ಮೂರು ದಿನಗಳ ಹಿಂದೆ ಮಂಗಳೂರು ಬಜ್ಪೆ ವಿಮಾನ ನಿಲ್ದಾಣದಲ್ಲಿ ಬಾಂಬ್ ಇಟ್ಟು ಎಲ್ಲರ ಆತಂಕಕ್ಕೆ ಕಾರಣವಾಗಿದ್ದ ಆದಿತ್ಯ ರಾವ್ ಇದೀಗ ಪೊಲೀಸರಿಗೆ ಶರಣಾಗಿದ್ದಾನೆ. ಆತನನ್ನು ವಶಕ್ಕೆ ಪಡೆದಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.
ಇನ್ನು ದೇಶದಲ್ಲಿ ಇಂತಹ ಆತಂಕಕಾರಿ ಅಥವಾ ಯಾವುದೇ ಪ್ರಮುಖ ಘಟನೆಗಳು ಜರುಗಿದರೆ ಸಿನಿಮಾ ನಿರ್ಮಾಪಕ, ನಿರ್ದೇಶಕರು ಆ ಘಟನೆಯನ್ನು ಸ್ಫೂರ್ತಿಯಾಗಿರಿಸಿಕೊಂಡು ಸಿನಿಮಾಗಳನ್ನು ತಯಾರಿಸುತ್ತಾರೆ. ಈಗಾಗಲೇ ಇಂತಹ ಸಾಕಷ್ಟು ಸಿನಿಮಾಗಳು ಕೂಡಾ ತೆರೆಗೆ ಬಂದಿವೆ. ಇದೀಗ ಬಾಂಬರ್ ಆದಿತ್ಯ ರಾವ್ ಜೀವನಾಧಾರಿತ ಸಿನಿಮಾ ತೆರೆಗೆ ಬರಲಿದೆ ಎನ್ನಲಾಗುತ್ತಿದೆ.
‘ಗಡ್ಡಪ್ಪ ಸರ್ಕಲ್’ ಹಾಗೂ ‘ಭೂತದ ಮನೆ’ ಸಿನಿಮಾಗಳನ್ನು ನಿರ್ಮಿಸಿರುವ ತುಳಸಿರಾಮ್ ‘ಫಸ್ಟ್ ರ್ಯಾಂಕ್ ಟೆರರಿಸ್ಟ್ ಆದಿತ್ಯ’ ಹೆಸರಿನ ಟೈಟಲ್ ರಿಜಿಸ್ಟರ್ ಮಾಡಲು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ಅರ್ಜಿ ಸಲ್ಲಿಸಿದ್ದಾರೆ. ಆದರೆ ಫಿಲ್ಮ್ ಚೇಂಬರ್ ಈ ಟೈಟಲ್ಗೆ ಇನ್ನೂ ಗ್ರೀನ್ ಸಿಗ್ನಲ್ ನೀಡಿಲ್ಲ. ಒಂದು ವೇಳೆ ಓಕೆ ಆದರೆ ಬಾಂಬರ್ ಆದಿತ್ಯ ರಾವ್ ಜೀವನ ಸಿನಿಮಾವಾಗಿ ಹೊರಬರುವುದರಲ್ಲಿ ನೋ ಡೌಟ್.
‘ಗಡ್ಡಪ್ಪ ಸರ್ಕಲ್’ ಚಿತ್ರವನ್ನು ನಿರ್ದೇಶಿಸಿರುವ ಬಿ.ಆರ್.ಕೇಶವ್ ಈ ಸಿನಿಮಾಗೆ ಆಕ್ಷನ್ ಕಟ್ ಹೇಳಲಿದ್ದಾರೆ. ಚಿತ್ರದಲ್ಲಿ ಆದಿತ್ಯ ಬಾಲ್ಯದಿಂದ ಹಿಡಿದು ವಿಮಾನ ನಿಲ್ದಾಣಕ್ಕೆ ಬಾಂಬ್ ಇಡುವವರೆಗೂ ಆತನ ಜೀವನದಲ್ಲಿ ಏನು ನಡೆಯಿತು ಎಂಬುದನ್ನು ಸಿನಿಮಾದಲ್ಲಿ ತೋರಿಸಲಿದ್ದಾರಂತೆ. ‘ಆದಿತ್ಯ ರಾವ್ ಸ್ಟೋರಿ ಬಹಳ ಕುತೂಹಲಕಾರಿಯಾಗಿದೆ ಆದ್ದರಿಂದ ಸಿನಿಮಾ ಮಾಡಲು ಹೊರಟಿದ್ದೇವೆ.
ಫಿಲ್ಮ್ ಚೇಂಬರ್ನಿಂದ ಟೈಟಲ್ಗೆ ಒಪ್ಪಿಗೆ ಸಿಗುವ ಭರವಸೆ ಇದೆ. ಆದಿತ್ಯ ಮನೆಯವರನ್ನು ಸಂಪರ್ಕಿಸಿ ಆತನ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯುತ್ತೇವೆ. ಇನ್ನು ಚಿತ್ರದಲ್ಲಿ ಪೊಲೀಸ್ ಅಧಿಕಾರಿಯನ್ನಾಗಿ ಆರ್ಮುಗಂ ರವಿಶಂಕರ್ ಅವರನ್ನು ನಟಿಸಲು ಡೇಟ್ಸ್ ಕೇಳುತ್ತೇವೆ ಎನ್ನುತ್ತಾರೆ ತುಳಸಿರಾಮ್ ಹಾಗೂ ಕೇಶವ್. ಒಂದು ವೇಳೆ ಸಿನಿಮಾ ತಯಾರಾದರೆ ನಾಯಕ, ನಾಯಕಿ ಯಾರಾಗಲಿದ್ದಾರೆ ಎಂಬ ಕುತೂಹಲ ಎಲ್ಲರಿಗಿದೆ.