ಎಚ್.ಡಿ. ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರದಲ್ಲಿ ನಡೆದಿದೆ ಎನ್ನಲಾದ ಫೋನ್ ಕದ್ದಾಲಿಕೆ ಪ್ರಕರಣಕ್ಕೆ ಮಹತ್ವದ ತಿರುವು ದೊರೆತಿದೆ. ರಾಜ್ಯ ರಾಜಕಾರಣದಲ್ಲಿ ತೀವ್ರ ಆರೋಪ, ಪ್ರತ್ಯಾರೋಪಕ್ಕೆ ಕಾರಣವಾಗಿದ್ದ ಈ ಫೋನ್ ಕದ್ದಾಲಿಕೆ ಪ್ರಕರಣವನ್ನು ಬಿ.ಎಸ್. ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಸಿಬಿಐಗೆ ವಹಿಸಿದೆ. ಪ್ರಕರಣದ ವಿಚಾರಣೆಯನ್ನು ಕೇಂದ್ರೀಯ ತನಿಖಾ ದಳ ಅಧಿಕೃತವಾಗಿ ಕೈಗೆತ್ತಿಕೊಂಡಿದೆ. ಆದರೆ ಸಿಬಿಐ ದಾಖಲಿಸಿರುವ ಎಫ್ಐಆರ್ ನಲ್ಲೆಲ್ಲೂ ಮಾಜಿ ಸಿಎಂ ಕುಮಾರಸ್ವಾಮಿ ಅವರ ಹೆಸರೇ ಇಲ್ಲ.

ಹೌದು, ಈ ಫೋನ್ ಕದ್ದಾಲಿಕೆ ಪ್ರಕರಣದಲ್ಲಿ ನೇರವಾಗಿ ಎಚ್.ಡಿ.ಕುಮಾರಸ್ವಾಮಿ ಹೆಸರು ಕೇಳಿಬಂದಿತ್ತು. ಆದರೆ ಸೂಕ್ತ ಸಾಕ್ಷ್ಯಗಳಿಲ್ಲದ ಕಾರಣ ಎಫ್ಐಆರ್ ನಲ್ಲೆಲ್ಲೂ ಕುಮಾರಸ್ವಾಮಿ ಅಥವಾ ಯಾವುದೇ ಅಧಿಕಾರಿಯ ಹೆಸರನ್ನಾಗಲಿ ಸಿಬಿಐ ಉಲ್ಲೇಖಿಸಿಲ್ಲ. ಇನ್ನು ರಾಜ್ಯದ ಪ್ರಭಾವಿ ರಾಜಕೀಯ ನಾಯಕರು, ಮಠಾಧೀಶರು, ಪತ್ರಕರ್ತರು, ಉದ್ಯಮಿಗಳು ಸೇರಿ 300 ಮಂದಿಯ ಫೋನ್ ಕದ್ದಾಲಿಕೆಯನ್ನು ಮೈತ್ರಿ ಸರ್ಕಾರ ನಡೆಸಿದೆ ಎಂಬ ಆರೋಪ ಕೇಳಿಬಂದಿತ್ತು. ಆ ಬಳಿಕ ಪ್ರಕರಣವನ್ನು ತನಿಖೆ ನಡೆಸುವಂತೆ ಕೇಂದ್ರ ಗೃಹ ಸಚಿವಾಲಯಕ್ಕೆ ರಾಜ್ಯ ಸರ್ಕಾರ ಆಗಷ್ಟ್ 19ರಂದು ಪತ್ರ ಬರೆದಿತ್ತು. ಕೇಂದ್ರ ಸರ್ಕಾರ ಗೃಹ ಸಚಿವಾಲಯ ಪ್ರಕರಣವನ್ನು ಸಿಬಿಐಗೆ ವಹಿಸಿತ್ತು. ಇನ್ನು ಈ ಮಹತ್ವದ ಪ್ರಕರಣದಲ್ಲಿ ಖಾಸಗಿ ವ್ಯಕ್ತಿಗಳ ವಿರುದ್ಧ ಸಿಬಿಐ ಪ್ರಕರಣ ದಾಖಲಿಸಿಕೊಂಡಿದೆ. ಮಾಹಿತಿ ತಂತ್ರಜ್ಞಾನ ಕಾಯ್ದೆ ಮತ್ತು ಟೆಲಿಗ್ರಾಫ್ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಇನ್ನು ಈ ಪ್ರಕರಣ ರಾಜ್ಯ ರಾಜಕೀಯದಲ್ಲಿ ಭಾರೀ ಚರ್ಚೆಯಾಗಿತ್ತು. ಮಾಜಿ ಸಿಎಂ ಕುಮಾರಸ್ವಾಮಿ ಅವರನ್ನು ರಾಜಕೀಯವಾಗಿ ಮುಗಿಸಲು ಬಿಜೆಪಿ ಮುಂದಾಗಿದೆ ಎಂಬ ಮಾತುಗಳು ಕೇಳಿ ಬಂದಿದ್ದವು. ಆದರೆ ಇದೀಗ ಎಫ್ಐಆರ್ ನಲ್ಲೇ ಮಾಜಿ ಸಿಎಂ ಕುಮಾರಸ್ವಾಮಿ ಅವರ ಹೆಸರು ಇಲ್ಲದಿರುವುದು ಕುಮಾರಸ್ವಾಮಿಯವರಿಗೆ ಬಿಗ್ ರಿಲೀಫ್ ನೀಡಿದೆ. ಮೈತ್ರಿ ಸರ್ಕಾರಕ್ಕೆ ಅಂಟಿಕೊಂಡಿದ್ದ ಕಳಂಕ ದೂರವಾಗಿದೆ.