ಜಗದ ಮೊದಲ ಗುರು ಕೃಷ್ಣನಿಗೆ ಹುಟ್ಟು ಸಾವು ಇಲ್ಲ

0
313

ಶ್ರೀ ಕೃಷ್ಣ ಭಗವಾನ್ ಹೌದೋ,ಅಲ್ಲವೋ ಎಂಬುದು ಅತಾರ್ಕಿಕ‌. ಕೃಷ್ಣ ಎಂಬ ವ್ಯಕ್ತಿ ಇದ್ದನೋ ಇಲ್ಲವೋ ಆ ಮಾತು ಬೇರೆ ಆದರೆ ಬದುಕಿನ ಅನೇಕ ಸತ್ಯಗಳನ್ನು ನಿರೂಪಿಸುವ ಹದಿನೆಂಟು ಅಧ್ಯಾಯದ ಭಗವದ್ಗೀತೆಯಂತೂ ಇದ್ದೇ ಇದೆ. ಅಲ್ಲಿ ಶ್ರೀ ಕೃಷ್ಣ ಜೀವಂತವಾಗಿ ನೆಲೆ ನಿಂತಿದ್ದಾನೆ.

ಈ ಕ್ಷಣ ಶಾಶ್ವತ ಅಲ್ಲ ಎಂಬ ಅವನ ಸೂತ್ರವೊಂದೆ ಸಾಕು ಮನುಷ್ಯ ಬದುಕನ್ನು ಅರ್ಥಮಾಡಿಕೊಳ್ಳಲು. ಕಷ್ಟವೂ ಅಶಾಶ್ವತ, ಸುಖವೂ ಅಶಾಶ್ವತ. ನಮ್ಮ ತೊಳಲಾಟಕೆ ಈ ಸುಖ, ದುಃಖದ ಹುಡುಕಾಟವೇ ಕಾರಣ.
ಮನುಷ್ಯ ಕೇವಲ ಸುಖವನ್ನು ಹುಡುಕಾಡುತ್ತಾನೆ. ಸುಖ ಸಿಕ್ಕ ಕೂಡಲೇ ದುರಾಸೆಗೆ ಬಿದ್ದು ದುಃಖ ತಂದುಕೊಳ್ಳುತ್ತಾನೆ.

ಅರ್ಜುನನಿಗೆ ಕೃಷ್ಣ ಬೋಧಿಸಿದ ಭಗವದ್ಗೀತೆ ಕೇವಲ ಅರ್ಜುನನಿಗೆ ಮಾತ್ರವಲ್ಲ, ನಿತ್ಯ ನರಳುವ ಮನುಜರಿಗೆ. ಕೃಷ್ಣನ ಈ ಗೀತೆಯ ಸಾರವನ್ನು ಮತ್ತೆ ಮತ್ತೆ ಓದಿ ಖುಷಿಪಡುತ್ತೇವೆ ಆದರೆ ಆಚರಣೆಯ ಹಂತದಲ್ಲಿ ಕೇವಲ ಮನುಷ್ಯರಾಗಿಬಿಡುತ್ತೇವೆ.

ಪಾಂಡವರೆಂಬ positive energy ಹೇಳಲೆಂದೆ ಕೌರವನೆಂಬ negative energy ಯ ಜೊತೆ ಆಟವಾಡಿದ ಕೃಷ್ಣ ಏನೆಲ್ಲಾ ಹೇಳುತ್ತಾನೆ.

ಮಹಾಭಾರತ ಎಂಬ ಮಹಾಕಾವ್ಯ ಮನುಷ್ಯನ ಸಾರ್ವಜನಿಕ ಬದುಕಿನ ಪ್ರತಿಬಿಂಬ.

ದುರ್ಯೋಧನನ ವೈಯುಕ್ತಿಕ ಸ್ವಾರ್ಥ, ಅಹಂಕಾರ, ಹಟ, ದ್ವೇಷ, ವಿಕೃತಾನಂದ ಕೊನೆಗೆ ಯುದ್ಧದಲ್ಲಿ ಕೊನೆಗೊಳ್ಳುತ್ತದೆ. ನಕಾರಾತ್ಮಕ ಮನೋಧರ್ಮದ ಕೌರವ ನಾಶವಾಗುವುದು ಅವನ ದೃಷ್ಟಿಕೋನದಿಂದ. ಅದನ್ನೇ ಆಧುನಿಕರು attitude ಎಂದು ವ್ಯಾಖ್ಯಾನಿಸುತ್ತಾರೆ.

ಎರಡೂವರೆ ಸಾವಿರ ವರ್ಷಗಳ ಹಿಂದೆ ಬುದ್ಧ ಬೋಧಿಸಿದ ವಿಪಸನದ ಮೂಲ ಕೃಷ್ಣನ ಗೀತೆಯಲ್ಲಿದೆ.

ಬುದ್ಧ ಕೇವಲ ಮನಸಿಗೆ ಮಹತ್ವ ಕೊಟ್ಟರೆ ಕೃಷ್ಣ ದೊಡ್ಡ ಕ್ಯಾನ್ವಾಸ್ ಮೂಲಕ ಇಡೀ ಬದುಕನ್ನು ಚಿತ್ರಿಸಿದ್ದಾನೆ.
ಮಹಾಭಾರತದ ಎಲ್ಲ ಪಾತ್ರಗಳು ಅವನು ಆಡಿಸುವ ಆಟದ ಬೊಂಬೆಗಳು.

ಆ ಎಲ್ಲಾ ಪಾತ್ರಗಳು ಮನುಷ್ಯನ ಮನಸ್ಸಿನ ಪ್ರತಿಬಿಂಬಗಳು.
ಮನುಷ್ಯನ ಎಲ್ಲ ಅನಾಹುತಗಳಿಗೆ ಅವನ ಮನಸೇ ಕಾರಣ ಎಂದು ಪ್ರತಿಪಾದಿಸಿದ ಮೊಟ್ಟ ಮೊದಲ ಸೈಕೋಲಾಜಿಸ್ಟ್ ಈ ಕೃಷ್ಣ.

ಕೃಷ್ಣ ದೇವರು ಹೌದೋ ಅಲ್ಲವೋ ಎಂಬ ವಾದ ಬದಿಗಿರಿಸಿ ಗೀತೆ ಓದಿದಾಗ ಬದುಕು ಅರ್ಥವಾಗುತ್ತದೆ. ನಿತ್ಯದ ರಾಜಕಾರಣ ಮತ್ತದರ ಸುತ್ತಲೂ ನಡೆಯುವ ಅನಾಚಾರಗಳಲಿ ಮಹಾಭಾರತ ಅಡಗಿದೆ.
ಈಗ ಕೌರವರ ಅಟ್ಟಹಾಸದಲ್ಲಿ, ಸತ್ಯ ಹುಡುಕುವ ಒದ್ದಾಟದಲ್ಲಿ poetic justice ಸಿಕ್ಕಾಗ ಕೃಷ್ಣ ನೆನಪಾಗಿ ಸಮಾಧಾನವಾಗುತ್ತದೆ.

ಕೃಷ್ಣನ ಬದುಕಿನ ನಿಜ ಸೂತ್ರಗಳನ್ನು ಅಳವಡಿಸಿಕೊಂಡವರಿಗೆ ದುಃಖ ಬರುವುದಿಲ್ಲ, ಅವುಗಳನ್ನು ಅಳವಡಿಸಿಕೊಂಡು ಬದುಕಿದ ಕಾರಣಕ್ಕಾಗಿ ಅವನು ದೇವನಾದ, ಅಳವಡಿಸಿಕೊಳ್ಳದೇ ಒದ್ದಾಡುವ ನಾವು ಮನುಷ್ಯರಾಗಿದ್ದೇವೆ.

ಮನುಷ್ಯತನದಲ್ಲಿ ಪಾಂಡವರು ಹೊರತಾಗಿರಲಿಲ್ಲ ಅದೇ ಮನುಷ್ಯನ ದೌರ್ಬಲ್ಯಗಳ ಕಾರಣಗಳಿಂದ ವನವಾಸ ಅನುಭವಿಸಿದರು.

ನಾವು ಅಷ್ಟೇ ಗೊತ್ತಿದ್ದು ಮಾಡುವ ತಪ್ಪಿಗಾಗಿ ವನವಾಸ, ಮನೋವೇದನೆ,ಹಿಂಸೆ ಮತ್ತು ನೋವುಗಳ ಅನುಭವಿಸಿ ಸತ್ತು ಹೋಗುತ್ತೇವೆ.

ಆದರೆ ಸಾಯುವ ಮೊದಲು ಕೃಷ್ಣ ಹೇಳಿದ ಬದುಕಿನ ಸಾರ ಅರ್ಥಮಾಡಿಕೊಂಡರೆ ಖುಷಿಯಿಂದ ನಾವು ಮಾಡುವ ತಪ್ಪುಗಳನ್ನು ಅರ್ಥ ಮಾಡಿಕೊಂಡು ನೆಮ್ಮದಿಯಿಂದಾದರೂ ಪ್ರಾಣ ಬಿಡಬಹುದು.

ಬದುಕಿನ ಬಹು ಮುಖ್ಯ ಅಂಗಗಳಾದ ಪ್ರೀತಿ-ಪ್ರೇಮ-ಪ್ರಣಯದಂತಹ ಸಂಗತಿಗಳ ಮೇಲೆ ಬೆಳಕು ಚೆಲ್ಲುವ ಕೃಷ್ಣ ಮೈಮನಗಳ ಮಹತ್ವವನ್ನು ವಿವರಿಸಿದ್ದಾನೆ.
ಹದಿನಾರು ಸಾವಿರ ಹೆಂಡಂದಿರು ಮನಸ್ಸಿನ ವಿಷಾಲ ಒಲವ ಧಾರೆಯ ಸಂಕೇತ. ದೈಹಿಕ ಅನುಭವದಾಚೆಗಿನ ಅನುಸಂಧಾನ. ದೇಹ ಸುಖ ಮೀರಿದ ಕಾಮದಾನುಭವ ಅಲ್ಲಿ ಕಾಣ ಸಿಗುತ್ತದೆ. ರಾಧಾ-ಕೃಷ್ಣ ನಮ್ಮ ಮನಸಿನ ಒಲವ ಪ್ರತಿನಿಧಿಗಳು.

ನಾವು ಪ್ರೇಮಿಗಳೋ, ಕಾಮಿಗಳೋ ಎಂಬುದನ್ನು ನಾವೇ ನಿರ್ಧರಿಸಬೇಕು. ಅದನ್ನು ನಿರ್ಧರಿಸುವ ತಾಕತ್ತು ಕೇವಲ ಮನಸಾಕ್ಷಿಗೆ ಮಾತ್ರ ಇದೆ.

ಹೀಗೆ ಅರ್ಥ ಮಾಡಿಕೊಳ್ಳಲು ಹೋರಾಡಿದರೂ ಅರ್ಥವಾಗದ ನಮ್ಮ ಬದುಕನ್ನು ಅರ್ಥಮಾಡಿಕೊಳ್ಳುವ ಬಗೆಯನ್ನು ಕೃಷ್ಣ ತುಂಬಾ ಹಿಂದೆಯೇ ಹೇಳಿದ್ದಾನೆ.

ಅದು ಗೊತ್ತಿದ್ದು ಅವೇ ದೌರ್ಬಲ್ಯಗಳಿಂದ ಬದುಕನ್ನು ಅಸಹನೀಯ ಮಾಡಿಕೊಳ್ಳುತ್ತೇವೆ. ನಮ್ಮನ್ನು ನಾವು ಅರ್ಥ ಮಾಡಿಕೊಳ್ಳಲು ವಿಲ ವಿಲ ಒದ್ದಾಡುವಾಗಲೆಲ್ಲ ಕೃಷ್ಣ ನೆನಪಿಗಾಗಿ ಧೈರ್ಯ ತುಂಬುತ್ತಾನೆ.

ನಾವು ನಮಗಾಗಿ ಬದುಕುತ್ತ ಕೃಷ್ಣನಿಗೆ ನಮಿಸೋಣ.
ಈ ಕ್ಷಣ ಶಾಶ್ವತ ಅಲ್ಲ‌ ಅಂದುಕೊಂಡು.

ಸಿದ್ದು_ಯಾಪಲಪರವಿ

LEAVE A REPLY

Please enter your comment!
Please enter your name here