ಕರ್ನಾಟಕದ ಹಾಗೂ ನಾಡ ಅಧಿದೇವತೆ ಎಂದೇ ನಾವೆಲ್ಲರೂ ಪೂಜಿಸಲ್ಪಡುವ ಚಾಮುಂಡಿ ದೇವಿಯ ಅವತಾರ ಇರುವುದು ಮೈಸೂರಿನ ಚಾಮುಂಡೇಶ್ವರಿ ದೇವಾಲಯದಲ್ಲಿ. ಸುಮಾರು 13 ಕಿ.ಮೀ ದೂರದಲ್ಲಿರುವ ಚಾಮುಂಡಿಬೆಟ್ಟದಲ್ಲಿ ಆಕೆಯ ವೈಭವ ನೋಡುವುದೇ ಚೆಂದ.ಪುರಾಣದ ಇತಿಹಾಸ ಪ್ರಸಿದ್ಧ ಕ್ಷೇತ್ರವಾಗಿರುವ ಚಾಮುಂಡಿ ಬೆಟ್ಟ ತಾಯಿಯು ನೆಲೆಸಿರುವ ಪುಣ್ಯ ಕ್ಷೇತ್ರ.
ಚಾಮುಂಡೇಶ್ವರಿ ದೇವಾಲಯವು ಒಂದು ಶಕ್ತಿಪೀಠವಾಗಿದ್ದು, ಕ್ರೌಂಚಪೀಠ ಎಂದೂ ಕರೆಯುತ್ತೇವೆ. ಮೈಸೂರು ಸಂಸ್ಥಾನದ ಅರಸರು ಗತಕಾಲದಿಂದಲೂ ದೇವಿಯನ್ನು ಆರಾಧಿಸಿಕೊಂಡು ಬರುತ್ತಿದ್ದಾರೆ. ರಂಭನೆಂಬ ಅಸುರನೊಬ್ಬನು ಮಹಿಷಿ ಎಂಬ ಅರ್ಧ ಮನುಷ್ಯ ಹಾಗೂ ಅರ್ಧ ಎಮ್ಮೆಯ ರೂಪದ ರಾಕ್ಷಸಿಯನ್ನು ನೋಡಿ ಮೋಹಿತಕ್ಕೊಳಗಾದನು ಹಾಗೂ ಅವಳನ್ನು ಸೇರಿದನು. ಇವರಿಬ್ಬರ ಮಿಲನದಿಂದ ಹುಟ್ಟಿದ ರಾಕ್ಷಸನೆ ಮಹಿಷಾಸುರ.
ಬಲಶಾಲಿಯಾದ ಮಹಿಷಾಸುರನನ್ನು ಕಂಡು ಲೋಕದ ಜನರೆಲ್ಲ ಮಹಿಷಾಸುರನ ನರಕಯಾತನೆ ಅನುಭವಿಸಿದರು. ಕೊನೆಗೆ ಎಲ್ಲ ದೇವತೆಗಳು ತ್ರಿಮೂರ್ತಿಗಳ ಬಳಿ ತೆರಳಿ ವಸ್ತುಸ್ಥಿತಿ ವಿವರಿಸಿದಾಗ ತ್ರಿಮೂರ್ತಿಗಳು ತಮ್ಮೆಲ್ಲ ಶಕ್ತಿಯನ್ನು ಒಂದೆಡೆ ಧಾರೆ ಎರೆದರು. ಈ ಶಕ್ತಿಯಿಂದ ಪ್ರತ್ಯಕ್ಷಳಾದ ದೇವತೆ ಚಾಮುಂಡಿ. ಹೀಗೆ ಪ್ರತ್ಯಕ್ಷಳಾದ ಚಾಮುಂಡಿ ಮಹಿಷಾಸುರನ ಬಳಿ ತೆರಳಿ ಭೀಕರ ಯುದ್ಧ ಮಾಡಿ ಸತತ ಒಂಭತ್ತು ದಿನಗಳ ಕಾಲ ಯುದ್ಧ ನಡೆದು ಕೊನೆಗೆ ಚಾಮುಂಡಿಯು ಮಹಿಷಾಸುರನನ್ನು ವಧಿಸಿದಳು.
ಈ ಯುದ್ಧ ಚಾಮುಂಡಿ ಬೆಟ್ಟದಲ್ಲೇ ಜರುಗಿದ ಪರಿಣಾಮ ಈ ಬೆಟ್ಟವನ್ನೆ ಆಯ್ಕೆ ಮಾಡಿ ಅಲ್ಲಿ ಶಾಶ್ವತವಾಗಿ ದೇವಿ ನೆಲೆಸಿದಳು ಎನ್ನುತ್ತದೆ ಪುರಾಣ. ಚಾಮುಂಡೇಶ್ವರಿಯ ಈ ದೇವಾಲಯವು ಹೊಯ್ಸಳ ವಾಸ್ತುಶೈಲಿಗೆ ಸಾಕ್ಷಿಯಾಗಿದ್ದು ಹೊಯ್ಸಳ ದೊರೆ ವಿಷ್ಣುವರ್ಧನನಿಂದ ನಿರ್ಮಿಸಲ್ಪಟ್ಟಿದೆ. ಈ ಪ್ರದೇಶವನ್ನಾಳಿದ ವಿಜಯನಗರ ಸಾಮ್ರಾಜ್ಯ ಹಾಗೂ ಮೈಸೂರು ಅರಸರುಗಳಿಂದ ಮತ್ತಷ್ಟು ನವೀಕರಣಗೊಳಿಸಲಾಯಿತು.