ಕನ್ನಡದ ಹಾಟ್ ನಟಿಯರ ಪೈಕಿ ಕೃಷಿ ತಾಪಂಡ ಕೂಡ ಒಬ್ಬರು. 2016 ರಲ್ಲಿ ಅಕಿರಾ ಚಿತ್ರದ ಮೂಲಕ ಪಾದಾರ್ಪಣೆ ಮಾಡಿದ ಅವರು, ಈ ಚಿತ್ರದ ಪಾತ್ರಕ್ಕಾಗಿ 2016 ರಲ್ಲಿ ಸೈಮಾ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ. 2014 ರಲ್ಲಿ ಮಿಸ್ ಕರ್ನಾಟಕ ಕಿರೀಟವನ್ನು ಮುಡಿಗೇರಿಸಿಕೊಂಡಿದ್ದು, ದಕ್ಷಿಣ ಭಾರತದ ಅತಿದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ೫ರ ಆವೃತ್ತಿಯಲ್ಲಿ ಭಾಗಿಯಾಗಿ ಜನ ಮನ್ನಣೆ ಪಡೆದುಕೊಂಡರು.
ಮಾಡೆಲಿಂಗ್ ಮತ್ತು ಚಲನಚಿತ್ರಗಳಿಗೆ ಪ್ರವೇಶಿಸುವ ಮೊದಲು ಕೃಷಿ, ಯುಎಸ್ ಮೂಲದ ಆಡಿಯೋ ಕಾನ್ಫರೆನ್ಸ್ ಮತ್ತು ಮೀಟಿಂಗ್ ಸರ್ವಿಸ್ ಪ್ರೊವೈಡರ್ ಇಂಟರ್ ಕಾಲ್ ನಲ್ಲಿ ಸಹಾಯಕ ವ್ಯವಸ್ಥಾಪಕರಾಗಿ ಕೆಲಸ ಮಾಡುತ್ತಿದ್ದರು. ನಂತರ ಅಕಿರಾ, ಕಹಿ, ಎರಡು ಕನಸು, ಕನ್ನಡಕ್ಕಾಗಿ ಒಂದನ್ನು ಒತ್ತಿ ಚಿತ್ರಗಳಲ್ಲಿ ಅಭಿನಯ. ತಮ್ಮ ಹಾಟ್ ಮತ್ತು ಗ್ಲಾಮರಸ್ ಲುಕ್ ಗಳಿಂದ ಒಂದಿಷ್ಟು ಅಭಿಮಾನಿಗಳನ್ನು ಹಿಡಿದಿಟ್ಟುಕೊಂಡಿದ್ದಾರೆ. ಇದೀಗ ಕೃಷಿ ಬ್ಲಾಂಕ್ ಆಗಲಿದ್ದಾರೆ.
ಭ್ರಮೆ ಮತ್ತು ವಾಸ್ತವದ ರೋಚಕ ಕಥಾ ಹಂದರದ ಮೂಲಕ ಪ್ರೇಕ್ಷಕರನ್ನು ರಂಜಿಸಿ ಗಮನ ಸೆಳೆದ ಚಿತ್ರ ‘ಲೂಸಿಯಾ’. ಇದೀಗ ಅಂತಹದೇ ಒಂದು ವಿಭಿನ್ನ ಲುಸಿಡ್ ಡ್ರಿಮಿಂಗ್ ಪರಿಕಲ್ಪನೆಯ ಕಥಾ ಹಂದರದ ಸಿನಿಮಾ ಬರಲಿದೆ. ಅದರ ಹೆಸರು ‘ಬ್ಲಾಂಕ್’.
ಚಿಕ್ಕಮಗಳೂರು ಮೂಲದ ಉದ್ಯಮಿ ಎಸ್.ಪಿ. ಮಂಜುನಾಥ್ ಪ್ರಸನ್ನ ನಿರ್ಮಾಣದ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿರುವುದು ಯುವ ನಿರ್ದೇಶಕ ಎಸ್.ಜೈ. ನಾಯಕಿ ಕೃಷಿ ತಾಪಂಡ ಹೊರತು ಪಡಿಸಿದರೆ ಇಲ್ಲಿರುವವರೆಲ್ಲರೂ ಹೊಸಬರೇ. ಇಂಜಿನಿಯರಿಂಗ್ ಮುಗಿಸಿದ ಯುವ ನಿರ್ದೇಶಕ ಎಸ್. ಜೈ ಕಿರುಚಿತ್ರಗಳನ್ನು ಮಾಡುವ ಮುಖಾಂತರ ಗಮನ ಸೆಳೆದು ನಂತರ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದಾರೆ.
ಕೃಷಿ ತಾಪಂಡ, ಭರತ್,ಪೂರ್ಣಚಂದ್ರ ಮೈಸೂರು ಹಾಗೂ ತಮಿಳು ನಟ ರಿಷಿ ಮಲ್ಲಿಕ್ ಈ ಚಿತ್ರದ ಪ್ರಧಾನ ಪಾತ್ರಧಾರಿಗಳು. ಒಬ್ಬಳು ನಾಯಕಿ ಮತ್ತು ಮೂವರು ನಾಯಕರನ್ನು ಹೊಂದಿರುವ ಈ ವಿಭಿನ್ನ ಕಥೆಯುಳ್ಳ ಬ್ಲಾಂಕ್ ಸಿನಿಮಾ ಇದೊಂದು ಲುಸಿಡ್ ಡ್ರೀಮಿಂಗ್ ಕಾನ್ಸೆಪ್ಟ್ ಸಿನಿಮಾವಂತೆ.
ಸದ್ಯ ಚಿತ್ರದ ಟೀಸರ್ ಲಾಂಚ್ ಮಾಡಿರುವ ಚಿತ್ರ ತಂಡ ‘ಸಿನಿಮಾದ ಕತೆ, ಕನಸು ಮತ್ತು ವಾಸ್ತವಕ್ಕೆ ಸಂಬಂಧಿಸಿದ್ದು, ಅಂದಾಕ್ಷಣ ಎಲ್ಲರೂ ಇದೊಂದು ಲೂಸಿಯಾ ಶೈಲಿಯ ಸಿನಿಮಾವೇ ಅಂದುಕೊಳ್ಳುವುದು ಸಹಜ. ಆದರೆ ಆ ಸಿನಿಮಾಗೂ, ಇದಕ್ಕೂ ಯಾವುದೇ ಕನೆಕ್ಷನ್ ಇಲ್ಲ. ಇದು ಡ್ರಗ್ಸ್ಗೆ ಈಡಾದವರ ಕತೆ. ಇಂದಿನ ಯುವ ಪೀಳಿಗೆಯ ಮೇಲೆ ಡ್ರಗ್ಸ್ ಹೇಗೆಲ್ಲ ಪ್ರಭಾವ ಬೀರುತ್ತಿದೆ ಎನ್ನುವ ಸಣ್ಣ ಎಳೆಯು ಚಿತ್ರದ ಪ್ರಧಾನ ಅಂಶ’ ಎಂದು ನಿರ್ದೇಶಕ ಎಸ್ ಜೈ ಹೇಳಿದ್ದಾರೆ.
ಮೂರು ಶೇಡ್ಸ್ ಇರುವ ಪಾತ್ರದಲ್ಲಿ ಇದೇ ಮೊದಲು ಅಭಿನಯಿಸಿದ್ದೇನೆ ಅಂತ ನಾಯಕಿ ಕೃಷಿ ತಾಪಂಡ ಹೇಳಿಕೊಂಡರೆ, ಇಂತಹದೊಂದು ಸಿನಿಮಾಕ್ಕೆ ಬಂಡವಾಳ ಹೂಡುವುದಕ್ಕೆ ಖುಷಿ ಆಯಿತು ಅಂತ ನಿರ್ಮಾಪಕ ಮಂಜುನಾಥ್ ಪ್ರಸನ್ನ ಹೇಳಿದ್ದಾರೆ. ಕೆಜಿಎಫ್ ಖ್ಯಾತಿಯ ಗರುಡ ಚಿತ್ರದ ಟೀಸರ್ ಅನ್ನು ಬಿಡುಗಡೆ ಮಾಡಿದ್ದು, ಚಿತ್ರತಂಡಕ್ಕೆ ಆಲ್ ದ ಬೆಸ್ಟ್ ಹೇಳಿದ್ದಾರೆ.