ಲಕ್ಷ ವೃಕ್ಷೋತ್ಸವ, ಮತ್ತು ಕೊಪ್ಪಳ ಜನ ಜಾತ್ರೆ!

0
259

ಕಲ್ಯಾಣ ಕರ್ನಾಟಕ ಉರ್ಫ್ ಹೈದರಾಬಾದ್ ಕರ್ನಾಟಕದಲ್ಲಿ ಕೊಪ್ಪಳ ಗವಿಸಿದ್ಧೇಶ್ವರ ಮಠದ ಜಾತ್ರೆ ದಕ್ಷಿಣ ಭಾರತದ ಕುಂಭಮೇಳ ಎಂದು ವಿಶ್ಲೇಷಣೆಗೆ ಒಳಗಾಗುತ್ತಿರುವುದು ವರ್ತಮಾನದ ಬೆರಗು. ಗ್ರಾಮೀಣ ಜನತೆಗೆ ಜಾತ್ರೆ ಎಂಬುದೊಂದು ಮೋಜು, ಸಂಭ್ರಮ ಮತ್ತು ಮನೋರಂಜನಾ ಕೇಂದ್ರ. ಹಿಂದಿನ ಕಾಲದ ಶಾಪಿಂಗ್ ಮಾಲ್. ಸ್ಟೇಶನರಿ ವ್ಯಾಪಾರ, ನಾಟಕ ಪ್ರದರ್ಶನ ಇತ್ಯಾದಿ ಇತ್ಯಾದಿ…ಈಗ ಕಾಲ ಬದಲಾಗಿದೆ, ಮನೋರಂಜನೆ ಟಿ.ವಿ. ಮೂಲಕ ಜನರ ಮನೆ ತಲುಪಿದೆ. ರಂಗಭೂಮಿ ಕ್ಷೀಣಗೊಂಡಿದೆ. ಆನ್ ಲೈನ್ ಶಾಪಿಂಗ್ ಕಾರಣದಿಂದ ಭರ್ಜರಿ ವ್ಯಾಪಾರ ಮೊಟಕಾಗಿದೆ.

 

ಈ ಎಲ್ಲಾ ಬದಲಾವಣೆ ಮಧ್ಯೆ ಜಾಣ ಮಠಾಧೀಶರೊಬ್ಬರು ಮನಸು ಮಾಡಿದರೆ ಏನೆಲ್ಲಾ ಸಾಧ್ಯ ಎಂಬುದನ್ನು ಕೊಪ್ಪಳ ಗವಿಮಠದ ಪೂಜ್ಯ ಅಭಿನವ ಗವಿಸಿದ್ಧ ಮಹಾಸ್ವಾಮಿಗಳು ಸಿದ್ಧಪಡಿಸಿದ್ದಾರೆ. ಇಡೀ ರಾಜ್ಯದಲ್ಲಿ ಹೈದರಾಬಾದ್ ಕರ್ನಾಟಕ ಧರ್ಮದ ವಿಷಯವಾಗಿ ತುಂಬ ವಿಚಿತ್ರ ಪ್ರದೇಶ.
ಶಿಕ್ಷಣ, ವೈಚಾರಿಕತೆಗೆ ಕೊಂಚ ಜಾಗ ಕಡಿಮೆ. ಧರ್ಮವೆಂದರೆ ತಾತ,ಮುತ್ಯಾ,ಬುದ್ಧಿ ಎಂದು ಕರೆಯಲ್ಪಡುವ ಕಾವಿಧಾರಿ ಸ್ವಾಮಿಗಳು. ಅವರ ಜಾತಿ,ಧರ್ಮ, ಆಚರಣೆ ಮತ್ತು ತಾತ್ವಿಕ ಸಿದ್ಧಾಂತಗಳ ಬಗ್ಗೆ ತಲೆ ಕೆಡಿಸಿಕೊಳ್ಳದ ಮುಗ್ಧತೆ.

 

 

ಮಠಾಧೀಶರ ಕಾಲಿಗೆ ಬಿದ್ದು ಶಕ್ತಿ ಮೀರಿ ದಾನ ಮಾಡುವ ಔದಾರ್ಯ,ಭಕ್ತಿ, ಶ್ರದ್ಧೆ ಮತ್ತು ಗೌರವ.
ಇದನ್ನು ಬಳಸಿಕೊಂಡ ಅನೇಕ ಮಠಗಳು ಮತ್ತು ಮಠಾಧೀಶರು ಸಮಾಜಮುಖಿ ಕಾರ್ಯಗಳನ್ನು ಮಾಡದೇ ಐಷಾರಾಮಿ ಬದುಕಿನಲ್ಲಿ ತಮ್ಮ ಪಾಡಿಗೆ ತಾವಿರುವುದನ್ನು ಬಾಲ್ಯದಿಂದಲೂ ಗಮನಿಸಿದ್ದೇನೆ. ನಮ್ಮ ತಂದೆ ವೈಚಾರಿಕತೆಯ ಬಗ್ಗೆ ತಲೆ ಕೆಡಿಸಿಕೊಳ್ಳದೇ ದಾನ ಮಾಡಿ ಸ್ವಾಮಿಗಳ ಪಾದಗಳಿಗೆ ಎರಗುತ್ತಿದ್ದರು. ವ್ಯಾಪಾರ ಬಿಟ್ಟು ವಿದ್ಯೆಯ ಅಸ್ತ್ರ ಹಿಡಿದು ಹೊಸ ಬದುಕು ಕಟ್ಟಿಕೊಂಡ ನಾನು ವಚನ ಶಾಸ್ತ್ರ ಮತ್ತು ಶರಣರ ಬದುಕನ್ನು ಅಧ್ಯಯನ ಮಾಡಿದ ಮೇಲೆ ಮಠಗಳ ಮತ್ತು ಮಠಾಧೀಶರ ಕುರಿತು ನಂಬಿಕೆಯನ್ನು ಬದಲಾಯಿಸಿಕೊಂಡೆ.

 

ಓದು-ಬರಹ-ತರಬೇತಿಗಳ ಮೂಲಕ ಇಡೀ ದೇಶ ಸುತ್ತುವಾಗ ಈ ದೇಶದಲ್ಲಿ ಧರ್ಮದ ಮಹತ್ವ ಮತ್ತು ಪ್ರಾಭಲ್ಯವನ್ನು ಅರ್ಥ ಮಾಡಿಕೊಂಡಿದ್ದೇನೆ. ನಮ್ಮ ಜನಸಾಮಾನ್ಯರ ಕಲ್ಪನೆಯಲ್ಲಿ ಈ ಮಠಗಳೆಂದರೆ ಕನ್ಫೆಸ್ಸಿಂಗ್ ಕೇಂದ್ರಗಳು. ಸರಿತಪ್ಪು ವ್ಯಾಖ್ಯಾನ ಬೇಕಿರುವುದಿಲ್ಲ. ವಸ್ತುಸ್ಥಿತಿ ಹೀಗಿರುವಾಗ ಸುಶಿಕ್ಷಿತ, ವಿದ್ಯಾವಂತ ಮಠಾಧೀಶರು ಸಮಾಜದಲ್ಲಿ ಬದಲಾವಣೆ ಬಯಸಿ ಅದನ್ನು ಕಾರ್ಯರೂಪಕ್ಕೆ ತರಲು ಪ್ರಯತ್ನಿಸುವುದು ಅಭಿನಂದನೀಯ. ಈ ಹಿನ್ನೆಲೆಯಲ್ಲಿ ಸಾಹಿತ್ಯ,ಅಧ್ಯಾತ್ಮ ಮತ್ತು ಸಂಸ್ಕೃತಿಯನ್ನು ಆಳವಾಗಿ ಅರ್ಥ ಮಾಡಿಕೊಂಡ ಕೊಪ್ಪಳ ಸ್ವಾಮಿಗಳು ಜನರ ಮನಸ್ಥಿತಿಯನ್ನು ಸಕಾರಾತ್ಮಕಗೊಳಿಸುವ ಹಾದಿಯಲ್ಲಿ ಸಾಗಿದ್ದಾರೆ.

 

 

ದಿಢೀರ್ ಬದಲಾವಣೆ ಈ ಸಮಾಜದಲ್ಲಿ ಅಸಾಧ್ಯ ಅದನ್ನು ಹಂತ ಹಂತವಾಗಿ ಜಾರಿಗೊಳಿಸಬೇಕೆಂಬ ಅದಮ್ಯ ಜಾಣತನ ಅವರಲ್ಲಿ ಎದ್ದು ಕಾಣುತ್ತದೆ. ಜಾತ್ರೆಯನ್ನು ವೈಚಾರಿಕ ಭಾವನೆಗಳ ಬೀಜ ಬಿತ್ತಲು ಬಳಸಿಕೊಳ್ಳುತ್ತಿರುವುದು ಅಭಿನಂದನೀಯ. ಲಕ್ಷಾಂತರ ಜನ ಒಂದೆಡೆ ಸೇರುವುದು, ತರೇವಾರಿ ಊಟ ಮಾಡುವುದು, ಶಿಸ್ತು ಜನರ ಸಂಯಮ ಮತ್ತು ಭಕ್ತಿಯ ಪರಾಕಾಷ್ಠೆಯ ವೈಭವದಾಚೆ ಇರುವ ಉದ್ದೇಶವನ್ನು ಅರ್ಥ ಮಾಡಿಕೊಳ್ಳುವ ಅಗತ್ಯವೂ ಇದೆ. ಕಳೆದ ದಶಕದಿಂದ ಜಾತ್ರೆಯ ಸ್ವರೂಪ ಬದಲಾಗುತ್ತ ಸಾಗಿದೆ. ಆಳವಾದ ವೈಚಾರಿಕತೆಯ ಗೊಡವೆಗೆ ಹೋಗದೆ ಜನ ಸಾಮಾನ್ಯರನ್ನು ಗಮನದಲ್ಲಿಟ್ಟುಕೊಂಡು ಯೋಜನೆಗಳನ್ನು ಹುಟ್ಟು ಹಾಕುತ್ತಿದ್ದಾರೆ.

ಕೆರೆಗಳ ಸಂರಕ್ಷಣೆ, ಗುಣಮಟ್ಟದ ಪ್ರಾಥಮಿಕ ಶಿಕ್ಷಣ, ಆಯುರ್ವೇದ ಚಿಕಿತ್ಸೆ, ಸ್ವಚ್ಚತಾ ಅಂದೋಲನ, ಗ್ರಾಮೀಣ ಪ್ರದೇಶಗಳಲ್ಲಿ ಅಧ್ಯಾತ್ಮ ಪ್ರವಚನ ಮತ್ತು ಪ್ರತಿ ವರ್ಷ ನಡೆಯುವ ಅದ್ದೂರಿ ಜನಜಾತ್ರೆ ಪೂಜ್ಯರ ಎದುರಿಗಿರುವ ಪ್ರಮುಖ ಸಂಗತಿಗಳು. ಹಣಕಾಸಿನ ಮುಗ್ಗಟ್ಟು, ಕ್ಷೀಣಗೊಂಡ ವ್ಯಾಪಾರ ವಹಿವಾಟು, ಒಣ ಬೇಸಾಯದ ಆತಂಕಗಳು, ಪರಿಸರ ವಿನಾಶ ಮತ್ತು ಮೌಢ್ಯತೆ ನಮ್ಮ ಪ್ರದೇಶದ ಪ್ರಮುಖ ಸವಾಲುಗಳು.  ರೈತರ ಸಂಕಷ್ಟದ ಜೊತೆಗೆ ಯುವ ಜನತೆ ಪಟ್ಟಣಗಳಿಗೆ ವಲಸೆ ಹೋಗಿ ದುಡಿಯುವ ಬದಲು ರಾಜಕಾರಣ ಎಂಬ ಮಾಯಾ ಜಿಂಕೆಯ ಬೆನ್ನು ಬಿದ್ದು ಬಿಳಿ ಬಟ್ಟೆ ದಾಸರಾಗಿದ್ದಾರೆ.

 

ಸದರಿ ವ್ಯವಸ್ಥೆ ಸರಿಪಡಿಸುವ ಸಾಮರ್ಥ್ಯ ಮತ್ತು ಉತ್ಸಾಹ ಕೊಪ್ಪಳ ಸ್ವಾಮಿಗಳಿಗೆ ಇದೆ. ಇತ್ತೀಚೆಗೆ ಜಿಲ್ಲೆಯ ಕಾರಟಗಿಯಲ್ಲಿ ಪ್ರವಚನ ಇದ್ದಾಗ ನಿತ್ಯದ ಪಥ ಸಂಚಲನಗಳ ಮೂಲಕ ಸಾಮೂಹಿಕ ಬದಲಾವಣೆ ಮಾಡಲು ಯುವಕರನ್ನು ಬಳಸಿಕೊಂಡು ಕ್ರಿಯಾಶೀಲ ವಾತಾವರಣ ನಿರ್ಮಿಸಿದ್ದಾರೆ.
ನೇರ ಮತ್ತು ವೇಗ ಬದಲಾವಣೆ ಬದಲು ಸೂಕ್ಷ್ಮ ಮಾರ್ಗದ ಹಾದಿ ಹಿಡಿದಿದ್ದಾರೆ.

ಲಕ್ಷ ವೃಕ್ಷೋತ್ಸವ:

ಈ ವರ್ಷದ ಕೊಪ್ಪಳ ಜಾತ್ರೆಯ ಘೋಷವಾಕ್ಯ ಲಕ್ಷ ವೃಕ್ಷೋತ್ಸವ, ಕೊಪ್ಪಳ ಜಿಲ್ಲೆಯ ವಿವಿಧ ಪ್ರದೇಶದಲ್ಲಿ ಸಸಿ ನೆಡುವ ಮೂಲಕ ಪರಿಸರ ಕಾಳಜಿಯ ಮೊದಲ ಹೆಜ್ಜೆ ಇದಾಗಿದೆ.  ಅರಣ್ಯ ಇಲಾಖೆ ಇಂತಹ ನೂರಾರು ಯೋಜನೆಗಳನ್ನು ರೂಪಿಸಿದರು ಗಿಡ ಬೆಳೆಸುವಲ್ಲಿ ಯಶಸ್ವಿಯಾಗದಿರಲು ಜನರ ಅಸಹಕಾರ ಮತ್ತು ಅಸಡ್ಡೆಯೇ ಕಾರಣ. ಈಗ ಪೂಜ್ಯರ ಈ ಯೋಜನೆ ಯಶಸ್ವಿಯಾಗಲು ಜನರ ನಂಬಿಕೆ, ಶ್ರದ್ಧೆ ಮತ್ತು ಭಕ್ತಿ ಕಾರಣವಾಗುತ್ತದೆ. ಪೂಜ್ಯರ ಮಠದಿಂದ ಜಾತ್ರೆಯ ಮೂಲಕ ವೃಕ್ಷೋತ್ಸವ ಆರಂಭ ಭರವಸೆಯ ಆಶಾಕಿರಣ.

ಲಕ್ಷ ದೀಪೋತ್ಸವದ ಹೆಸರಿನಲ್ಲಿ ಅಪಾರ ಪ್ರಮಾಣದ ತಿನ್ನುವ ಅಡಿಗೆ ಎಣ್ಣಿ ಹಾಳಾಗುವುದೊಂದು ಧಾರ್ಮಿಕ ವಿಪರ್ಯಾಸ. ಶ್ರೀಮಂತರು ದೀಪೋತ್ಸವದ ಹೆಸರಿನಲ್ಲಿ ಲಕ್ಷಾಂತರ ರೂಪಾಯಿ ಬೆಲೆ ಬಾಳುವ ಎಣ್ಣೆ ಸುರಿಯುತ್ತಾರೆ ಅದೇ ಎಣ್ಣೆಯನ್ನು ಬಡವರ ಅಡುಗೆಗೆ ದಾನ ಮಾಡುವ ಔದಾರ್ಯ ಮರೆಯುತ್ತಾರೆ. ಇದನ್ನು ನಿಯಂತ್ರಿಸಿ ಇದಕ್ಕೊಂದು ಹೊಸ ಸ್ವರೂಪ ಕೊಡುವ ಸಾಮರ್ಥ್ಯ ನಮ್ಮ ಮಠಗಳಿಗೆ ಮಾತ್ರ ಇದೆ.

 

ದಕ್ಷಿಣ ಕನ್ನಡ ಪ್ರದೇಶದ ದೇವಾಲಯಗಳಲ್ಲಿ ಈ ತರಹದ ಆಡಂಬರ ಸರ್ವೇಸಾಮಾನ್ಯ. ಅದು ಅವರ ಬಲವಾದ ನಂಬಿಕೆ ಮತ್ತು ಸಾಮರ್ಥ್ಯವೂ ಹೌದು. ಅದನ್ನು ಪ್ರಶ್ನಿಸುವ ಅಧಿಕಾರ ನಮಗಿಲ್ಲ. ಏಕೆಂದರೆ ಅವರು ಆರ್ಥಿಕವಾಗಿ ಸದೃಢರಾಗಿದ್ದಾರೆ, ಅಲ್ಲಿ ದುಡಿಯುವ ಶ್ರಮಿಕರಿಗೂ ಲಕ್ಷ ದೀಪೋತ್ಸವಕ್ಕೆ ಎಣ್ಣೆ ಸುರಿಯುವ ಸಾಮರ್ಥ್ಯವಿದೆ. ಆದರೆ ಉತ್ತರ ಕರ್ನಾಟಕದ ಲಕ್ಷಾಂತರ ಬಡವರು ಹೊಟ್ಟೆ ತುಂಬ ಊಟದ ಹುಡುಕಾಟಕ್ಕಾಗಿ ಗುಳೆ ಹೋಗುತ್ತಾರೆ. ಇನ್ನೂ ಅಸಹಾಯಕರು ನೆತ್ತಿಗೆ ಕೊಬ್ಬರಿ ಎಣ್ಣೆ, ಊಟಕ್ಕೆ ಅಡುಗೆ ಎಣ್ಣೆ ಇಲ್ಲದೆ ಪರದಾಡುತ್ತಾರೆ. ಇದು ಆರ್ಥಿಕ ಮತ್ತು ಧಾರ್ಮಿಕ ಅಸಮಾನತೆಯೂ ಹೌದು.

 

 

ಇದನ್ನು ಉಳ್ಳವರು, ಪ್ರಜ್ಞಾವಂತರು,ವಿಚಾರವಾದಿಗಳು, ಧಾರ್ಮಿಕ ಮುಖಂಡರು ಅರ್ಥ ಮಾಡಿಕೊಂಡು ದಯೆ ಮತ್ತು ಮಾನವೀಯ ನೆಲೆಯ ಮೇಲೆ ಧಾರ್ಮಿಕ ಆಚರಣೆಗಳಲ್ಲಿ ತೊಡಗಬೇಕು. ಪ್ರಸ್ತುತ ವೃಕ್ಷೋತ್ಸವ ನೆಪದಲ್ಲಿ ಪರೋಕ್ಷವಾಗಿ ದೀಪೋತ್ಸವ ಅಸಮರ್ಪಕ ಎಂಬ ಹೊಸ ವಿಚಾರಧಾರೆ ಹುಟ್ಟು ಹಾಕಿದ ಕೊಪ್ಪಳ ಸ್ವಾಮೀಜಿಯವರ ಜಾಣತನದ ಮಾನವೀಯತೆಯ ನೂತನ ಸಾಕ್ಷಿ ಪ್ರಜ್ಞೆಯನ್ನು ಗೌರವಿಸುತ್ತೇನೆ.

ಗದುಗಿನ ಮಹಾಭಾರತದಲ್ಲಿ ಕವಿ ಕುಮಾರವ್ಯಾಸ ಹೇಳುವಂತೆ ‘ ಮದುವೆ ಎಂಬುದು ನೆಪ, ನೆಂಟರು ಬರುವದೇ ಮುಖ್ಯ’ ಎಂಬ ವಾಣಿಯಂತೆ, ಸರ್ವರನ್ನು ಒಳಗೊಂಡು ಎಳೆಯುವ ತೇರಿನೋತ್ಸವದಲಿ, ಸಾಮಾಜಿಕ ಸ್ವಾಸ್ಥ್ಯ ಕಾಪಾಡಲು ಲಕ್ಷಾಂತರ ಜನ ಸೇರುವ ಜಾತ್ರೆಗೆ ನೀವು ಬಂದು ದೇಸಿ ಊಟದ ರುಚಿ ಸವಿಯಿರಿ.

 

#ಸಿದ್ದು_ಯಾಪಲಪರವಿ ಕಾರಟಗಿ.
( ಇಂಗ್ಲಿಷ್ ಉಪನ್ಯಾಸಕ )
#123, ಶರಣಾರ್ಥಿ, ಕಳಸಾಪುರ ರಸ್ತೆ
ವಿಶ್ವೇಶ್ವರಯ್ಯ ನಗರ, ಗದಗ-582103.

LEAVE A REPLY

Please enter your comment!
Please enter your name here