ಮಾಲ್ಗುಡಿ ಡೇಸ್ ಲೋಕದ ಸುತ್ತ ಹೆಜ್ಜೆಹಾಕುತ್ತಾ

0
157

ಬೆಂಗಳೂರು: ಮಾಲ್ಗುಡಿ ಡೇಸ್.. ಯಾರ ನೆನಪಿಗೆ ಬರೋದಿಲ್ಲ ಹೇಳಿ ಈ ಹೆಸರು.. ಆರ್.ಕೆ.ಲಕ್ಷ್ಮಣ್ 1943 ರಲ್ಲಿ ರಚಿಸಿದ ಸಣ್ಣ ಕಥೆಗಳ “ಮಾಲ್ಗುಡಿ ಡೇಸ್ ” ಸಂಗ್ರಹವನ್ನು ಕನ್ನಡದ ಯಶಸ್ವಿ ನಟ ಹಾಗೂ ನಿರ್ದೇಶಕ ದಿವಂಗತ ಶಂಕರ್ ನಾಗ್ ಇಂಗ್ಲಿಷ್ ಹಾಗೂ ಹಿಂದಿ ಭಾಷೆಯಲ್ಲಿ ನಿರ್ದೇಶಿಸಿದ್ದರು. ಒಟ್ಟು 54 ಎಪಿಸೋಡ್ ಗಳಲ್ಲಿ 39 ಎಪಿಸೋಡ್ ಗಳನ್ನು ದಿ. ಶಂಕರ್ ನಾಗ್ ಹಾಗೂ 15 ಎಪಿಸೋಡ್ ಗಳನ್ನು ಕವಿತಾ ಲಂಕೇಶ್ ಆಕ್ಷನ್ ಕಟ್ ಹೇಳಿದ್ದರು. 1986 ರಲ್ಲಿ ಭಾರತೀಯ ಟಿವಿ ವಾಹಿನಿಯಲ್ಲಿ ವಿಜೃಂಭಿಸಿದ ಮಾಲ್ಗುಡಿ ಡೇಸ್ ಧಾರವಾಹಿ ಸರಣಿ ಇಂದಿಗೂ- ಎಂದೆಂದಿಗೂ ಭಾರತೀಯರ ಪಾಲಿಗೆ ಅದರಲ್ಲೂ ಕನ್ನಡಿಗರ ಪಾಲಿಗೆ ಸಿಹಿ ನೆನಪುಗಳೆ.

ಮಾಲ್ಗುಡಿಯ ದಿನಗಳು ಇಂದು ಹೆಸರಾಂತ ದೂರದರ್ಶನದ ಧಾರವಾಹಿಯಾಗಿದ್ದು, ಇದನ್ನು ಸಾಗರ ಸಮೀಪದ ಅರಸಾಳು ಗ್ರಾಮದ ಸುತ್ತಮುತ್ತಲ ಭಾಗದಲ್ಲಿ ಬಹುತೇಕ ಚಿತ್ರೀಕರಣ ಮಾಡಲಾಗಿತ್ತು. ಈ ಧಾರವಾಹಿಯಲ್ಲಿ ಬರುವ ರೈಲ್ವೆ ನಿಲ್ದಾಣದ ಹಲವು ಚಿತ್ರೀಕರಣಗಳನ್ನು ಅರಸಾಳು ಗ್ರಾಮದಲ್ಲಿ ಮಾಡಲಾಗಿತ್ತು. ಮಾಲ್ಗುಡಿ ಡೇಸ್ ಧಾರಾವಾಹಿ ಚಿತ್ರೀಕರಣದ ನಂತರ ಈ ರೈಲ್ವೆ ನಿಲ್ದಾಣ ಇತಿಹಾಸದ ಪುಟಗಳನ್ನು ಸೇರಿತ್ತು. ದುಸ್ಥಿತಿಯಲ್ಲಿದ್ದ ಈ ರೈಲ್ವೆ ನಿಲ್ದಾಣ ಹಾಗೂ ಅದರ ಕಟ್ಟಡವನ್ನು ಪುನರುಜ್ಜೀವನಗೊಳಿಸುವ ಜವಾಬ್ದಾರಿಯನ್ನು‌ ಮಾಲ್ಗುಡಿ ಡೇಸ್ ಧಾರವಾಹಿಯ ಕಲಾನಿರ್ದೇಶಕ ಜಾನ್ ದೇವರಾಜ್ ಅಚ್ಚುಕಟ್ಟಾಗಿ ನಿರ್ವಹಿಸಿ, ಈ ನಿಲ್ದಾಣವನ್ನು ಸಿದ್ದಪಡಿಸಿದ್ದಾರೆ. ಇತ್ತೀಚೆಗೆ ಈ ಮ್ಯೂಸಿಯಂ ಉದ್ಘಾಟನೆಯಾಗಿದೆ.

ಮಾಲ್ಗುಡಿ ಡೇಸ್ ಧಾರವಾಹಿ ಚಿತ್ರೀಕರಣದಲ್ಲಿ ಬಳಸಿದ ಅರೆಯುವ ಕಲ್ಲು, ಬುಟ್ಟಿ, ಲ್ಯಾಂಪ್ ಮತ್ತಿತರ ವಸ್ತುಗಳನ್ನು ಹಾಗೂ ಕಲಾಕೃತಿಗಳನ್ನು ” “ಮ್ಯೂಸಿಯಂ ಮಾಲ್ಗುಡಿ” ಯಲ್ಲಿ ಪ್ರದರ್ಶನಕ್ಕೆ ಇಡಲಾಗಿದೆ. ಗತಕಾಲದ ರೈಲ್ವೆ ಹಂಚಿನ ನಿಲ್ದಾಣದ ಗೋಡೆಗಳಲ್ಲಿ ಮಾಲ್ಗುಡಿ ಡೇಸ್ ಧಾರವಾಹಿಯ ಕೆಲವು ದೃಶ್ಯಗಳ ಚಿತ್ರಗಳನ್ನು ಬರೆಯಲಾಗಿದೆ. ಈ ಚಿತ್ರಗಳು ಸಜೀವ ದೃಶ್ಯದಂತೆ ನಿಮ್ಮ ಕಣ್ಮುಂದೆ ಧುತ್ತೆಂದು ಬಂದು ಹೋಗುತ್ತದೆ.

ಮ್ಯೂಸಿಯಂ ನ ಭೇಟಿ ನೀಡಿದಾಗ ಮಾಲ್ಗುಡಿಯ ಜನಪ್ರಿಯ ಹಿನ್ನಲೆ ಸಂಗೀತ ನಿಮ್ಮನ್ನು ಮಾಲ್ಗುಡಿಯ ಕನಸೆಂಬೋ ಚಮತ್ಕಾರಿ ಲೋಕಕ್ಕೆ ಕರೆದೊಯ್ಯದೆ ಇರದು.

1989 ರಿಂದ 2015 ರ ತನಕ ನಾಗಪುರ – ಛಿನ್ ದ್ವಾರ, ನಾಗಪುರ – ಜಭಲ್ ಪುರ ನಡುವೆ ಸಂಚರಿಸುತ್ತಿದ್ದ ಮರದಿಂದ ನಿರ್ಮಿಸಿದ ರೈಲ್ವೆ ಭೋಗಿಗಳನ್ನು ಇಲ್ಲಿಗೆ ತಂದು ಸ್ಥಾಪಿಸಿ, ಮಾಲ್ಗುಡಿ ಟೀ ಸ್ಟಾಲ್ ಆಗಿ ಚೆಂದವಾಗಿ ಪರಿವರ್ತನೆ ಮಾಡಲಾಗಿದೆ. ಅಲ್ಲಿ ಸದ್ಯ ಟೀ- ಕಾಫಿ ಸರ್ವೀಸ್ ನೀಡಲಾಗ್ತಿದೆ. ಮಾಲ್ಗುಡಿ ಪ್ರಪಂಚದಲ್ಲಿ ಸುತ್ತಾಡಿ, ಇಲ್ಲಿ ತಣ್ಣಗೆ ಕೂತು ಟೀ ಸವಿದರೆ ನಿಮಗೊಂದು ಚಮತ್ಕಾರಿ ಅನುಭವ ಆಗದಿದ್ರೆ ಕೇಳಿ..

ಚಿತ್ರಗಳು : ಶ್ಯಾಮ್ ಹೆಬ್ಬಾರ್.ಎಸ್

LEAVE A REPLY

Please enter your comment!
Please enter your name here