ಮಹಾಭಾರತದಲ್ಲಿ ಕೃಷ್ಣನ ಪಾತ್ರ ಅತ್ಯುದ್ಬುತ..!ಯಾಕೆ ಗೊತ್ತಾ?

0
332

ಯಪ್ಪಾ ಯಾವ ಮಹಾನುಭಾವ ಆ ಪಾತ್ರವನ್ನು ‌ಸೃಷ್ಟಿಸಿದನೋ ಏನು ಕಥೆಯೋ ಯಪ್ಪಾ ಯಪ್ಪಾ ಎಂತಹ ಅತ್ಯುದ್ಬುತ ಪಾತ್ರವದು.

ಸಾಹಿತ್ಯಿಕವಾಗಿ ಇರಬಹುದು, ಕಾಲ್ಪನಿಕವಾಗಿ ಇರಬಹುದು ಅಥವಾ ವ್ಯಕ್ತಿತ್ವದ ದೃಷ್ಟಿಯಿಂದ ಇರಬಹುದು. ಸರಿಸುಮಾರು ಪರಿಪೂರ್ಣ ಎಂಬ ಅಭಿಪ್ರಾಯ ಮೂಡಿಸುವ ಪಾತ್ರವದು.

ಅರಿಷಡ್ವರ್ಗಗಳು, ನವ ರಸಗಳು, ಅರವತ್ನಾಲಕ್ಕು ವಿದ್ಯೆಗಳು ಸೇರಿ ಎಲ್ಲಾ ರೀತಿಯ ಅನುಭವಗಳು ಅದರಲ್ಲಿ ಅಡಕವಾಗಿದೆ.

ಹೇಗೆ ಅದೊಂದು ಅದ್ಬುತ ಪಾತ್ರವೋ, ಶಕ್ತಿಶಾಲಿಯೋ ಹಾಗೆಯೇ ಕೃಷ್ಣನ ಪ್ರತಿ ನಡೆಯನ್ನು ಅಷ್ಟೇ ತೀಕ್ಷ್ಣವಾಗಿ ಪ್ರಶ್ನಿಸುತ್ತಾ ಸಾಗಬಹುದು. ಕೆಲವುಗಳಿಗೆ ನಿರ್ದಿಷ್ಟ – ಖಚಿತ ಉತ್ತರ, ಮತ್ತೆ ಕೆಲವು ವೇಳೆ ಪಲಾಯನ ವಾದ, ಇನ್ನೊಮ್ಮೆ ಜನ್ಮಾಂತರಗಳಲ್ಲಿ ಹುದುಗುವುದು, ಮಗದೊಮ್ಮೆ ಆ ಕ್ಷಣದ ಸತ್ಯ, ಮತ್ತೊಮ್ಮೆ ಗೊಂದಲದ ಸಮರ್ಥನೆ, ನಾನೇ ಸರಿ ಎಂಬ ಹಠ, ಸ್ವಲ್ಪ ವಾಸ್ತವವಾದಿ, ಹೆಚ್ಚು ದುರಹಂಕಾರಿ, ಅಪಾರ ತಂತ್ರಗಳು ಹಾಗೆಯೇ ಉದಾರಿ, ತ್ಯಾಗಿ ಇನ್ನೂ ಎಲ್ಲಾ ಭಾವಗಳ ಸಂಗಮ ಈ ಕೃಷ್ಣ.

ಕ್ರಿಶ್ಚಿಯನ್ನರ ಜೀಸಸ್, ಇಸ್ಲಾಂ ಧರ್ಮದ ಪೈಗಂಬರ್, ಬುದ್ಧ, ಮಹಾವೀರ ಗುರುನಾನಕ್ ಮುಂತಾದವರು ಇಡೀ ಸಮಾಜದ ಶಾಂತಿ ಪ್ರಕ್ರಿಯೆ, ಧಾರ್ಮಿಕ ಆಚರಣೆ, ಒಳ್ಳೆಯ ವ್ಯಕ್ತಿತ್ವ ಮತ್ತು ಬದುಕಿನ ಸಾರ್ಥಕತೆಯ ಬಗ್ಗೆ ಪ್ರವಚನ ರೂಪದ ಭೋದನೆ ಮಾಡುತ್ತಾರೆ. ತಾವು ಕಂಡ ಸತ್ಯವನ್ನು ಬಿಚ್ಚಿಡುತ್ತಾರೆ. ಆದರೆ ಕೃಷ್ಣ ಹುಟ್ಟಿನಿಂದ ಸಾವಿನವರೆಗಿನ ಇಡೀ ಜೀವನದ ಸಾರವನ್ನು, ವಾಸ್ತವದಲ್ಲಿ ನಡೆಯುವ ಘಟನೆಗಳನ್ನು ಸಂಕೇತಿಸುತ್ತಾ ಪರಿಹಾರ ಸೂಚಿಸುತ್ತಾ ಸಾಗುತ್ತಾನೆ. ಎಲ್ಲವೂ ಧರ್ಮದ ಉಳಿವಿಗಾಗಿ ಎಂದು ಸಮರ್ಥಿಸಿಕೊಳ್ಳುತ್ತಾನೆ. ಎಲ್ಲವನ್ನೂ ನಿಯಂತ್ರಿಸುತ್ತಾನೆ.

ಎಲ್ಲರೂ ನಿನ್ನೊಳಗೆ ನೀನು ಎಂದು ಹೇಳಿದರೆ ಕೃಷ್ಣ ನನ್ನೊಳಗೆ ನೀನು ಎಂದು ಹೇಳುತ್ತಾನೆ. ಸನಾತನ ಧರ್ಮದಲ್ಲಿ ನಂಬಿಕೆ ಇರುವ ಬಹುತೇಕ ಎಲ್ಲರೂ ಕೃಷ್ಣನ ದೈವಿ ಸ್ವರೂಪದ ವ್ಯಕ್ತಿತ್ವವನ್ನು ಆತನ ಕ್ರಿಯೆಗಳನ್ನು ಸಂಪೂರ್ಣ ಒಪ್ಪಿಕೊಳ್ಳುತ್ತಾರೆ. ಅದೇ ಜೀವನದ ಸತ್ಯ ಎಂದು ನಂಬುತ್ತಾರೆ. ಆತನೇ ಅವರಿಗೆ ಸರ್ವ ಶಕ್ತ – ಸರ್ವಾಂತರ್ಯಾಮಿ.

ಅದೇರೀತಿ ಅಂಬೇಡ್ಕರ್ ವಾದದ, ವೈಚಾರಿಕ ಪ್ರಜ್ಞೆಯ, ಎಡಪಂಥೀಯ ಚಿಂತನೆಯ ವ್ಯಕ್ತಿತ್ವದವರು ಕೃಷ್ಣನ ಪ್ರತಿ ನಡೆಯನ್ನು ಪ್ರಶ್ನಿಸುತ್ತಾರೆ. ಆತನ ನಡೆಗಳು ಸಾಮಾಜಿಕ ನ್ಯಾಯಕ್ಕೆ ವಿರುದ್ಧವಾದುದು ಮತ್ತು ಸ್ವಾರ್ಥಕ್ಕಾಗಿ ಹಿಂಸೆಯನ್ನು ಪ್ರಚೋದಿಸುವ, ಕೆಳ ಮತ್ತು ಶ್ರಮಿಕ ವರ್ಗಗಳನ್ನು ಶೋಷಿಸುವ, ಮಹಿಳೆಯರನ್ನು ದುರ್ಬಲಗೊಳಿಸುವ ತಂತ್ರಗಳೇ ಆತನ ಚಿಂತನೆಯಲ್ಲಿ ಅಡಗಿವೆ ಎಂದು ಹೇಳುತ್ತಾರೆ.

ಮಹಾಭಾರತವನ್ನು ರಚಿಸಿದರು ಎಂದು ಹೇಳಲಾದ ವ್ಯಾಸರು ತಮ್ಮ ಇಡೀ ಕಥನವನ್ನು ಮತ್ತು ತಮ್ಮ ಅಭಿಪ್ರಾಯಗಳನ್ನು ಹಾಗು ಅಂದಿನ ಸಾಮಾಜಿಕ ವ್ಯವಸ್ಥೆಯನ್ನು ಕೃಷ್ಣನ ಪಾತ್ರದ ಮುಖಾಂತರವೇ ಹೇಳುತ್ತಾರೆ. ಆತನೇ ಮಹಾಭಾರತ ನಿಜವಾದ ಸೂತ್ರಧಾರ. ಎಲ್ಲಾ ಕಾಲಕ್ಕೂ ಸಲ್ಲುವ ಪಾತ್ರ ಎಂದು ಹೇಳಲಾಗುತ್ತದೆಯಾದರೂ ಈಗಿನ ಕಾಲದಲ್ಲಿ ಬುದ್ದಿ ಜೀವಿಗಳ ವರ್ಗದಿಂದ ಸಾಕಷ್ಟು ಟೀಕೆಯನ್ನು ಎದುರಿಸಬೇಕಾಗಿದೆ. ಉತ್ತರವಿಲ್ಲದ ಎಷ್ಟೋ ಪ್ರಶ್ನೆಗಳು ಆತನಲ್ಲಿ ಅಡಗಿದೆ.

ವೈಯುಕ್ತಿಕ ಮಟ್ಟದಲ್ಲಿ ಕೃಷ್ಣ ಅರ್ಥವಾಗಬೇಕಾದರೆ ಕೇವಲ ಮಹಾಭಾರತ ಮತ್ತು ಭಗವದ್ಗೀತೆ ಓದಿದರೆ ಅಥವಾ ಶ್ಲೋಕಗಳನ್ನು ಬಾಯಿ ಪಾಠ ಮಾಡಿದರೆ, ಅಥವಾ ಪ್ರವಚನಗಳನ್ನು ಕೇಳಿದರೆ ಅಥವಾ ಆತನ ಜೀವನ ಚರಿತ್ರೆ ಆಧಾರಿತ ನಾಟಕ ಟಿವಿ ಧಾರಾವಾಹಿ ಸಿನಿಮಾ ನೋಡಿದರೆ ಅಥವಾ ಆತನನ್ನು ದೇವರೆಂದು ಭಕ್ತಿಯಿಂದ ಪೂಜಿಸಿದರೆ ಮಾತ್ರ ಸಾಕಾಗುವುದಿಲ್ಲ. ನಮ್ಮ ಬದುಕಿನ ಅನುಭವದೊಳಗೆ, ಆತನನ್ನು ಸಮೀಕರಿಸಿಕೊಂಡಾಗ, ಮಹತ್ವದ ಸಂದರ್ಭದಲ್ಲಿ ನಮ್ಮ ನಡೆಗಳ ಜೊತೆ ಆತನ ತಂತ್ರಗಳನ್ನು ಪ್ರಾಯೋಗಿಕತೆಗೆ ಅಳವಡಿಸಿದಾಗ ಮಾತ್ರ ಕೃಷ್ಣನ ನಿಜ ರೂಪದ ಪರಿಚಯವಾಗಲು ಸಾಧ್ಯ.

ಏನಾದರಾಗಲಿ ವೈವಿಧ್ಯಮಯ ವ್ಯಕ್ತಿತ್ವದ ಮಹಾ ಸ್ತ್ರೀಲೋಲ ಎಂಬ ಆಕರ್ಷಣೆ ಮತ್ತು ಆರೋಪಕ್ಕೆ ಒಳಗಾಗಿರುವ ಕೃಷ್ಣ ಜನ್ಮಾಷ್ಠಮಿಯ ಶುಭಾಶಯಗಳು.

ವೈಯಕ್ತಿಕವಾಗಿ ನನಗೆ ಕೃಷ್ಣ ಒಬ್ಬ ಕಾಲ್ಪನಿಕ ಪಾತ್ರದಾರಿ ಎಂಬ ಬಗ್ಗೆ ಅನುಮಾನವಿಲ್ಲ. ಆದರೆ ಆತನನ್ನು ದೇವರೆಂದು ನಂಬಿ ಪೂಜಿಸುತ್ತಿರುವವರು ಸಹ ನಮ್ಮ ಗೆಳೆಯರೇ ಅಲ್ಲವೇ ? ಅವರಿಗೂ ಕೃಷ್ಣ ಅಂದಿನ ಸಾಮಾಜಿಕ ವ್ಯವಸ್ಥೆಯನ್ನು ಕಥಾ ರೂಪಕದಲ್ಲಿ ಹೇಳಲು ಲೇಖಕರು ಕೃಷ್ಣನೆಂಬ ಅತ್ಯದ್ಭುತ ವ್ಯಕ್ತಿತ್ವದ ಪಾತ್ರವನ್ನು ಸೃಷ್ಟಿಸಿದರು ಎಂದು ಅರಿವಾಗುವವರೆಗೂ ಅವರ ಭಾವನೆಗಳನ್ನು ಗೌರವಿಸೋಣ

LEAVE A REPLY

Please enter your comment!
Please enter your name here