ಕುಸುಮಾ ಡಿ.ಕೆ.ರವಿ ತಂದೆ-ತಾಯಿಯನ್ನೇ ನೋಡ್ಲಿಲ್ಲ, ನಿಮ್ಮ ಕಷ್ಟ ಕೇಳ್ತಾರಾ..? ಎಚ್‌ಡಿಕೆ ಪ್ರಶ್ನೆ

0
190

ತುಮಕೂರಿನ ಶಿರಾ ಮತ್ತು ರಾಜರಾಜೇಶ್ವರಿ ನಗರ ಉಪಚುನಾವಣೆಯಲ್ಲಿ ಮಾತಿನ ಸಮರ ಮುಂದುವರೆದಿದೆ. ರಾಜರಾಜೇಶ್ವರಿ ನಗರ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿ ಕೃಷ್ಣಮೂರ್ತಿ ಪರ ಹೆಚ್ ಡಿ ಕುಮಾರಸ್ವಾಮಿ ಅವರು ಪ್ರಚಾರ ನಡೆಸಿ, ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ವಿರುದ್ದ ವಾಗ್ದಾಳಿ ನಡೆಸಿದರು. ಪ್ರಚಾರ ಕಣದಲ್ಲಿ ಮಾತನಾಡಿದ ಎಚ್.ಡಿ.ಕುಮಾರಸ್ವಾಮಿ ಅವರು, ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ಅವರು ಬಡವರಾಗಿರುವ ಡಿ.ಕೆ ರವಿ ಅವರ ತಂದೆ-ತಾಯಿಯನ್ನೇ ಸರಿಯಾಗಿ ನೋಡಿಕೊಳ್ಳಲಿಲ್ಲ. ಅವರ ಕಷ್ಟಗಳಿಗೆ ಸ್ಪಂದಿಸಲಿಲ್ಲ. ಇನ್ನು ನಿಮ್ಮ ಕಷ್ಟಗಳನ್ನು ಕೇಳ್ತಾರಾ…? ಎಂದು ಹೆಚ್.ಡಿ ಕುಮಾರಸ್ವಾಮಿ ಅವರು ಮತದಾರರನ್ನು ಪ್ರಶ್ನಿಸಿದ್ದಾರೆ.

ಇನ್ನು ಕುಸುಮಾ ಅವರು ಪ್ರಚಾರ ಕಣದಲ್ಲಿ ಮಾತನಾಡುತ್ತಾ, ನಾನು ಈ ಕ್ಷೇತ್ರದಲ್ಲಿರುವ ಬಡ ಕುಟುಂಬಗಳ ರಕ್ಷಣೆಗಾಗಿ ಮತ್ತು ಅವರ ಏಳಿಗೆಗಾಗಿ ರಾಜಕೀಯಕ್ಕೆ ಬಂದಿದ್ದೇನೆ ಎಂದು ಹೇಳುತ್ತಾರೆ. ಆದರೆ, ಹಳ್ಳಿಯಲ್ಲಿರುವ ಡಿ.ಕೆ.ರವಿ ಅವರ ತಂದೆ-ತಾಯಿಯ ಬದುಕಿಗೆ ಒಂದು ದಾರಿ ಮಾಡಿ ಕೊಡಲಾಗಲಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು. ತಂದೆ-ತಾಯಿಗೆ ಸಮನಾದ ಬಡ ಅತ್ತೆ-ಮಾವನನ್ನೇ ನೋಡದ ಕುಸುಮಾ ಅವರು ನಿಮ್ಮೆಲ್ಲರ ಕಷ್ಟ ಆಲಿಸುತ್ತಾರಾ..? ನಿಮ್ಮ ಕಷ್ಟಗಳಿಗೆ ಸ್ಪಂದಿಸುತ್ತಾರಾ..? ಎಂದು ಎಚ್ಡಿಕೆ ಪ್ರಶ್ನಿಸಿದರು.

ಇದೇ ಸಂದರ್ಭದಲ್ಲಿ ಬಿಜೆಪಿ ಅಭ್ಯರ್ಥಿ ಮುನಿರತ್ನ ವಿರುದ್ದ ಟೀಕಾಪ್ರಹಾರ ನಡೆಸಿದ ಎಚ್.ಡಿ. ಕುಮಾರಸ್ವಾಮಿ ಅವರು ಬಿಜೆಪಿ ಅಭ್ಯರ್ಥಿ ಮುನಿರತ್ನ ಜನರ ಹಣ ಲೂಟಿ ಮಾಡಿದ್ದಾರೆ. ನಮ್ಮ ಕಾರ್ಯಕರ್ತರ ಮೇಲೆ ದೌರ್ಜನ್ಯ, ಚುನಾವಣಾ ಅಕ್ರಮ ಎಸಗುತ್ತಿದ್ದಾರೆ ಎಂದು ಕಾಂಗ್ರೆಸ್ ಆರೋಪಿಸುತ್ತಿದೆ. ಇನ್ನು ಕಾಂಗ್ರೆಸ್ ಪಕ್ಷಕ್ಕೆ ರಾಜರಾಜೇಶ್ವರಿ ನಗರದಲ್ಲಿ ಕಾರ್ಯಕರ್ತರ ಸಮಸ್ಯೆ ಎದುರಾಗಿದೆ. ಹೀಗಾಗಿ ಕನಕಪುರದಿಂದ ಕಾರ್ಯಕರ್ತರ ಜೊತೆಗೆ ಗೂಂಡಾಗಳನ್ನು ಕರೆಸಿ, ನಮ್ಮ ಕಾರ್ಯಕರ್ತರಿಗೆ ಕೊಲೆ ಬೆದರಿಕೆ ಹಾಕುತ್ತಿದ್ದಾರೆ ಎಂದು ಬಿಜೆಪಿ ಅಭ್ಯರ್ಥಿ ಮುನಿರತ್ನ ಕಾಂಗ್ರೆಸ್ ವಿರುದ್ಧ ಆರೋಪಿಸುತ್ತಿದ್ದಾರೆ. ಎರಡೂ ರಾಷ್ಟ್ರೀಯ ಪಕ್ಷಗಳ ಆರೋಪ-ಪ್ರತ್ಯಾರೋಪಗಳಿಗಿಂತ ನಮಗೆ ಶಾಂತಿಯ ಅವಶ್ಯಕತೆ ಇದೆ ಎಂದು ಎಚ್.ಡಿ. ಕುಮಾರಸ್ವಾಮಿ ಅವರು ಹೇಳಿದರು.

ಇನ್ನು ಜಾತ್ಯಾತೀತ ಜನತಾದಳ ಬಡವರು ಮತ್ತು ರೈತರು ಬೆಳೆಸಿದ ಪಕ್ಷ. ರೈತಪರವಾದ ಹೋರಾಟಗಳ ಮೂಲಕವೇ ನಾವು ಈ ಹಿಂದೆ ಅಧಿಕಾರಕ್ಕೆ ಬಂದಿದ್ದೇವೆ. ರೈತರು ಮತ್ತು ಬಡವರಿಗಾಗಿಯೇ ನಾವು ಹೋರಾಡುತ್ತೇವೆ. ಮುಖೇಶ್ ಅಂಬಾನಿ, ಆದಾನಿಗೆ ಜೆಡಿಎಸ್ ಪಕ್ಷದ ಜವಾಬ್ದಾರಿ ನೀಡಿಲ್ಲ ಎಂದು ಬಿಜೆಪಿ ವಿರುದ್ಧ ಕಿಡಿಕಾರಿದರು. ಕಳೆದ ಹತ್ತು ವರ್ಷದಿಂದ ಬಿಜೆಪಿ ಕಾಂಗ್ರೆಸ್ನವರು ರಾಜ್ಯದಲ್ಲಿ ಅಧಿಕಾರದಲ್ಲಿದ್ದಾರೆ.

ಆದರೆ ರಾಜ್ಯದ ಅನೇಕ ಸಮಸ್ಯೆಗಳಿಗೆ ಇಂದಿಗೂ ಪರಿಹಾರ ದೊರಕಿಲ್ಲ. ಕೃಷ್ಣಾ ಮೇಲ್ದಂಡೆ ಕಾಲುವೆಗೆ ಕೇಂದ್ರ ಸರ್ಕಾರದಿಂದ ಎಷ್ಟು ಅನುದಾನವನ್ನು ಕಾಂಗ್ರೆಸ್ ಬಿಜೆಪಿ ತಂದಿವೆ..? ಮಹದಾಯಿ ಸಮಸ್ಯೆಯಿಂದ ಉತ್ತರ ಕರ್ನಾಟಕದ ಕುಡಿಯುವ ನೀರಿನ ಸಮಸ್ಯೆ ತೀವ್ರವಾಗುತ್ತಿದ್ದರು ಕಾಂಗ್ರೆಸ್ ಮತ್ತು ಬಿಜೆಪಿ ಏನು ಮಾಡಿವೆ..? ಎಂದು ಪ್ರಶ್ನಿಸಿದರು.

LEAVE A REPLY

Please enter your comment!
Please enter your name here