ತ್ರಿಬಲ್ ರೈಡಿಂಗ್ ನಲ್ಲಿ ಗೋಲ್ಡನ್ ಸ್ಟಾರ್ ಗೆ ನಾಯಕಿಯಾದ ಅನು ಸಿರಿಮನೆ!

0
215

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಧಾರಾವಾಹಿ ಜೊತೆಜೊತೆಯಲಿ ಧಾರಾವಾಹಿಯು ವಿಭಿನ್ನ ಕಥಾ ಹಂದರದ ಮೂಲಕ ಪ್ರೇಕ್ಷಕರ ಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ. ಧಾರಾವಾಹಿಯಲ್ಲಿ ನಾಯಕಿ ಅನು ಸಿರಿಮನೆ ಆಗಿ ನಟಿಸುವ ಮೂಲಕ ಬಣ್ಣದ ಪಯಣ ಶುರು ಮಾಡಿರುವ ಮೇಘಾ ಶೆಟ್ಟಿ ಮೊದಲ ಧಾರಾವಾಹಿಯಲ್ಲಿಯೇ ವೀಕ್ಷಕರ ಮನ ಸೆಳೆಯುವಲ್ಲಿ ಯಶಸ್ವಿಯಾದವರು. ಎಂದೂ ತಾನೊಬ್ಬಳು ನಟಿಯಾಗಬೇಕು ಎಂಬ ಕನಸು ಕೂಡಾ ಕಂಡಿರದ ಆಕೆ ಇಂದು ಮನೆ ಮಾತಾಗಿರುವುದು ಬಣ್ಣದ ಲೋಕದಲ್ಲಿಯೇ! ಅಭಿನಯಿಸಿದ ಮೊದಲ ಧಾರಾವಾಹಿಯಲ್ಲಿಯೇ ಕಿರುತೆರೆ ಪ್ರಿಯರ ಮನ ಸೆಳೆದಿರುವ ಮೇಘಾ ಇಂದು ಎತ್ತ ಹೋದರೂ ಜನ ಅವರನ್ನು ಅನು ಸಿರಿಮನೆ ಎಂದೇ ಗುರುತಿಸುತ್ತಾರೆ. ಅಷ್ಟರ ಮಟ್ಟಿಗೆ ಅವರ ಪಾತ್ರ ವೀಕ್ಷಕರ ಮನ ಗೆದ್ದಿದೆ.

ಅನು ಸಿರಿಮನೆ ಆಗಿ ಕಿರುತೆರೆ ಲೋಕದಲ್ಲಿ ಹೊಸ ಹವಾವನ್ನೇ ಸೃಷ್ಟಿ ಮಾಡಿರುವ ಮೇಘಾ ಶೆಟ್ಟಿ ಕಿರುತೆರೆಯ ನಂತರ ಇದೀಗ ಬೆಳ್ಳಿತೆರೆಗೂ ಕಾಲಿಡಲಿದ್ದಾರೆ. ಮನೋಜ್ಞ ಅಭಿನಯದ ಮೂಲಕ ಕಿರುತೆರೆ ವೀಕ್ಷಕರಿಗೆ ಮನರಂಜನೆಯ ರಸದೌತಣ ಉಣಬಡಿಸುತ್ತಿದ್ದ ಮೇಘಾ ಶೆಟ್ಟಿ ಇದೀಗ ಬೆಳ್ಳಿತೆರೆಯಲ್ಲಿ ಕಾಣಿಸಿಕೊಳ್ಳುವ ಮೂಲಕ ಸಿನಿ ಪ್ರಿಯರನ್ನು ರಂಜಿಸಲಿದ್ದಾರೆ.

ಅಂದ ಹಾಗೇ ಮೇಘಾ ಶೆಟ್ಟಿ ಅವರ ಪಾಲಿಗೆ ಇದು “ಗೋಲ್ಡನ್” ಆಫರ್ ಎಂದರೆ ಸುಳ್ಳಲ್ಲ! ಯಾಕೆಂದರೆ ಮೇಘಾ ಶೆಟ್ಟಿ ಅವರು ಗೋಲ್ಡನ್ ಸ್ಟಾರ್ ಗಣೇಶ್ ಅವರಿಗೆ ನಾಯಕಿಯಾಗಿ ಅಭಿನಯಿಸಲಿದ್ದಾರೆ. ಮಹೇಶ್ ಗೌಡ ನಿರ್ದೇಶನದ ತ್ರಿಬಲ್ ರೈಡಿಂಗ್ ನಲ್ಲಿ ಗಣೇಶ್ ನಾಯಕರಾಗಿ ನಟಿಸಲಿದ್ದು ಅವರಿಗೆ ಜೊತೆಯಾಗಿ ಅನು ಸಿರಿಮನೆ ಆಲಿಯಾಸ್ ಮೇಘಾ ಕಾಣಿಸಿಕೊಳ್ಳಲಿದ್ದಾರೆ.

ಬಾಲ್ಯದಿಂದಿಲೂ ತಾನೊಬ್ಬಳು ಐಎಎಸ್ ಅಧಿಕಾರಿಯಾಗಬೇಕುಂಬುದೇ ಮೇಘಾಳಿಗೆ ಇದ್ದ ಬಹುದೊಡ್ಡ ಕನಸು. ಆದರೆ ಆ ಸಮಯದಲ್ಲಿ ಆಚಾನಕ್ ಆಗಿ ಬಣ್ಣದ ಲೋಕದಿಂದ ಆಫರ್ ಬಂತು. ಸಾಮಾಜಿಕ ಜಾಲತಾಣದಲ್ಲಿ ಮೇಘಾ ಶೆಟ್ಟಿ ಅವರ ಫೋಟೋಗಳನ್ನು ನೋಡಿದ ಜೀ ಕನ್ನಡ ವಾಹಿನಿಯ ಬ್ಯುಸಿನೆಸ್ ಹೆಡ್ ರಾಘವೇಂದ್ರ ಹುಣಸೂರು ಅವರು ಧಾರಾವಾಹಿಯಲ್ಲಿ ನಟಿಸುತ್ತೀರಾ ಎಂದು ಕೇಳಿದರು.

ಎಂದಿಗೂ ನಟನಾ ಲೋಕದ ಕುರಿತು ಆಲೋಚಿಸದ ಆಕೆಗೆ ಧಾರಾವಾಹಿಯಲ್ಲಿ ನಟಿಸುವ ಅವಕಾಶ ಬಂದಾಗ ಆಶ್ಚರ್ಯವಾಯಿತು. ಮಾತ್ರವಲ್ಲ, ನಟನೆಯ ಗಂಧ ಗಾಳಿ ಗೊತ್ತಿರದ ಆಕೆಗೆ ಭಯವೂ ಆಯಿತು. ತದ ನಂತರ ಗಟ್ಟಿ ನಿರ್ಧಾರ ಮಾಡಿದ ಆಕೆ ಬಣ್ಣದ ಲೋಕದನ್ನು ಒಪ್ಪಿಕೊಂಡರು, ಅಪ್ಪಿಕೊಂಡರು. ಅನು ಸಿರಿಮನೆ ಆಗಿ ಬದಲಾದರು. ವೀಕ್ಷಕರು ಆಕೆಯನ್ನು ನೆಚ್ಚಿಕೊಂಡರು.

ಇಷ್ಟು ದಿನ ಅನು ಸಿರಿಮನೆ ಆಗಿ ಕಿರುತೆರೆ ಲೋಕದಲ್ಲಿ ಮನೆ ಮಾತಾಗಿರುವ ಈಕೆ ಇದೀಗ ಮೊದಲ ಬಾರಿಗೆ ಹಿರಿತೆರೆಗೆ ಕಾಲಿಡುತ್ತಿದ್ದು ಅಲ್ಲಿಯೂ ಮಿಂಚುತ್ತಾರಾ ಎಂದು ಕಾದುನೋಡಬೇಕಾಗಿದೆ.
– ಅಹಲ್ಯಾ

LEAVE A REPLY

Please enter your comment!
Please enter your name here