ಮಕ್ಕಳನ್ನು ದುಡ್ಡಿನಲ್ಲಲ್ಲ, ಜ್ಞಾನದಲ್ಲಿ ಕೋಟ್ಯಧೀಶರನ್ನಾಗಿಸಿ…!

0
225

ಮಕ್ಕಳಲ್ಲಿ ಉತ್ತಮ ಹವ್ಯಾಸ ಬೆಳೆಸುವ ಬಗ್ಗೆ ಕಳೆದ ಅಂಕಣದಲ್ಲಿ ರ್ಚಚಿಸಿದೇವು. ಈ ಕುರಿತು ಮತ್ತಷ್ಟು ಹೊಳಹುಗಳನ್ನು ನೋಡೋಣ. ಸೋಮಾರಿತನಕ್ಕೆ ಅಣ್ಣ ನಿದ್ರೆ, ಅಕ್ಕ ‘ಜಂಕ್​ಫುಡ್’, ತಮ್ಮಂದಿರು ಕಂಪ್ಯೂಟರ್ ಗೇಮ್್ಸ, ತಂಗಿ ಟಿ.ವಿ.! ಮಕ್ಕಳಲ್ಲಿ ಒಳ್ಳೆಯ ಅಭಿರುಚಿ ಬೆಳೆದಂತೆಲ್ಲ ಈ ನಾಲ್ಕರ ಮೇಲೆ ಆಸಕ್ತಿ ಕಡಿಮೆಯಾಗುತ್ತದೆ.

ಒಂದು ವಿಷಯ ನೆನಪಿಡಿ. ಹೆಚ್ಚು ಅಂಕ ತರುವ ಮಕ್ಕಳೆಲ್ಲ ಬುದ್ಧಿವಂತರಲ್ಲ. ಹತ್ತನೆ ತರಗತಿವರೆಗೆ ಅಂಕ ಬುದ್ಧಿಶಕ್ತಿಯನ್ನಷ್ಟೇ ಅಲ್ಲ, ಮಕ್ಕಳು ಜ್ಞಾಪಕ ಇಟ್ಟುಕೊಳ್ಳುವ ವಿಧಾನವನ್ನು ಅವಲಂಬಿಸಿರುತ್ತದೆ. ಉನ್ನತ ವ್ಯಾಸಂಗಕ್ಕೆ ಹೋದಾಗಲೂ ಉತ್ತಮ ಅಂಕಗಳು ಬರಬೇಕೆಂದರೆ ಜ್ಞಾಪಕ ಶಕ್ತಿಯ ಜತೆ ಜ್ಞಾನವೂ ಬೆಳೆಯಬೇಕು.

‘ಐದು ನಿಮಿಷಗಳಲ್ಲಿ ಈ ಲೆಕ್ಕವನ್ನು ಬಿಡಿಸಿದರೆ ಬಹಳ ದಿನಗಳಿಂದ ನೀನು ಕೇಳುತ್ತಿರುವ ಬೈಸಿಕಲ್ ಕೊಡಿಸುತ್ತೇನೆ. ಆಗದಿದ್ದರೆ ಮುಂದಿನ ಶನಿವಾರ, ಭಾನುವಾರ ಮನೆಕೆಲಸವನ್ನೆಲ್ಲ ನೀನೇ ಮಾಡಿ ಅಮ್ಮನಿಗೆ ವಿಶ್ರಾಂತಿ ಕೊಡಬೇಕು’ ಎಂದನು ಅಪ್ಪ. ಹುಡುಗ ಆ ಚಾಲೆಂಜನ್ನು ಒಪ್ಪಿಕೊಂಡ.

ತಂದೆ ಈ ರೀತಿ ಕೇಳಿದ-‘ಒಂದು ಫೋಟೋದಲ್ಲಿರುವ ವ್ಯಕ್ತಿ ತಂದೆ. ನಿನ್ನ ತಂದೆಗೆ ಮಗ. ನಿನಗೆ ಸೋದರರಿಲ್ಲ. ಆ ಫೋಟೋದಲ್ಲಿರುವುದು ಯಾರು? ನೀನಾ? ನಿನ್ನ ತಂದೆಯಾ? ನಿನ್ನ ಮಗನಾ? ಐದು ನಿಮಿಷದಲ್ಲಿ ಹೇಳಬೇಕು’.

ಬಾಲಕ ಒಂದು ಕ್ಷಣವೂ ತಡಮಾಡದೆ ‘ನಾನೇ’ ಎಂದ.

‘ಹೇಗೆ ಹೇಳಿದೆ?’

‘‘ನಿನ್ನ ಪ್ರಶ್ನೆಯಲ್ಲಿ ‘ನಾನಾ?’ ಎಂದು ಕೇಳಲಿಲ್ಲ. ಆದ್ದರಿಂದ ಎರಡನೆ ಉತ್ತರ ಸರಿಯಲ್ಲ. ನನಗೆ ಮಕ್ಕಳಿಲ್ಲ. ಆದ್ದರಿಂದ ಮೂರನೇ ಉತ್ತರ ತಪ್ಪು. ಅಂದರೆ ಉಳಿದಿದ್ದು ನಾನೇ ತಾನೇ’’ ಎಂದನು ಬಾಲಕ.

ತಂದೆ ಮಾತನಾಡಲಿಲ್ಲ. ‘ಯಾಕೆ? ನನ್ನ ಉತ್ತರ ತಪ್ಪಾ?’ ಎಂದು ಮಗ ಕೇಳಿದ.

‘‘ಇಲ್ಲಿ ತಿಳಿದುಕೊಳ್ಳಬೇಕಾದ್ದು ತಪ್ಪಾ-ಸರಿಯಾ ಅನ್ನುವುದಲ್ಲ. ಆತುರಪಟ್ಟು ಉತ್ತರ ಹೇಳುವುದೇಕೇ? ನಿನಗೆ ಐದು ನಿಮಿಷ ಸಮಯ ಕೊಟ್ಟರೂ ಏಕೆ ಐದೇ ಸೆಕೆಂಡ್​ಲ್ಲಿ ಉತ್ತರ ಹೇಳಿದೆ? ‘ನಾನು ಬುದ್ಧಿವಂತ’ ಅಂತ ನಿರೂಪಿಸಿಕೊಳ್ಳಲಿಕ್ಕೆ, ಹೌದಾ?’’ ‘ನಿನ್ನ ಮೇಲೆ ನಿನಗಿರುವ ವಿಶ್ವಾಸ ಬೇರೆ, ನಿನ್ನ ಅಹಂಭಾವವೇ ಬೇರೆ’ ಎಂದನು.

‘‘ಪ್ರಥಮವಾಗಿ ಪ್ರಶ್ನೆಯನ್ನು ಅರ್ಥಮಾಡಿಕೊಳ್ಳಬೇಕು. ಪ್ರಶ್ನೆಯಲ್ಲಿ ಗೊಂದಲವಿದ್ದಾಗ ಅದರಲ್ಲಿನ ಟ್ವಿಸ್ಟ್​ಗಳನ್ನು ತೆಗೆದು ಸಿಂಪಲ್ ಆಗಿ ಮಾಡಿಕೊಳ್ಳಬೇಕು. ಪ್ರಶ್ನೆ ಏನು? ಆ ಫೋಟೋದಲ್ಲಿರುವ ವ್ಯಕ್ತಿ ಒಬ್ಬ ತಂದೆ… ‘ನಿನ್ನ ತಂದೆಗೆ ಮಗ’ ಹೌದಾ?’’

‘ಹೌದು’ ಎಂದನು ಹುಡುಗ.

‘ನಿನ್ನ ತಂದೆಗೆ ಮಗ ಎಂದರೆ ಯಾರು?’ ಪ್ರಶ್ನಿಸಿದನು ಅಪ್ಪ.

‘ನಾನೇ’.

‘ಆ ಮೂರು ಪದಗಳ ಬದಲು ಈ ಒಂದು ಮಾತು ಇಟ್ಟು, ಪ್ರಶ್ನೆ ಬದಲಾಯಿಸಿ ಹೇಳು’.

‘ಆ ಫೋಟೋದಲ್ಲಿ ಇರುವ ವ್ಯಕ್ತಿ ತಂದೆ ನಾನೇ. ಫೋಟೋದಲ್ಲಿರುವ ವ್ಯಕ್ತಿ ಯಾರು?’

‘ಯಾರು?’

‘ನನ್ನ ಮಗ’

‘ಅದು ಸರಿಯಾದ ಉತ್ತರ’.

ತನ್ನ ತಪ್ಪನ್ನು ಅರ್ಥ ಮಾಡಿಕೊಂಡ ಆ ಕಿರಿಯ ಎರಡು ದಿನ ಅಡಿಗೆಮನೆ ಕೆಲಸಗಳನ್ನೆಲ್ಲ ಮಾಡಿದ! ಅವನೇ ಜಾನ್ ಹಾಲ್, ಫಿಸಿಕ್ಸ್​ನಲ್ಲಿ ನೊಬೆಲ್ ಪ್ರಶಸ್ತಿ ಪಡೆದಾತ.

ತನ್ನ ಆತ್ಮಕಥೆಯಲ್ಲಿ ಒಂದು ಕಡೆ ಜಾನ್ ಹಾಲ್ ಹೇಳಿರುವುದು: ‘‘ಮಗ ಟಿ.ವಿ.ಯಲ್ಲಿ ಗಂಟೆಗಟ್ಟಲೇ ಫುಟ್​ಬಾಲ್ ಮ್ಯಾಚ್ ನೋಡಬಾರದು ಎಂದರೆ ‘ಗೆಲುವಿಗಿಂತ ಒಳ್ಳೆಯ ಆನಂದ ಇನ್ನೊಂದಿಲ್ಲ’ ಎಂದು ಅವನಿಗೆ ತಿಳಿಯುವಂತೆ ಹೇಳಿ. ಆಗ ಅವನು ಮತ್ತು ಬರಿಸುವ ಅಭಿರುಚಿಗಳಿಂದ, ಏಳ್ಗೆ ಹೊಂದುವ ಅಭ್ಯಾಸಗಳ ಕಡೆ ಹೊರಳುತ್ತಾನೆ’’.

ಮೇಲಿನ ಉದಾಹರಣೆಯಲ್ಲಿ ಮೂರು ಮುಖ್ಯವಾದ ಅಂಶಗಳಿವೆ.

ಶಾಲೆಯಲ್ಲಿ ಕೇವಲ ಪಾಠಗಳನ್ನು ಹೇಳುತ್ತಾರೆ. ಮಗನ ತಿಳಿವಳಿಕೆಯನ್ನು ಬೆಳೆಸುವ ಹೊಣೆ ತಂದೆ-ತಾಯಿಯದು. ಸಣ್ಣವಯಸ್ಸಿನಲ್ಲೇ ಮಕ್ಕಳು ಮನೆಯ ಜವಾಬ್ದಾರಿ ಹೊರುವಂತೆ ಮಾಡಬೇಕು.
ಪ್ರಶ್ನೆಗಳನ್ನು ಕೇಳುವ ಮೂಲಕ ಮಕ್ಕಳ ಬುದ್ಧಿಶಕ್ತಿ ಪರೀಕ್ಷಿಸಿ ಬಹುಮಾನಗಳನ್ನು ಕೊಡಬೇಕು. ಆಸಕ್ತಿಕರ ಪ್ರಶ್ನೆಗಳನ್ನು ಕೇಳಿ ಪ್ರೋತ್ಸಾಹ ನೀಡಿದರೆ ಮಕ್ಕಳಿಗೆ ವಿದ್ಯೆಯಲ್ಲಿರುವ ನಿರಾಸಕ್ತಿ, ಭಯ ದೂರವಾಗಿ ಚುರುಕುತನ ಬೆಳೆಯುತ್ತದೆ. ತಿಳಿವಳಿಕೆ ವಿವಿಧ ಮಾರ್ಗಗಳಿಂದ ಬರುತ್ತದೆ. ಪೇಪರ್ ಓದುವುದು ಮೊದಲ್ಗೊಂಡು ಪಜಲ್ಸ್ ಪರಿಹರಿಸುವವರೆಗೆ, ಟಿ.ವಿ.ಯಲ್ಲಿ ‘ಒಳ್ಳೆಯ ಚಾನೆಲ್ಸ್’ ನೋಡುವುದರಿಂದ, ಒಳ್ಳೆಯ ಸ್ನೇಹಿತರನ್ನು ಆಯ್ಕೆ ಮಾಡಿಕೊಳ್ಳುವವರೆಗೆ ತಿಳಿವಳಿಕೆ ಬೆಳೆಸಿಕೊಳ್ಳುವ ಹಲವು ಮಾರ್ಗಗಳಿವೆ.

849-02862559
© Asia Images / Masterfile
Model Release: Yes
Property Release: Yes
little girl sits on mother’s lap, both smile at camera

ಇನ್ನು 24 ಗಂಟೆಗಳಲ್ಲಿ ಪ್ರಪಂಚ ಅಂತ್ಯವಾಗುತ್ತದೆಂದು ತಿಳಿದರೆ ಆ ಒಂದು ದಿನವನ್ನು ಯಾವ ರೀತಿ ಕಳೆಯುತ್ತೀಯ? ನಿನ್ನ ಕಣ್ಣೆದುರೇ ಫೈರ್​ಸ್ಟೇಷನ್ ಬೆಂಕಿಯಲ್ಲಿ ಉರಿಯುತ್ತಿರುವುದನ್ನು ಕಂಡು ನೀನೇನು ಮಾಡುತ್ತೀಯ? ಒಂದು ದಿನದ ಮಟ್ಟಿಗೆ ಪಕ್ಷಿಯಾಗಿ, ಇಲ್ಲವೇ ಪ್ರಾಣಿಯಾಗಿ ಇರುವ ಅವಕಾಶ ಸಿಕ್ಕರೆ, ಯಾವುದನ್ನು ಆರಿಸಿಕೊಳ್ಳುತ್ತೀಯ? ಏಕೆ? ಇಂತಹ ಪ್ರಶ್ನೆಗಳನ್ನು ಕೇಳಿ ಜಾಣಉತ್ತರ ಕೊಟ್ಟವನಿಗೆ ಬಹುಮಾನ ಕೊಡಿರಿ. ಬಹುಮಾನ ಎಂದಾಗ ನೆನಪಾಯ್ತು. ಮಕ್ಕಳ ಹುಟ್ಟಿದಹಬ್ಬವನ್ನು ಘನವಾಗಿ ಮಾಡಿರಿ. ಆ ದಿನ ಉತ್ಸಾಹದಿಂದ ಇರಬೇಕಾದ್ದೇ. ಆದರೆ ಮಕ್ಕಳ ಯಶಸ್ಸನ್ನು ಇನ್ನಷ್ಟು ಅಬ್ಬರದಿಂದ ಆಚರಿಸಿ! ಇಲ್ಲಿ ಒಂದು ಸಣ್ಣ ಸಲಹೆ. ಇಡೀ ವರ್ಷ ಮಕ್ಕಳ ಯಶಸ್ಸುಗಳನ್ನು ನೋಟ್ ಮಾಡಿಕೊಳ್ಳುತ್ತ, ಮಕ್ಕಳ ಹುಟ್ಟಿದ ಹಬ್ಬದಂದು ಪಾರ್ಟಿ ಕೊಡಿರಿ. ಆ ವರ್ಷ ನಿಮ್ಮ ಮಗ/ಮಗಳು ಸಾಧಿಸಿದ ಯಶಸ್ಸಿಗಾಗಿ ಪಾರ್ಟಿ ಕೊಡುತ್ತಿರುವುದಾಗಿ ತಿಳಿಸಿರಿ. ನಿಮ್ಮ ಪಕ್ಕದಲ್ಲಿ ಕುಳ್ಳಿರಿಸಿಕೊಂಡು, ‘ಆಗಸ್ಟ್​ನಲ್ಲಿ ಅಮ್ಮ ಹುಷಾರಿಲ್ಲದೆ ಮಲಗಿದಾಗ ಅಡಿಗೆ ಮಾಡಿದ್ದಕ್ಕೆ… ಅದೇ ತಿಂಗಳು ಬಸ್ ಬರದೇ ಇದ್ದಾಗ ತಂಗಿಯನ್ನು ಶಾಲೆಗೆ ಕರೆದುಕೊಂಡು ಹೋಗಿದ್ದಕ್ಕೆ… ಕ್ಲಾಸ್​ನಲ್ಲಿ ಫಸ್ಟ್ ಬಂದಿದ್ದಕ್ಕೆ’ ಎಂದು ಒಂದೊಂದೇ ಕಾರಣ ಹೇಳಿ ಒಂದೊಂದು ಬಹುಮಾನವನ್ನು ಕೊಡಿರಿ.

ಇದರಿಂದ ಮಕ್ಕಳಿಗೆ ಎರಡು ವಿಷಯಗಳು ಅರ್ಥವಾಗುತ್ತವೆ.

  1. ಬಹುಮಾನ ಹಾಗೇ ಸಿಗುವುದಿಲ್ಲ- ಏನಾದರೂ ಸಾಧನೆ ಮಾಡಿದರೆ ಸಿಗುತ್ತದೆ.
  2. ನನ್ನ ಪ್ರತಿ ಒಳ್ಳೆಯ ಕೆಲಸವನ್ನು ನನ್ನ ತಂದೆ-ತಾಯಿ ನೋಟ್ ಮಾಡಿಕೊಳ್ಳುತ್ತಾರೆ.

ಇಂತಹ ತಂದೆ-ತಾಯಿ ಲಭಿಸಿದರೆ ಸಾಕು, ಆ ಮಕ್ಕಳಿಗೆ ಅದಕ್ಕಿಂತ ದೊಡ್ಡ ಅದೃಷ್ಟ ಇನ್ನೊಂದಿಲ್ಲ. ಏಕೆಂದರೆ ಹುಟ್ಟಿದ ದಿನ ಎಲ್ಲರಿಗೂ ಇರುತ್ತದೆ. ಯಶಸ್ಸು ಕೆಲವರಿಗೆ ಸಿಗುತ್ತದೆ. ಅವುಗಳನ್ನು ಗುರುತಿಸುವ ತಂದೆ-ತಾಯಿಗಳು ಕೂಡ ಕೆಲವರೇ ಇರುತ್ತಾರೆ.

ತಿಳುವಳಿಕೆ-ತರ್ಕ: ಒಬ್ಬ ತಂದೆ ಗಂಟೆಗೆ ಸಾವಿರ ಸಂಪಾದಿಸಿದರೆ ಹತ್ತು ವರ್ಷದಲ್ಲಿ ಕೋಟ್ಯಧೀಶ್ವರ ಆಗುತ್ತಾನೆ. ಅದೇ ವ್ಯಕ್ತಿ ವಾರದಲ್ಲಿ ಒಂದು ಗಂಟೆ ಮಗನೊಂದಿಗೆ ‘ಉಪಯುಕ್ತಕರ’ವಾಗಿ ಕಳೆದರೆ, ಆ ಹುಡುಗನನ್ನು ಜ್ಞಾನದಲ್ಲಿ ಕೋಟ್ಯಧೀಶನನ್ನಾಗಿ ಮಾಡುತ್ತಾನೆ. ಮಕ್ಕಳನ್ನು ನಾನಾ ರೀತಿಯ ಪ್ರಶ್ನೆಗಳನ್ನು ಕೇಳುತ್ತ ಅವರಲ್ಲಿ ತರ್ಕ, ಬುದ್ಧಿಶಕ್ತಿಯನ್ನು ಬೆಳೆಸಬೇಕು.

‘ಅಲೆಗಳು ತೀರದ ಕಡೆಗೇ ಏಕೆ ಬರುತ್ತವೆ?’ ‘ಅನ್ನ ಬೆಂದ ಕೂಡಲೇ ಎಲೆಕ್ಟ್ರಿಕ್ ಕುಕ್ಕರ್ ತನ್ನಷ್ಟಕ್ಕೆ ತಾನೇ ಹೇಗೆ ಆಫ್ ಆಗುತ್ತದೆ?’ ಮುಂತಾದ ತರ್ಕಸಹಿತ ಪ್ರಶ್ನೆಗಳನ್ನು ಕೇಳಿದರೆ ಮಕ್ಕಳಲ್ಲಿ ಆಸಕ್ತಿ, ಉತ್ಸುಕತೆ ಬೆಳೆಯುತ್ತವೆ. ಮಕ್ಕಳಿಗೆ ಇಂತಹ ಸಂದೇಹಗಳು ಬಂದಾಗ, ಇಂಟರ್​ನೆಟ್​ನಲ್ಲಿ ಹುಡುಕಿ ಹೇಳಿದರೆ ಮಕ್ಕಳಿಗೆ ಸಾಮಾನ್ಯ ಜ್ಞಾನದ ಬಗ್ಗೆ ಆಸಕ್ತಿ, ಕುತೂಹಲ ಬೆಳೆಯುತ್ತದೆ. ‘ಇವೆಲ್ಲ ನಮಗೆಲ್ಲಿ ತಿಳಿಯುತ್ತೇರೀ’ ಎಂದು ತಳ್ಳಿಹಾಕಬೇಡಿ.

‘ಅಂತರಿಕ್ಷದಲ್ಲಿ ಪ್ರಯಾಣ ಮಾಡುವವರು ಮೂಗು ನವೆಯಾದಾಗ ಹೇಗೆ ಕೆರೆದುಕೊಳ್ಳುತ್ತಾರೆ?’ ಎಂಬ ಸಂದೇಹ ಒಬ್ಬ ಸಣ್ಣ ಹುಡುಗಿಗೆ ಬಂತು. ಶಿಕ್ಷಕರನ್ನು, ಸ್ನೇಹಿತರನ್ನು ಕೇಳಿದಳು. ಎಲ್ಲರೂ ‘ಗೊತ್ತಿಲ್ಲ’ ಅಂದರು. ಅವಳ ತಂದೆ ಮಿಲಿಟರಿಯಲ್ಲಿದ್ದು, ದೂರದಲ್ಲಿ ಎಲ್ಲಿಯೋ ಯುದ್ಧ ಮಾಡುತ್ತಿದ್ದರು. ತಂದೆಗೆ ಪತ್ರ ಬರೆದಾಗ ಈ ಸಂದೇಹ ಪ್ರಸ್ತಾಪಿಸಿದಳು. ಅಪ್ಪನಿಗೆ ಉತ್ತರ ಗೊತ್ತಿರಲಿಲ್ಲ. ಅವರು ಸುಮ್ಮನಾಗದೆ ಅಂತರಿಕ್ಷ ಪ್ರಯಾಣ ಮಾಡಿದ ಆರು ಮಂದಿಗೆ ಪತ್ರ ಬರೆದರು. ಅದರಲ್ಲಿ ಐವರು ಕೂಡಲೇ ಉತ್ತರ ಬರೆದರು.

ಹದಿನಾರು ದಿನ ಭೂಮಿ ಸುತ್ತ ಪ್ರದಕ್ಷಿಣೆ ಮಾಡಿದ ವಿಂಡೀ ಲಾರೆನ್ಸ್ ಎಂಬ ಆಸ್ಟ್ರೊನಾಟ್, ‘ಅಂತರಿಕ್ಷದಲ್ಲಿ 3 ಬಾರಿ ಮಾತ್ರ ಸ್ಪೇಸ್​ಸೂಟ್ ಧರಿಸಬೇಕಾಗುತ್ತದೆ. ಪ್ರವೇಶಿಸುವಾಗ, ಇಳಿಯುವಾಗ, ಸ್ಪೇಸ್​ವಾಕ್ ಮಾಡುವಾಗ. ಆದ್ದರಿಂದ ನವೆಯಿಂದ ದೊಡ್ಡ ಸಮಸ್ಯೆಯೇನೂ ಆಗುವುದಿಲ್ಲ’ ಎಂದು ಬರೆದ. ಮತ್ತೊಬ್ಬ ಆಸ್ಟ್ರೋನಾಟ್, ‘ನವೆಯಾದಾಗ ಆ ನೋವಿನಿಂದ ಹೊರಗೆ ಬರಬೇಕೆಂದರೆ, ಅದನ್ನು ಮರೆತು ಬೇರೆ ವಿಷಯ ಯೋಚಿಸಬೇಕು. ಇದೊಂದೇ ಸುಲಭದ ಮಾರ್ಗ’ ಎಂದು ಬರೆದ!

ಇಲ್ಲಿ ಉತ್ತರ ಮುಖ್ಯವಲ್ಲ. ಮಗಳ ಸಂದೇಹ ಪರಿಹಾರಕ್ಕೆ ತಂದೆ ಮಾಡಿದ ಪ್ರಯತ್ನವಿದೆಯಲ್ಲ, ಅದು ಮುಖ್ಯ. ಮಕ್ಕಳಿಗೆ ತಿಳಿಯದ ವಿಷಯಗಳನ್ನು ವಿವರಿಸಿ ಹೇಳುವುದಕ್ಕಿಂತ ಬೇರೆ ಸಂತೋಷ ಯಾವುದಿದೆ? ವಿಜ್ಞಾನ, ಇತಿಹಾಸ, ಆಂತ್ರೋಪಾಲಜಿ ಮೊದಲಾದ ವಿಷಯಗಳು ಎಷ್ಟು ಆಸಕ್ತಿಕರವಾಗಿರುತ್ತದೆಯೆಂದು ಮಕ್ಕಳಿಗೆ ಸಣ್ಣವಯಸ್ಸಿನಲ್ಲೇ ಹೇಳಿದರೆ ಅವರಿಗೆ ವಿದ್ಯೆಯ ಬಗ್ಗೆ ಇನ್ನಷ್ಟು ಆಸಕ್ತಿ ಬರುತ್ತದೆ. ಭಾರರಹಿತ ಸ್ಥಿತಿಯಲ್ಲಿ ಅಂತರಿಕ್ಷದಲ್ಲಿ ನೀರು ಕುಡಿಯುವುದರಿಂದ ಹಿಡಿದು ಪ್ರತಿಯೊಂದೂ ಕಷ್ಟವೇ. ಈ ವಿಷಯದ ಬಗ್ಗೆ ಅಂತರ್ಜಾಲದಲ್ಲಿ ಅನೇಕ ಕುತೂಹಲಭರಿತ ವಿಷಯಗಳಿವೆ. ಇನ್ನೂ ವಿವರಗಳು ಬೇಕೆಂದರೆ ವಿಲಿಯಂ ಪೋ›ಗ್ ಬರೆದಿರುವ ‘ಹೌ ಡು ಯು ಗೋ ಟು ಬಾತ್​ರೂಂ ಇನ್ ಸ್ಪೇಸ್’ ಕೃತಿಯನ್ನು ಓದಿರಿ. ಮೊದಲ ಮಾತಿನಲ್ಲಿ ‘ನಾಲೆಡ್ಜ್ ಕರೆಂಟ್, ಆದರೆ ಕುತೂಹಲ ಅದರ ಸ್ವಿಚ್’ ಎಂದು ಬರೆದ ವಾಕ್ಯವಿದೆ. ಅಂತಹ ಕುತೂಹಲವಿರಬೇಕಷ್ಟೇ. ಇದ್ದರೆ ಮಕ್ಕಳನ್ನು ಎಷ್ಟೋ ರೀತಿಯಲ್ಲಿ ಎಂಗೇಜ್ ಮಾಡಬಹುದು.

ನಿನ್ನ ಬೆಡ್​ರೂಂ ಚಿತ್ರ ಬಿಡಿಸುತ್ತ ಯಾವ್ಯಾವ ವಸ್ತುಗಳು ಎಲ್ಲೆಲ್ಲಿವೆ ಎಂದು ಹೇಳಬಲ್ಲೆಯಾ? ಒಂದೊಂದು ಸರಿಯುತ್ತರಕ್ಕೂ ಬಹುಮಾನ. ಕಳೆದ ವರ್ಷದಲ್ಲಿ ನೀನು ಸಾಧಿಸಿದ ಸಣ್ಣಸಣ್ಣ ಯಶಸ್ಸು ಯಾವುವು? ಎಷ್ಟು ಸಣ್ಣದಾದರೂ ಸರಿ… ನಾಲ್ಕನ್ನು ಬರೆದು ತೋರಿಸು. ಕಳೆದ ವರ್ಷದ ನಿನ್ನ ಬರ್ತ್​ಡೇ ದಿನ ಬೆಳಗ್ಗೆಯಿಂದ ಸಂಜೆಯವರೆಗೆ ಏನೇನು ನಡೆಯಿತು? ನೆನಪಿರುವುದನ್ನು ಬರೆ. ಪ್ರತಿ ಐಟಂಗೆ ಬಹುಮಾನ.

ಈ ರೀತಿ ಪ್ರೋತ್ಸಾಹಿಸಿದರೆ, ಹಾಲ್​ನಲ್ಲಿ ಒಂಟಿಯಾಗಿ ಟಿ.ವಿ. ನೋಡುವುದಕ್ಕಿಂತ ರೂಂನಲ್ಲಿ ಡ್ಯಾಡಿ ಜತೆ ಇದ್ದರೆ ಚೆನ್ನಾಗಿರುತ್ತದೆ ಎಂಬ ಭಾವನೆ ಮಕ್ಕಳಲ್ಲಿ ಬೆಳೆಯುತ್ತದೆ.”Like a diamond in the sky, up above the world so high, How I wonder what you are, Twinkle Twinkle little star”… ಈ ರೀತಿ ಹಾಡನ್ನು, ಕೊನೆಯಿಂದ ಮೊದಲ ಸಾಲಿಗೆ ಬರುವಂತೆ ಹಾಡುವುದು ಮುಂತಾದ ಗೇಮ್ಸ್​ನಿಂದ ಮಕ್ಕಳಲ್ಲಿ ಆಸಕ್ತಿ ಹೆಚ್ಚುತ್ತದೆ.

LEAVE A REPLY

Please enter your comment!
Please enter your name here