ರಾಜ್ಯದಲ್ಲಿ ನಾಯಕತ್ವ ಬದಲಾವಣೆ, ಬಿಜೆಪಿ ಹೈಕಮಾಂಡ್ ನಿಲುವೇನು ಗೊತ್ತಾ…?!

0
54

ರಾಜ್ಯದಲ್ಲಿ ಉಪಚುನಾವಣೆ ಮತ್ತು ಸ್ಥಳಿಯ ಸಂಸ್ಥೆಗಳ ಚುನಾವಣೆ ಹತ್ತಿರದಲ್ಲಿರುವುದನ್ನು ಗಮನದಲ್ಲಿಟ್ಟುಕೊಂಡಿರುವ ಕೇಂದ್ರ ಬಿಜೆಪಿ ಸರ್ಕಾರವು ರಾಜ್ಯದಲ್ಲಿ ಸದ್ಯಕ್ಕೆ ಮುಖ್ಯಮಂತ್ರಿ ಯಡಿಯೂರಪ್ಪ ಅವರ ನಾಯಕತ್ವವನ್ನು ಬದಲಾಯಿಸದಿರಲು ನಿರ್ಧರಿಸಿದೆ. ವರ್ಷಾಂತ್ಯದಲ್ಲಿ ಯಡಿಯೂರಪ್ಪ ಅವರನ್ನು ಮುಖ್ಯಮಂತ್ರ ಸ್ಥಾನದಿಂದ ಕೆಳಗಿಳಿಸಿ ಆ ಸ್ಥಾನಕ್ಕೆ ಬೇರೆ ನಾಯಕನನ್ನು ಆರಿಸುವುದಾಗಿ ರಾಜಕೀಯ ವಲಯದಲ್ಲಿ ಕೂಗು ಕೇಳಿಬಂದಿತ್ತು. ಇದಕ್ಕೆ ಇಂಬು ನೀಡುವಂತೆ ಕೆಲವು ಘಟನಾವಳಿಗಳೂ ಕೂಡ ನೆಡೆದಿದ್ದವು. ಈಗ ಅದಕ್ಕೆ ತಿರುವು ನೀಡುವಂತೆ ಮುಖ್ಯಮಂತ್ರಿ ಸ್ಥಾನವನ್ನು ಬದಲಿಸದಿರಲು ತೀರ್ಮಾನಿಸಲಾಗಿದೆ.

ಈ ಎಲ್ಲಾ ವದಂತಿಗಳನ್ನು ತಳ್ಳಿ ಹಾಕುವಂತೆ ಸ್ಪಷ್ಟ ಸಂದೇಶ ನೀಡಿರುವ ಬಿಜೆಪಿ ಹೈಕಮಾಂಡ್ ರಾಜ್ಯದಲ್ಲಿ ಉಪಚುನಾವಣೆ ಮತ್ತು ಸ್ಥಳೀಯ ಸಂಸ್ಥೆಗಳ ಚುನಾವಣಾ ಹಿತದೃಷ್ಟಿಯಿಂದ ಭವಿಷ್ಯವನ್ನು ಕೇಂದ್ರವಾಗಿಟ್ಟುಕೊಂಡು ನಾಯಕತ್ವ ಬದಲಾವಣೆಗೆ ಇದು ಸಕಾಲವಲ್ಲ ಎಂದು ಪರಿಗಣಿಸಿದೆ. ಯಾವುದೇ ರೀತಿಯ ಸೂಕ್ತ ಕಾರಣವನ್ನು ನೀಡದೇ ಏಕಾಏಕಿ ನಾಯಕತ್ವ ಬದಲಾವಣೆ ಮಾಡಿದರೆ ಪಕ್ಷದ ಹಿತದೃಷ್ಟಿಯಿಂದ ವೀರಶೈವ ಲಿಂಗಾಯತ ಸಮುದಾಯ ಚುನಾವಣೆಯಲ್ಲಿ ಬಿಜೆಪಿಗೆ ವ್ಯತಿರಿಕ್ತವಾಗಿ ನಿಲ್ಲಬಹುದು ಎಂದು ಆತಂಕ ವ್ಯಕ್ತಪಡಿಸಲಾಗಿದೆ.


ಬಿಜೆಪಿ ಕೇಂದ್ರದಲ್ಲಿರುವಾಗಲೇ ಉತ್ತರ ಭಾರತದಲ್ಲಿ ಸಮರ್ಥವಾಗಿ ನೆಲೆಯೂರಿದೆ. ಆದರೆ ದಕ್ಷಿಣ ಭಾರತದಲ್ಲಿ ಕೇವಲ ಕರ್ನಾಟಕದಲ್ಲಿ ಮಾತ್ರ ದೃಢವಾಗಿ ನೆಲೆಯೂರಿದೆ. ಇಂತಹ ಸಂದರ್ಭದಲ್ಲಿ ಮುಖ್ಯಮಂತ್ರಿ ಸ್ಥಾನದಿಂದ ಯಡಿಯೂರಪ್ಪ ಅವರನ್ನು ಬದಲಿಸಿದರೆ ಎಡವಿದಂತಾಗುತ್ತದೆ ಎಂಬ ನಿಲುವು ಭವಿಷ್ಯದ ಹಿನ್ನೆಲೆಯಲ್ಲಿ ತೀರ್ಮಾನಿಸಲಾಗಿದೆ. ಅಲ್ಲದೇ ಪಕ್ಕದ ತೆಲಂಗಾಣ, ಆಂಧ್ರ, ತಮಿಳುನಾಡು, ಕೇರಳ ಮುಂತಾದ ಬಿಜೆಪಿಯೇತರ ರಾಜ್ಯಗಳಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತರಲು ಪಡುತ್ತಿರುವ ಕಷ್ಟವನ್ನು ಅರಿತಿರುವ ಕೇಂದ್ರ ಸದ್ಯ ಕರ್ನಾಟಕದ ಮಟ್ಟಿಗೆ ಅಧಿಕಾರವನ್ನು ಹಿಡಿಯುವಲ್ಲಿ ಯಶಸ್ಸನ್ನು ಪಡೆದಿದೆ.

ಅದಕ್ಕೆ ಮುಖ್ಯ ಕಾರಣವಾಗಿ ಯಡಿಯೂರಪ್ಪ ಅವರ ಪಾತ್ರ ದೊಡ್ಡದು. ಈ ಹಿನ್ನೆಲೆಯಲ್ಲಿ ಕರ್ನಾಟಕವನ್ನು ನಾಯಕತ್ವದ ವಿಷಯದಲ್ಲಿ ಕಳೆದುಕೊಂಡರೆ ಮತ್ತೆ ಕರ್ನಾಟಕದಲ್ಲಿ ಅಧಿಕಾರವನ್ನು ಹಿಡಿಯುವುದು ಕಷ್ಟ ಎಂಬುದನ್ನು ಕೇಂದ್ರದ ಬಿಜೆಪಿ ವರಿಷ್ಠರು ಅರಿತಿದ್ದಾರೆ.

ಈ ಹಿಂದೆ ಯಡಿಯೂರಪ್ಪ ಅವರಿಂದ ರಾಜ್ಯದಲ್ಲಿ ಅಧಿಕಾರವನ್ನು ಕಳೆದುಕೊಂಡು ಮಾಡಿದ ತಪ್ಪನ್ನು ಅರಿತಿರುವ ಕೇಂದ್ರ ಸರ್ಕಾರವು ಮತ್ತೆ ಆ ತಪ್ಪು ಹೆಜ್ಜೆಯನ್ನು ಹಾಕಲು ಹಿಂದೇಟು ಹಾಕುತ್ತಿದೆ. ೨೦೧೦ರಲ್ಲಿ ಯಡಿಯೂರಪ್ಪ ಅವರನ್ನು ಬಲವಂತದಿಂದ ಕೆಳಗಿಳಿಸಿದ್ದಕ್ಕೆ ೨೦೧೩ರ ಚುನಾವಣೆಯಲ್ಲಿ ಬಿಎಸ್‌ವೈ ಅವರು ಸ್ವಂತ ಪಕ್ಷವಾದ ಕೆಜೆಪಿಯನ್ನು ಕಟ್ಟಿ ಬಿಜೆಪಿ ಪಕ್ಷವನ್ನು ಹೇಳ ಹೆಸರಿಲ್ಲದಂತೆ ಮಾಡಿದ್ದರು. ಈಗ ಯಡಿಯೂರಪ್ಪ ಬೆನ್ನಿಗೆ ವೀರಶೈವ ಲಿಂಗಾಯಿತ ಸಮುದಾಯ ಪ್ರಬಲವಾಗಿ ನಿಂತಿರುವುದರಿಂದ ಬಿಜೆಪಿ ಪ್ರತಿ ಚುನಾವಣೆಯಲ್ಲೂ ನಿರಾಳವಾಗಿ ಗೆದ್ದು ಬರುತ್ತಿದೆ. ಅನೇಕ ಕಡೆಗಳಲ್ಲಿ ಗೆಲ್ಲಲು ಸಾಧ್ಯವೇ ಇಲ್ಲದಂತಹ ಕ್ಷೇತ್ರಗಳಲ್ಲೂ ಕಮಲ ಅರಳಲು ಯಡಿಯೂರಪ್ಪ ಅವರ ಶ್ರಮ ಸಾಕಷ್ಟಿದೆ.

ಇತ್ತೀಚೆಗೆ ನಡೆದ ಉಪಚುನಾವಣೆಯಲ್ಲೂ ಶಿರಾ ಮತ್ತು ರಾಜರಾಜೇಶ್ವರಿ ನಗರದ ಬಿಜೆಪಿ ನಾಯಕರ ಗೆಲುವು ಕೂಡ ಯಡಿಯೂರಪ್ಪ ಅವರ ವರ್ಚಸ್ಸನ್ನು ಮತ್ತಷ್ಟು ಹೆಚ್ಚಿಸಿದೆ. ಹೀಗೆ ಪ್ರತಿ ಚುನಾವಣೆಯಲ್ಲೂ ಯಡಿಯೂರಪ್ಪ ನಾಯಕ್ವ ಬಲಗೊಳ್ಳುತ್ತಿರುವುದರಿಂದ ದೆಹಲಿ ವರಿಷ್ಠರು ನಾಯಕತ್ವ ಬದಲಾವಣೆಯಂತಹ ದುಸ್ಸಾಹಸಕ್ಕೆ ಕೈ ಹಾಕುವ ಸಾಧ್ಯತೆ ತೀರಾಕಡಿಮೆ ಎನ್ನಲಾಗುತ್ತಿದೆ.

LEAVE A REPLY

Please enter your comment!
Please enter your name here