ಮಹಿಮಾ ಅರವತ್ತು ಮತ್ತು ಪಟೇಲರು

0
90

ಕರ್ನಾಟಕಕ್ಕೆ ಪಟೇಲರು ಎಂದರೆ ಕೇವಲ ಜೆ.ಎಚ್.ಪಟೇಲರೇ! ನನ್ನ ದೃಷ್ಟಿಯಲ್ಲಿ ಪಟೇಲರು ಒಬ್ಬ ರಾಜಕೀಯ ಸಂತ, ಬಾಯಲ್ಲಿ ಬಂಗಾರದ ಚಮಚೆ ಇಟ್ಟುಕೊಂಡು ಹುಟ್ಟಿದರೂ ಸಮಾಜವಾದಿ ಆಲೋಚನೆಯಲ್ಲಿ ಬೆಳೆದು ಮುಖ್ಯಮಂತ್ರಿಯಾಗಿ ಹಲವಾರು ಸಾಧನೆಗಳ ಮೂಲಕ ದಾಖಲೆ ನಿರ್ಮಿಸಿದವರು. ತಮ್ಮ ಮಕ್ಕಳನ್ನು ರಾಜಕೀಯಕ್ಕೆ ತರುವ ಪೈಪೋಟಿ ಮಧ್ಯೆ ಪಟೇಲರು ಕಳೆದು ಹೋಗಲಿಲ್ಲ. ಬಾಪು ಹೆದ್ದೂರಶೆಟ್ಟಿ ಎಂಬ ಸಮಾಜವಾದಿ ಚಿಂತಕರ ಜೊತೆಗೆ ಪಟೇಲರ ಕಾರ್ಯಚಟುವಟಿಕೆಗಳನ್ನು ಹತ್ತಿರದಿಂದ ನೋಡಿದ ಸೌಭಾಗ್ಯ. ಆಗ ಮಹಿಮಾ ಕಾವೇರಿ ಅಂಗಳದಲ್ಲಿ ಅಪರಿಚತರಂತೆ ಓಡಾಡುತ್ತಿದ್ದರು.

ಮಕ್ಕಳನ್ನು ರಾಜಕಾರಣಕ್ಕೆ ತರಬಾರದು ಎಂಬ ಪಟೇಲರ ಬದ್ಧತೆ ಮಹಿಮಾರಿಗೆ ಹಿನ್ನೆಡೆಯಾಯಿತು.
ಅವರ ನಿಧನದ ನಂತರ 2004 ರಲ್ಲಿ ಮಹಿಮಾ ವಿಧಾನ ಸಭೆಯನ್ನು ಭಿನ್ನ ರೀತಿಯಲ್ಲಿ ಪ್ರವೇಶ ಮಾಡಿದರು.
ಹಣ,ಹೆಂಡ ಹಂಚದೇ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದು ಅವರನ್ನು ಸಕ್ರಿಯ ರಾಜಕಾರಣದಿಂದ ದೂರ ಮಾಡಿತು.

ಜನತಾದಳ ಸರಕಾರದಲ್ಲಿ ತಮ್ಮ ಮಕ್ಕಳ ಏಳಿಗೆಗೆ ಮಹಿಮಾ ಅಡ್ಡಿಯಾಗಬಾರದೆಂಬ ದೊಡ್ಡ ಗೌಡರ ದೂರ ದೃಷ್ಟಿ ಮಹಿಮಾ ಮಂತ್ರಿ ಆಗದಂತೆ ತಡೆಯಿತು. ಅವರ ಈ ದೃತರಾಷ್ಟ್ರ ದೂರ ದೃಷ್ಟಿಕೋನದಿಂದ ಕರ್ನಾಟಕ ರಾಜಕಾರಣಕ್ಕೆ ದೊಡ್ಡ ಹಿನ್ನೆಡೆ ಉಂಟಾಯಿತು.

ಮಹಿಮಾ ಆರಂಭಿಸಿದ ಸುವರ್ಣ ಯುಗ ಸೋತು ಹೋಯಿತು.ಕಾಂಗ್ರೆಸ್ ಪಕ್ಷದಲ್ಲಿ ಟಿಕೆಟ್ ನೀಡದಿರಲು ಕಾರಣಗಳನ್ನು ಯಾರೂ ಹೇಳುವುದಿಲ್ಲ. ಮಹಿಮಾ ಶಾಸಕರಾಗಲು ಬಿಜೆಪಿಯಲ್ಲಿ ಅವಕಾಶ ಇತ್ತು ಆದರೆ ಮಹಿಮಾ ಸೈದ್ಧಾಂತಿಕವಾಗಿ ಮನಸು ಮಾಡಲಿಲ್ಲ. ರಾಜಕಾರಣದಲ್ಲಿ ಸಿದ್ಧಾಂತ ಮುಖ್ಯವಾದರೆ ಅಧಿಕಾರ ಸಿಗುವುದಿಲ್ಲ, ಅಧಿಕಾರ ಮುಖ್ಯವಾದರೆ ಸಿದ್ಧಾಂತ ಉಳಿಯುವುದಿಲ್ಲ.

ಜೆಪಿ ಚಳುವಳಿ ಮತ್ತು ಸಮಾಜವಾದಿ ಹಿನ್ನೆಲೆಯಿಂದ ಬಂದ ಅನೇಕರು ಬಿಜೆಪಿಯಲ್ಲಿ ರಾಜಕೀಯ ಆಶ್ರಯ ಪಡೆಯಲು ಕಾರಣ ಆಕ್ಟೀವ್ ಪಾಲಿಟಿಕ್ಸ್.
ಈಗ ಏನಿದ್ದರೂ ‘ಪವರ್ ಪೊಲಿಟಿಕ್ಸ್’.

ಸಂಯುಕ್ತ ಜನತಾದಳ ಎಂಬ ಪಕ್ಷದಲ್ಲಿ ಇರುವ ಮಹಿಮಾ ರಾಜಕೀಯ ಅಸ್ತಿತ್ವಕ್ಕೆ ಇನ್ನೂ ಕಾಯಬೇಕು.
ಆದರೆ ಅವರಿಗೆ ಈಗ ಅರವತ್ತು.‌ ಇನ್ನು ಮುಂದಾದರೂ ಅವರ ರಾಜಕೀಯ ತನ್ನ ಹಾದಿ ಹಿಡಿಯಲಿ ಎಂದು ಬಯಸುತ್ತೇನೆ.

ಮಹಿಮಾ ಪಟೇಲ್ ವೈಯಕ್ತಿಕವಾಗಿ ಗೆಳೆಯ,ಹಿತೈಷಿಗಳು. ನನ್ನ ಭಾಷಣ ಮತ್ತು ಬರಹದಿಂದ ಆಕರ್ಷಿತರಾಗಿ ಲ್ಯಾಂಡ್ ಮಾರ್ಕ್ ತರಬೇತಿ ಸಂಸ್ಥೆಗೆ ಕರೆದೊಯ್ದು ಜೀವನಶೈಲಿ ತರಬೇತಿ ನೀಡಲು ಕಾರಣರಾದರು.
ಪಟೇಲರ ಹುಟ್ಟು ಹಬ್ಬದ ಕಾರ್ಯಕ್ರಮಗಳಿಗೆ ಆಹ್ವಾನಿಸುತ್ತಾರೆ. ಗದುಗಿಗೆ ಬಂದಾಗ, ಬೆಂಗಳೂರಿಗೆ ಹೋದಾಗ ಮಾತಿಗೆ ಸಿಗುತ್ತಾರೆ. ವಿಭಿನ್ನ ರೀತಿಯ ಸ್ವಚ್ಛ ರಾಜಕಾರಣ ಬರಬಹುದೆಂಬ ಭರವಸೆ ಅವರಿಗಿದೆ.
ಆದರೆ ವಾತಾವರಣ ಹಾಗೆ ಕಾಣಿಸುತ್ತಿಲ್ಲ. ಹಣ,ಜಾತಿ,ಧರ್ಮ, ತೋಳ್ಬಲ ಆಧರಿಸಿ ರಾಜಕಾರಣದ ಆಟ ಸಾಗಿದೆ.

ಅವರಿಗೆ ಒಮ್ಮೆ ತಮಾಷೆಯಿಂದ ಹೇಳಿದೆ
“ನೀವು ಕಬಡ್ಡಿಯನ್ನು ಕ್ರಿಕೆಟ್‌ ಆಡಿದಂತೆ ಆಡುತ್ತೀರಿ, ಅದು ಹಾಗೆ ನಡೆಯಲ್ಲ” ಎಂದಾಗ ಮಹಿಮಾ ನಸು ನಕ್ಕರು. ದೊಡ್ಡವರ ಮಕ್ಕಳಾಗಿ ಹುಟ್ಟವುದು ಯಾವಾಗಲೂ ವರವಾಗುವುದಿಲ್ಲ ಎಂಬುದಕ್ಕೆ ಮಹಿಮಾ ಸಾಕ್ಷಿ.
ತಂದೆಯವರ ವ್ಯಕ್ತಿತ್ವದೊಂದಿಗೆ ಇವರನ್ನು ಹೋಲಿಸಿ ಅಳೆಯುವುದು ಸರಿಯಲ್ಲ ಆದರೂ ಹಾಗೆ ಅಳೆದು ನೋಡುವ ಕ್ರಮ ಇದೆ.
ಅದೇ ದುರಂತ!

ಅಧ್ಯಾತ್ಮ ಮತ್ತು ವ್ಯಕ್ತಿತ್ವ ವಿಕಸನದ ಅನೇಕ ಪುಸ್ತಕಗಳನ್ನು ಓದಿಕೊಂಡಿರುವ ಮಹಿಮಾ ಒಳ್ಳೆಯ ತರಬೇತಿದಾರ ಚಿಂತಕರು. ಖಾಸಗಿ ಬೈಟಕ್ ನಲ್ಲಿ ಅದ್ಭುತವಾಗಿ ಚಿಂತನೆ ಮಾಡುತ್ತಾರೆ. ಅನೇಕ ಮಹತ್ವದ ಕೃತಿಗಳನ್ನು ಪರಿಚಯಿಸಿದ ಶ್ರೇಯಸ್ಸು ಅವರಿಗೆ ಸಲ್ಲುತ್ತದೆ. ಯಾವುದಾದರೊಂದು ಸರಿಯಾದ ಕ್ರಮ ಹಿಡಿದು ರಾಜಕಾರಣದ ದಡ ಸೇರಲಿ ಎಂದು ಅವರ ಅರವತ್ತನೇ ಹುಟ್ಟು ಹಬ್ಬದಂದು ಹಾರೈಸುತ್ತೇನೆ.

#ಸಿದ್ದು ಯಾಪಲಪರವಿ

LEAVE A REPLY

Please enter your comment!
Please enter your name here