್ಚು ಮನೆಗಳಿಗೆ ನೀರು ನುಗ್ಗಿ ಲಕ್ಷಾಂತರ ಮೌಲ್ಯದ ದವಸ ಧಾನ್ಯಗಳನ್ನು ಕಳೆದುಕೊಂಡು ಗ್ರಾಮಸ್ಥರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಮಳೆ ನಿಂತು ಹೋದ ಮೇಲೆ ಈ ಗ್ರಾಮ ಜನರ ಬದುಕು ಬೀದಿಗೆ ಬಿದ್ದಿದೆ. ಇಂಥ ಸಂದರ್ಭದಲ್ಲಿ ಅವರು ಯಾರಿಗೆ ಕಷ್ಟ ತೋಡಿಕೊಳ್ಬಹುದು..? ನಮ್ಮನ್ನಾಳುವ ಜನ ಪ್ರತಿನಿಧಿ ನಮ್ಮತ್ತ ನೋಡ್ತಾರೆ.. ನಮ್ಮ ಕಣ್ಣೀರನ್ನು ಒರೆಸುತ್ತಾರೆ ಅಂತ ಕಾದಿದ್ದ ಜನರಿಗೆ ನಿಜಕ್ಕೂ ನಿರಾಸೆಯಾಗಿತ್ತು.
“ರಾಷ್ಟ್ರೀಯ ವಿಪತ್ತು ಎಂದು ಘೋಷಣೆ ಮಾಡುವಂತೆ ಕೇಂದ್ರಕ್ಕೆ ಮನವಿ”
ಕಲ್ಯಾಣ ಕರ್ನಾಟಕ ಸೇರಿದಂತೆ ಉತ್ತರ ಕರ್ನಾಟಕ ಭಾಗದ ಜಿಲ್ಲೆಗಳು ಅತಿವೃಷ್ಟಿ ಮತ್ತು ಪ್ರವಾಹದಿಂದ ತತ್ತರಿಸಿದ್ದು, ಇದನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಣೆ ಮಾಡುವಂತೆ ಕೇಂದ್ರಕ್ಕೆ ಪತ್ರ ಬರೆಯುತ್ತೇವೆ ಎಂದು ಕಂದಾಯ ಸಚಿವ ಆರ್ ಅಶೋಕ್ ತಿಳಿಸಿದರು. ಪ್ರವಾಹ ಪೀಡಿತ ಜಿಲ್ಲೆಗೆ ಭೇಟಿ ನೀಡಿ ಮಾತನಾಡಿದ ಅವರು, ತೆಲಂಗಾಣ, ಆಂಧ್ರ ಮತ್ತು ಮಹಾರಾಷ್ಟ್ರ ರಾಜ್ಯಗಳಲ್ಲಿಯೂ ಪ್ರವಾಹ ಹೆಚ್ಚಿದೆ. ಅವರೂ ಬೇಡಿಕೆ ಇಟ್ಟಿದ್ದಾರೆ. ಅದರಂತೆ ಕರ್ನಾಟಕ ಪರಿಗಣಿಸುವಂತೆ ಕೋರುತ್ತೇವೆ ಎಂದು ತಿಳಿಸಿದರು.