‘ಕಿನ್ನರಿ’ ಧಾರಾವಾಹಿ ವೀಕ್ಷಕರಿಗೆ ಆ ಧಾರಾವಾಹಿಯಲ್ಲಿ ನಟಿಸುತ್ತಿದ್ದ ನಕುಲ್ ಗೊತ್ತಿರುತ್ತಾರೆ. ಇವರ ಹೆಸರು ಕಿರಣ್ ರಾಜ್. ಇದಕ್ಕೂ ಮುನ್ನ ಸಾಕಷ್ಟು ಧಾರಾವಾಹಿಗಳಲ್ಲಿ ಅವರು ನಟಿಸಿದ್ದರೂ ಹೆಸರು ನೀಡಿದ್ದು ಮಾತ್ರ ‘ಕಿನ್ನರಿ’. ಕಿನ್ನರಿ ಧಾರಾವಾಹಿಯಲ್ಲಿ ನಟಿಸುತ್ತಿದ್ದಂತೆ ಕಿರಣ್ ಜನರಿಗೆ ಎಷ್ಟು ಪರಿಚಿತರಾದರೋ ಅಷ್ಟೇ ಬೇಗ ಆ ಧಾರಾವಾಹಿಯಿಂದ ಹೊರ ಹೋದರು. ಕಾರಣ ಮುಂಬೈ ನಟಿಯೊಬ್ಬರು ಕಿರಣ್ ಮೇಲೆ ವಂಚನೆ ಆರೋಪ ಮಾಡಿ ದೂರು ನೀಡಿದ್ದು.
ಈ ಘಟನೆಯಿಂದ ನೊಂದು ಕೆಲವು ದಿನಗಳ ಕಾಲ ನಟನೆಯಿಂದ ಕಿರಣ್ ಇದೀಗ ಮತ್ತೆ ಸೆಕೆಂಡ್ ಇನ್ನಿಂಗ್ಸ್ ಆರಂಭಿಸಿದ್ದಾರೆ. ಅದೂ ಕೂಡಾ ‘ಕನ್ನಡತಿ’ ಎಂಬ ಧಾರಾವಾಹಿಯಲ್ಲಿ. ಇದರಲ್ಲಿ ಕಿರಣ್ಗೆ ಜೊತೆಯಾಗಿ ‘ಪುಟ್ಟಗೌರಿ ಮದುವೆ’ ಖ್ಯಾತಿಯ ರಂಜನಿ ರಾಘವನ್ ನಟಿಸಿದ್ದಾರೆ. ಚಿಕ್ಕಂದಿನಿಂದಲೇ ನಟನೆ, ನಿರ್ದೇಶನದತ್ತ ಒಲವಿದ್ದ ಕಿರಣ್ ಮುಂಬೈನಲ್ಲಿ ಫಿಲ್ಮ್ ಮೇಕಿಂಗ್ ಕೋರ್ಸ್ ಮಾಡಿದರು. ನಂತರ ಹಿಂದಿ ಧಾರಾವಾಹಿಗಳಲ್ಲಿ ಸಣ್ಣ ಪುಟ್ಟ ಪಾತ್ರಗಳಲ್ಲಿ ಕಾಣಿಸಿಕೊಂಡರು.
‘ದೇವತೆ’ ಧಾರಾವಾಹಿ ಮೂಲಕ ಕನ್ನಡಿಗರಿಗೆ ಪರಿಚಿತರಾದ ಇವರು ನಂತರ ‘ಕಿನ್ನರಿ’ ಯಲ್ಲಿ ನಟಿಸಲು ಅವಕಾಶ ಪಡೆದರು. ‘ಲೈಫ್ ಸೂಪರ್ ಗುರು’ ರಿಯಾಲಿಟಿ ಶೋನಲ್ಲಿ ಕೂಡಾ ಕಿರಣ್ ಕಾಣಿಸಿಕೊಂಡಿದ್ದಾರೆ. ಆ್ಯಕ್ಟಿಂಗ್ ಮಾತ್ರವಲ್ಲ ಕಿರಣ್ ಒಳ್ಳೆ ಡ್ಯಾನ್ಸರ್ ಕೂಡಾ. ಇದೀಗ ಕನ್ನಡತಿಯ ಜೊತೆಯಾಗಿ ಪ್ರೇಕ್ಷಕರ ಮುಂದೆ ಬರುತ್ತಿದ್ದಾರೆ ಕಿರಣ್.