ಪಕ್ಷ ಸಂಘಟನೆಗಳೇ ನಮ್ಮ ಜೀವನ ಆಗದಿರಲಿ, ಚುನಾವಣೆಯ ನಂತರವೂ ನಮಗೆ ಬದುಕಬೇಕು..!

0
216

ಪ್ರಜಾಪ್ರಭುತ್ವ ರಾಷ್ಟ್ರವಾದ ನಮ್ಮ ದೇಶದಲ್ಲಿ ಪ್ರತೀ ಐದು ವರ್ಷಕ್ಕೊಮ್ಮೆ ಬರುವ ಚುನಾವಣೆ ಎಂಬುವುದೊಂದು ನಿರಂತರ ಪ್ರಕ್ರಿಯೆಯಾಗಿದೆ. ಈ ಚುನಾವಣೆಗಳಲ್ಲಿ ಗೆದ್ದವರು ಪಟ್ಟವೇರುತ್ತಾರೆ ಸೋತವರು ಮುಂದಿನ ಐದು ವರ್ಷ ತಮ್ಮ ಅದೃಷ್ಟಕ್ಕಾಗಿ ಕಾಯುತ್ತಿರುತ್ತಾರೆ. ಆದರೆ ಚುನಾವಣಾ ಸಮಯದಲ್ಲಿ ಸಾಮಾನ್ಯ ಜನರು ಮಾತ್ರ ತಮ್ಮ ಪಕ್ಷಗಳ ಹೆಸರಿನಲ್ಲಿ ತಮ್ಮ ಆಪ್ತರು ಗೆಳೆಯರು ಹಾಗೂ ಕುಟುಂಬಸ್ಥರೊಂದಿಗೆ ವೈರುದ್ಯವನ್ನು ಕಟ್ಟಿಕೊಳ್ಳುತ್ತಾರೆ.

ಚುನಾವಣೆ ಮುಗಿಯುವುದರೊಂದಿಗೆ ಚುನಾವಣಾ ಕಣದಲ್ಲಿ ಸ್ಪರ್ಧಿಸಿದ ಅಭ್ಯರ್ಥಿಗಳ ಶತ್ರುತ್ವವು ಕೊನೆಗೊಂಡರೆ ಅದೇ ಚುನಾವಣಾ ಕಣದಲ್ಲಿ ಸ್ಪರ್ಧಿಸಿದ ತಮ್ಮ ನೆಚ್ಚಿನ ಅಭ್ಯರ್ಥಿಯ ಪರ ಪ್ರಚಾರಕ್ಕಾಗಿ ತಮ್ಮವರೊಂದಿಗೆ ಶತ್ರುತ್ವವನ್ನು ಬೆಳೆಸಿದ ಸಾಮಾನ್ಯ ಕಾರ್ಯಕರ್ತರ ವೈಷಮ್ಯವು ಅಂದಿಗೆ ಕೊನೆಗೊಳ್ಳುವುದಿಲ್ಲ. ಚುನಾವಣಾ ಸಮಯದಲ್ಲಿ ಬಿತ್ತಿದ ಈ ವೈರುದ್ಯದ ಬೀಜವು ಮುಂದೆ ಗಿಡವಾಗಿ ನಂತರ ಹೆಮ್ಮರವಾಗಿ ಬೆಳೆದು ಕೊನೆಗೆ ಕೊಲೆಯೊಂದಿಗೆ ಸಮಾಪ್ತಿ ಆಗುತ್ತಿರುವುದನ್ನು ನಾವು ಪಕ್ಕದ ಕೇರಳದಲ್ಲಿ ದಿನನಿತ್ಯ ಕಾಣುತ್ತಿದ್ದೇವೆ.

ಚುನಾವಣೆಯೊಂದಿಗೆ ಜೀವನವು ಕೊನೆಯಾಗುವುದಿಲ್ಲ. ಚುನಾವಣೆಯ ನಂತರವೂ ನಮಗೆ ಬದುಕಬೇಕು. ಮುಂದಕ್ಕೆ ನಮಗೆ ಕಷ್ಟಬಂದಾಗ ಅಥವಾ ಯಾವುದೇ ಅನಾಹುತ ಸಂಭವಿಸಿದಾಗ ನಮ್ಮ ನೆರವಿಗೆ ಮೊದಲು ಬರುವವರು ನಮ್ಮ ನೆರೆಹೊರೆಯವರು, ಗೆಳೆಯರು ಹಾಗೂ ಕುಟುಂಬಸ್ಥರೆಂಬ ಭಾವನೆ ಸದಾ ನಮ್ಮಲ್ಲಿರುವುದು ಉತ್ತಮ. ಪಕ್ಷಗಳು ಹಾಗೂ ಸಂಘಟನೆಗಳು ಜನಹಿತಕ್ಕಾಗಿ ಇರಲಿ. ಇವುಗಳೇ ನಮ್ಮ ಜೀವನವಾಗಿದ್ದರೆ ಅದರಲ್ಲಿ ಒಳಿತಿಗಿಂತ ಕೆಡುಕೇ ಹೆಚ್ಚು.

ನಾವು ಯಾವುದೇ ಸಂಘಟನೆ ಅಥವಾ ಪಕ್ಷಗಳಲ್ಲೇ ಇದ್ದರೂ ಮನುಷ್ಯರಾಗಿರೋಣ. ನಮ್ಮ ಪಕ್ಷ ಅಥವಾ ಸಂಘಟನೆಗಳಿಂದ ಇತರರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳೋಣ. ಗುರು ಹಿರಿಯರನ್ನು ಗೌರವಿಸುವುದರೊಂದಿಗೆ ಮೊದಲು ಮಾನವರಾಗೋಣ. ಗೆಳೆತನ, ಸಂಬಂಧಗಳಿಗೆ ಪ್ರಾಧಾನ್ಯತೆಯನ್ನು ಕೊಡುವ ಮೂಲಕ ಮನುಷ್ಯತ್ವವನ್ನು ಬೆಳೆಸಲು ಪ್ರಯತ್ನಿಸೋಣ.

LEAVE A REPLY

Please enter your comment!
Please enter your name here