ಬೆಳ್ಳಿತೆರೆಗೂ ಕಾಲಿಟ್ಟ ‘ಮಗಳು ಜಾನಕಿ’…ಮೊದಲ ಸಿನಿಮಾ ಶೂಟಿಂಗ್ ಮುಗಿಸಿದ ಗಾನವಿ!

0
466

ಕಿರುತೆರೆಯಲ್ಲಿ ಅವಕಾಶ ದೊರೆತು ಒಮ್ಮೆ ರಾಜ್ಯದ ಜನರ ಮನಸ್ಸು ಕದ್ದರೆ ಬೆಳ್ಳಿತೆರೆಗೆ ಬರುವುದು ಸುಲಭ ಎಂಬುದು ಬಹುತೇಕರ ಅಭಿಪ್ರಾಯ. ಕಿರುತೆರೆಯಲ್ಲಿ ಹೆಸರು ಮಾಡಿದ ಬಹುತೇಕರು ಬೆಳ್ಳಿತೆರೆಗೂ ಕಾಲಿಟ್ಟ ಸಾಕಷ್ಟು ಉದಾಹರಣೆಗಳಿವೆ. ಇದೀಗ ‘ಮಗಳು ಜಾನಕಿ’ ಖ್ಯಾತಿಯ ಗಾನವಿ ಲಕ್ಷ್ಮಣ್ ಕೂಡಾ ಬೆಳ್ಳಿತೆರೆಯಲ್ಲಿ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ.

 

ಚಿಕ್ಕಮಗಳೂರಿನವರಾದ ಗಾನವಿ ಲಕ್ಷ್ಮಣ್ ಓದು ಮುಗಿಸಿ ಅಂತಾರಾಷ್ಟ್ರೀಯ ನೃತ್ಯಶಾಲೆಗೆ ನೃತ್ಯಶಿಕ್ಷಕಿಯಾಗಿ ಕೆಲಸಕ್ಕೆ ಸೇರಿದರು. ಡ್ಯಾನ್ಸರ್ ಅಲ್ಲದೆ ಗಾನವಿ ಸುಮಾರು 8 ವರ್ಷಗಳಿಂದ ರಂಗಭೂಮಿ ಕಲಾವಿದೆಯಾಗಿ ಕೂಡಾ ಕೆಲಸ ಮಾಡುತ್ತಿದ್ದಾರೆ. ಟಿ.ಎನ್. ಸೀತಾರಾಮ್ ನಿರ್ದೇಶನದ ‘ಮಗಳು ಜಾನಕಿ’ ಧಾರಾವಾಹಿಯಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸುವ ಅವಕಾಶ ಗಾನವಿಗೆ ಒಲಿದು ಬಂತು.

 

ಈ ಧಾರಾವಾಹಿಯಲ್ಲಿ ಟಿ.ಎನ್. ಸೀತಾರಾಮ್ ಪುತ್ರಿಯಾಗಿ, ಐಪಿಎಸ್ ಅಧಿಕಾರಿಯಾಗಿ ಗಾನವಿ ನಟಿಸುತ್ತಿದ್ದಾರೆ. ಈ ಧಾರಾವಾಹಿಯಿಂದ ಅವರು ಖ್ಯಾತರಾಗಿದ್ದೇ ತಡ, ಬೆಳ್ಳಿ ತೆರೆಯಲ್ಲಿ ಕೂಡಾ ಅವರಿಗೆ ಅವಕಾಶ ಹುಡುಕಿ ಬಂತು. ರಿಷಭ್ ಶೆಟ್ಟಿ ಜೊತೆ ’ನಾಥೂರಾಮ್’ ಚಿತ್ರದಲ್ಲಿ ನಟಿಸುವ ಅವಕಾಶ ಪಡೆದರು ಗಾನವಿ. ಜೊತೆಗೆ ‘ಭಾವಚಿತ್ರ’ ಎಂಬ ಸಿನಿಮಾದಲ್ಲಿ ಕೂಡಾ ಅವರು ನಟಿಸಿದ್ದು ಈ ಸಿನಿಮಾ ಚಿತ್ರೀಕರಣ ಪೂರ್ಣಗೊಂಡಿದ್ದು ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ.

 

 

‘ಭಾವಚಿತ್ರ’ ಸಿನಿಮಾವನ್ನು ಗಿರೀಶ್ ಕುಮಾರ್. ಬಿ ನಿರ್ದೇಶಿಸುತ್ತಿದ್ದಾರೆ. ಚಿಕ್ಕಬಳ್ಳಾಪುರ, ಬೆಂಗಳೂರು, ಹಾವೇರಿ, ಗುಡಿಬಂಡೆ ಹಾಗೂ ಇನ್ನಿತರ ಕಡೆಗಳಲ್ಲಿ ಸಿನಿಮಾ ಚಿತ್ರೀಕರಣ ಜರುಗಿದೆ. ಚಿತ್ರದಲ್ಲಿ ಥ್ರಿಲ್ಲರ್ ಅಂಶ ಕೂಡಾ ಇದ್ದು ಚಿತ್ರದ ಹಾಡುಗಳಿಗೆ ಗೌತಮ್ ಶ್ರೀವಾತ್ಸವ್ ಸಂಗೀತ ನೀಡಿದ್ದಾರೆ.

LEAVE A REPLY

Please enter your comment!
Please enter your name here