ಪ್ರಪಂಚದ ಬಹಳ ಭಾಗಗಳಲ್ಲಿ ಕಿವಿ ಹಣ್ಣನ್ನು ಕಿವಿ ಎಂದು ಚಿಕ್ಕದಾಗಿ ಕರೆಯುತ್ತಾರೆ. ಈ ಕಿವಿ ಹಣ್ಣು ಮೂಲತಃ ಚೀನಾ ದೇಶದ ಹಣ್ಣು. ಅನಾದಿ ಕಾಲದಿಂದಲೂ ಔಷಧಿಗಾಗಿ ಹಾಗೆ ಆರೋಗ್ಯದ ಕಾರಣಕ್ಕಾಗಿ ಈ ಹಣ್ಣು ಪ್ರಸಿದ್ಧಿಯನ್ನು ಪಡೆದಿದೆ. ಹುಳಿ ಮತ್ತು ಸಿಹಿ ಈ ಎರಡು ರುಚಿಯನ್ನು ಹೊಂದಿರುವ ಈ ಹಣ್ಣು ಅನೇಕ ರೀತಿಯ ಪೌಷ್ಟಿಕಾಂಶಗಳನ್ನು ಹೊಂದಿದೆ. ನೋಡಲು ಎಷ್ಟು ಡಿಫರೆಂಟ್ ಆಗಿ ಇದೆಯೋ ಅಷ್ಟೇ ರುಚಿಯಲ್ಲೂ ಕೂಡ ವಿಭಿನ್ನವಾಗಿದೆ. ಕಿವಿ ಹಣ್ಣಿನಲ್ಲಿ ಹಲವಾರು ಜೀವ ಸತ್ವಗಳು ಮತ್ತು ಖನಿಜಗಳು ಇದ್ದು ಆರೋಗ್ಯಕ್ಕೆ ಉತ್ತಮವಾಗಿದೆ. ಈ ಹಣ್ಣನ್ನು ತಿನ್ನುವುದರಿಂದ ನಿಮಗೆ ಎಷ್ಟೆಲ್ಲಾ ಲಾಭಗಳಾಗುತ್ತವೆ ಅನ್ನುವ ಸಂಪೂರ್ಣ ಮಾಹಿತಿ ಇಲ್ಲಿದೆ.
ಕಿವಿ ಹಣ್ಣಿನಲ್ಲಿ ವಿಟಮಿನ್ ‘ಈ’ ಅಂಶವಿದ್ದು ಇದು ಚರ್ಮದ ಆರೋಗ್ಯಕ್ಕೆ ಉತ್ತಮ. ಕಿವಿ ಹಣ್ಣು ಆಂಟಿ ಆಕ್ಸಿಡೆಂಟ್ ಅನ್ನು ಒಳಗೊಂಡಿದ್ದು ಚರ್ಮ ಹೊಳೆಯುವಂತೆ ಮಾಡುತ್ತದೆ. ಹಾಗೂ ಈ ಹಣ್ಣಿನಲ್ಲಿ ವಿಟಮಿನ್ ‘ಸಿ’ ಇದ್ದು. ದೇಹದಲ್ಲಿ ಪ್ರತಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಮತ್ತು ವಯಸ್ಸಾದ ಮೇಲೆ ಸಹಜವಾಗಿ ಕಾಣಿಸಿಕೊಳ್ಳುವ ಕಾಯಿಲೆ ಎಂದರೆ ಅದು ಮರೆವಿನ ಕಾಯಿಲೆ ಹಾಗೂ ನಿದ್ದೆಯ ಸಮಸ್ಯೆ. ಈ ಎರಡು ಕಾಯಿಲೆಗೆ ಈ ಹಣ್ಣು ರಾಮಬಾಣವಾಗಿ ಕೆಲಸ ಮಾಡುತ್ತದೆ.
ಇದರಲ್ಲಿರುವ ಜೀವ ಸತ್ವಗಳು ಮೆದುಳಿನ ನರ ಕೋಶಗಳ ತೊಂದರೆಗಳನ್ನು ನಿವಾರಿಸಿ ವಯಸ್ಸಾದವರಲ್ಲಿ ಕಾಡುವಂತಹ ಮರುವಿನ ಸಮಸ್ಯೆ ಮತ್ತು ನಿದ್ರಾಹೀನತೆ ಅಧಿಕ ರಕ್ತದೊತ್ತಡ ಸಮಸ್ಯೆಯನ್ನು ನಿವಾರಿಸುತ್ತದೆ. ಇನ್ನು ಡೆಂಗ್ಯೂ ಜ್ವರದಿಂದ ಬಳಲುತ್ತಿರುವವರು ಪ್ರತಿನಿತ್ಯ ಕಿವಿ ಹಣ್ಣನ್ನು ತಿನ್ನುವುದರಿಂದ ರಕ್ತಕಣವನ್ನು ಹೆಚ್ಚು ಮಾಡುತ್ತದೆ. ಹೀಗಾಗಿ ಡೆಂಗ್ಯೂ ಸೋಂಕಿಗೆ ಇದು ರಾಮಬಾಣವಾಗಿದೆ ಮತ್ತು ಈ ಹಣ್ಣಿನಲ್ಲಿ ಡಯೆಟ್ರಿ ಫೈಬರ್ ಅಂಶ ಉತ್ತಮವಾಗಿ ಸಿಗುತ್ತದೆ. ಈ ರುಚಿಕರ ಹಣ್ಣಿನಲ್ಲಿರುವ ಡಯೆಟ್ರಿ ಫೈಬರ್ ಅಂಶ ಅನೇಕ ಆರೋಗ್ಯ ಸಮಸ್ಯೆಗಳನ್ನು ಗುಣ ಪಡಿಸುತ್ತದೆ. ಫೈಬರ್ ಅಧಿಕವಾಗಿ ಇರುವುದರಿಂದ ಈ ಹಣ್ಣು ಕೊಲೆಸ್ಟ್ರಾಲ್ ಮಟ್ಟವನ್ನು ಹಾಗೂ ಸಕ್ಕರೆ ಪ್ರಮಾಣವನ್ನು ನಿಯಂತ್ರಣದಲ್ಲಿ ಇಡುತ್ತದೆ.
ಅಷ್ಟೇ ಅಲ್ಲ ಇದು ಹೃದಯ ರೋಗಿಗಳಿಗೂ ಕೂಡ ಸಹಾಯ ಮಾಡುತ್ತದೆ. ಹೌದು ಕಿವಿ ಹಣ್ಣಿನಲ್ಲಿರುವ ಜೀವ ಸತ್ವವು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವುದರ ಮೂಲಕ ದೇಹದಲ್ಲಿರುವ ಬಿಳಿ ರಕ್ತ ಕಣಗಳನ್ನು ಹೆಚ್ಚಿಸುತ್ತದೆ. ದೇಹದಲ್ಲಿ ರಕ್ತ ಚಲನೆಯನ್ನು ಉತ್ತಮವಾಗಿ ನಡೆಯುವುದರಿಂದ ಹೃದಯ ರೋಗಿಗಳು ಈ ಹಣ್ಣನ್ನು ಬಳಸಿದರೆ ಒಳಿತು. ಈ ಹಣ್ಣನ್ನು ಸೇವಿಸುವುದರಿಂದ ಹೃದಯಾಘಾತ ಆಗುವುದನ್ನು ಇದು ತಡೆಯುತ್ತದೆ. ಒಂದೇ ಒಂದು ಕಿವಿ ಹಣ್ಣು ಎಷ್ಟೆಲ್ಲಾ ರೋಗಗಳಿಗೆ ರಾಮಬಾಣ ಎಂದು ತಿಳಿದಿರಲ್ವ. ಇನ್ನಾದರೂ ಈ ಹಣ್ಣನ್ನು ಉಪಯೋಗಿಸಿ.
– ಸುಷ್ಮಿತಾ